ಸ್ಪೀಕರ್ ಯುಟಿ ಖಾದರ್ ವಿರುದ್ಧವೇ ಕೇಳಿಬಂತು ಭ್ರಷ್ಟಾಚಾರ ಆರೋಪ: ಬಿಜೆಪಿ ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ

ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಸ್ಪೀಕರ್ ಕಚೇರಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕೆಂದಿರುವ ಅವರು, ಸಿಟ್ಟಿಂಗ್ ಜಡ್ಜ್ ತನಿಖೆಗೆ ಆಗ್ರಹಿಸಿದ್ದಾರೆ. ವಿಧಾನಸಭೆ ಉಪಕರಣಗಳ ಖರೀದಿ ಹಾಗೂ 4.5 ಕೋಟಿ ರೂ. ಪುಸ್ತಕ ಮೇಳದ ವೆಚ್ಚದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆ ಸಮಾಲೋಚಿಸುತ್ತಿದ್ದೇವೆ ಎಂದಿದ್ದಾರೆ.

ಸ್ಪೀಕರ್ ಯುಟಿ ಖಾದರ್ ವಿರುದ್ಧವೇ ಕೇಳಿಬಂತು ಭ್ರಷ್ಟಾಚಾರ ಆರೋಪ: ಬಿಜೆಪಿ ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ
ಯುಟಿ ಖಾದರ್, ಭರತ್ ಶೆಟ್ಟಿ
Edited By:

Updated on: Oct 29, 2025 | 9:59 AM

ಮಂಗಳೂರು, ಅಕ್ಟೋಬರ್ 29: ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ವಿರುದ್ಧವೇ ಈಗ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಸ್ಪೀಕರ್‌ ಹುದ್ದೆಯ ಮೇಲೆ ಭ್ರಷ್ಟಾಚಾರದ ಅನುಮಾನ ಮೂಡಿದೆ. ಸ್ಪೀಕರ್ ಕಚೇರಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು. ನಮಗೆ ಪ್ರಶ್ನೆ ಕೇಳಲು ಅವಕಾಶವಿಲ್ಲ. ಸಿಟ್ಟಿಂಗ್ ಜಡ್ಜ್ ಮೂಲಕ ಈ ಹಗರಣದ ತನಿಖೆ ಆಗಬೇಕು ಎಂದು ಮಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ (Dr. Y Bharat Shetty) ಆಗ್ರಹಿಸಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಅವರು, ವಿಧಾನಸಭಾ ಲಾಂಜ್ ಅನ್ನು ಮಸಾಜ್ ಪಾರ್ಲರ್ ರೀತಿಯಲ್ಲಿ ಮಾಡಿದ್ದಾರೆ. ಎಲ್ಲರಿಗೂ ಉಚಿತ ಆಹಾರ ಎಂದು ಹೇಳುತ್ತಾರೆ, ಆದರೆ ಅದರ ಲೆಕ್ಕಾಚಾರ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಎಲ್‌ಎಚ್ ವರಾಂಡದೊಳಗೆ ನಾಯಿ ತಿರುಗುತ್ತವೆ, ಆದರೆ ಸ್ಪೀಕರ್ ಸ್ಮಾರ್ಟ್ ಲಾಕ್ ಹಾಕಲು ಹೊರಟಿದ್ದಾರೆ. ಯು.ಟಿ. ಖಾದರ್ ಅವರಿಗೆ ‘ಸರ್ವಜ್ಞ ಸಿಂಡ್ರೋಮ್’ ಇದೆ. ಆರ್ಥಿಕ ಶಿಸ್ತು ಇಲ್ಲದೆ ಸರ್ಕಾರ ಮುಳುಗಿದೆ ಎಂದು ಭರತ್ ಶೆಟ್ಟಿ ಕಿಡಿಕಾರಿದ್ದಾರೆ.

ಸ್ಪೀಕರ್ ಹುದ್ದೆಯನ್ನು ಲಾಭದಾಯಕ ಹುದ್ದೆಯನ್ನಾಗಿ ತೋರಿಸಿರುವವರು ಯುಟಿ ಖಾದರ್. ಶಾಸಕರಿಗೆ ಕೊಠಡಿಗಳನ್ನು ಕೊಡುತ್ತಾರೆ. ಆದರೆ ಪ್ಯಾಡ್ ಲಾಕ್ ಹಾಗೂ ಸ್ಮಾರ್ಟ್ ಲಾಕ್ ಹಾಕಿದ್ದಾರೆ. ಇದು ಸ್ಪೀಕರ್ ಆದೇಶದಿಂದ ಆಗಿದೆ ಎಂದು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಧಾನಸೌದಕ್ಕೆ ಉಪಕರಣಗಳ ಖರೀದಿಯಲ್ಲಿ ಅಕ್ರಮ?

ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸೊಲ್ಯೂಷನ್, ಸ್ಟೈನ್ ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಇವುಗಳ ಖರೀದಿಯಲ್ಲಿ ಬೆಲೆ ವ್ಯತ್ಯಾಸ ಇದೆ. ಇವುಗಳನ್ನು ಮಂಗಳೂರು ಮೂಲದವರು ಪೂರೈಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಅವರು ಹೇಳಿದ್ದಾರೆ.

ಪುಸ್ತಕ ಮೇಳದ ಖರ್ಚುಗಳ ಬಗ್ಗೆ ಅನುಮಾನ

ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳದ ಖರ್ಚುಗಳ ಬಗ್ಗೆಯೂ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಐದು ದಿನದ ಪುಸ್ತಕ ಮೇಳಕ್ಕೆ 4.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಒಂದು ದಿನಕ್ಕೆ ಒಂದು ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಆದರೆ ರಸ್ತೆ ನಿರ್ಮಾಣಕ್ಕೆ, ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ವಿಧಾನಸೌಧ ಮೊಗಸಾಲೆಯಲ್ಲಿ ಶಾಸಕರ ವಿಶ್ರಾಂತಿಗೆ ಬಂತು ರಿಕ್ಲೈನರ್ ಚೇರ್

ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವ ಕುರಿತು ಚರ್ಚೆ ಮಾಡುತ್ತಿದ್ದೇವೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲೂ ನಾವು ಈ ವಿಷಯವನ್ನು ಪ್ರಸ್ತಾಪಿಸಲಿದ್ದೇವೆ ಎಂದು ಡಾ. ಭರತ್ ಶೆಟ್ಟಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ