ಲೋಕಸಭೆ ಮತದಾನಕ್ಕಿನ್ನು ಒಂದೇ ದಿನ: ಎಲ್ಲೆಲ್ಲಿ ಮತದಾನ, ಯಾರು ಅಭ್ಯರ್ಥಿಗಳು, ಮತದಾರರೆಷ್ಟು? ವಿವರ ಇಲ್ಲಿದೆ
ಲೋಕಸಭೆ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಶುಕ್ರವಾರ ಮತದಾನ ನಡೆಯಲಿದ್ದು, ಯಾವ್ಯಾವ ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. ಅಖಾಡದಲ್ಲಿ ಅಭ್ಯರ್ಥಿಗಳು ಯಾರಿದ್ದಾರೆ? ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.
ಬೆಂಗಳೂರು, ಏಪ್ರಿಲ್ 25: ಲೋಕಸಭೆ ಚುನಾವಣೆಗೆ (Lok Sabha polls) ಕರ್ನಾಟಕದಲ್ಲಿ (Karnataka) ಮೊದಲ ಹಂತದ ಮತದಾನಕ್ಕಿನ್ನು ಕೇವಲ ಒಂದು ದಿನ ಬಾಕಿ ಇದೆ. ಶುಕ್ರವಾರ ಬೆಳಗ್ಗೆ ಈ ಹೊತ್ತಿಗೆ ಮತದಾನ ಆರಂಭವಾಗಿರಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ (Elecrtin Commission) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಇಂದು ಮನೆ ಮನೆ ಪ್ರಚಾರ ನಡೆಯಲಿದೆ.
ಬೆಂಗಳೂರು ಸೇರಿ ಹಲವು ಕ್ಷೇತ್ರಗಳಲ್ಲಿ ನಿನ್ನೆ ಸಂಜೆಯಿಂದಲೇ ಸೆಕ್ಷನ್ 144 ಜಾರಿ ಆಗಿದೆ. ಮದ್ಯದಂಗಡಿಗಳನ್ನೂ ಕೂಡ ಬಂದ್ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಎಲ್ಲೆಲ್ಲಿ ಮತದಾನ, ಯಾಱರು ಅಭ್ಯರ್ಥಿಗಳು?
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಯಿಂದ ಪಿಸಿ ಮೋಹನ್ ಅಭ್ಯರ್ಥಿ ಆಗಿದ್ದರೆ, ಕಾಂಗ್ರೆಸ್ನಿಂದ ಮನ್ಸೂರ್ ಅಲಿಖಾನ್ ಇದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ, ಕಾಂಗ್ರೆಸ್ನಿಂದ ಸೌಮ್ಯಾ ರೆಡ್ಡಿ ಅಖಾಡದಲ್ಲಿದ್ದಾರೆ. ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ನಿಂದ ರಾಜೀವ್ ಗೌಡ, ಬೆಂಗಳೂರು ಗ್ರಾಮಾಂತರ ಬಿಜೆಪಿಯಿಂದ ಡಾ. ಸಿಎನ್ ಮಂಜುನಾಥ್, ಕಾಂಗ್ರೆಸ್ನಿಂದ ಡಿಕೆ ಸುರೇಶ್, ಕೋಲಾರದಲ್ಲಿ ಜೆಡಿಎಸ್ನಿಂದ ಮಲ್ಲೇಶ್ ಬಾಬು, ಕಾಂಗ್ರೆಸ್ನಿಂದ ಕೆ.ವಿ ಗೌತಮ್, ತುಮಕೂರಿನಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ, ಕಾಂಗ್ರೆಸ್ನಿಂದ ಮುದ್ದಹನುಮೇಗೌಡ, ಮೈಸೂರು-ಕೊಡಗಿನಲ್ಲಿ ಬಿಜೆಪಿಯಿಂದ ಯದುವೀರ್ ಒಡೆಯರ್, ಕಾಂಗ್ರೆಸ್ನಿಂದ ಲಕ್ಷ್ಮಣ್ ಕಣದಲ್ಲಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿಯಿಂದ ಬಾಲರಾಜ್, ಕಾಂಗ್ರೆಸ್ನಿಂದ ಸುನೀಲ್ ಬೋಸ್, ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೆಸ್ನಿಂದ ಪದ್ಮರಾಜ್, ಚಿಕ್ಕಮಗಳೂರು-ಉಡುಪಿಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ, ಕಾಂಗ್ರೆಸ್ನಿಂದ ಜಯಪ್ರಕಾಶ್ ಹೆಗ್ಡೆ, ಹಾಸನದಲ್ಲಿ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ನಿಂದ ಶ್ರೇಯಸ್, ಮಂಡ್ಯದಲ್ಲಿ ಜೆಡಿಎಸ್ನಿಂದ ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಸ್ಟಾರ್ ಚಂದ್ರು, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ.ಕೆ ಸುಧಾಕರ್, ಕಾಂಗ್ರೆಸ್ನಿಂದ ರಕ್ಷಾ ರಾಮಯ್ಯ, ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಗೋವಿಂದ ಕಾರಜೋಳ, ಕಾಂಗ್ರೆಸ್ನಿಂದ ಬಿ.ಎನ್ ಚಂದ್ರಪ್ಪ ಕಣದಲ್ಲಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ, 3 ದಿನ ಮದ್ಯ ಮಾರಾಟ ನಿಷೇಧ
14ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಎಷ್ಟಿದೆ?
ಬೆಂಗಳೂರು ಕೇಂದ್ರ ಕ್ಷೇತ್ರದ ಮತದಾರರ ಸಂಖ್ಯೆ 23,98,910. ಇದರಲ್ಲಿ ಪುರುಷರು 12,36,897, ಮಹಿಳೆಯರು 11,61,548, ಇತರರು 465 ಮತದಾರರು ಇದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 23,17,472. ಪುರುಷರು 11,21,788, ಮಹಿಳೆಯರು 11,95,285, ಇತರರು 650. ಬೆಂಗಳೂರು ಉತ್ತರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 33,30,270, ಪುರುಷರು 18,24,300, ಮಹಿಳೆಯರು 15,05,420, ಇತರರು 550. ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 27,63,910.. ಪುರುಷರು 14,06,042, ಮಹಿಳೆಯರು 13,57,547, ಇತರರು 321. ಮಂಡ್ಯ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 17,79,243. ಪುರುಷರು 8,76,112, ಮಹಿಳೆಯರು 9,02,963, ಇತರರು 168. ಹಾಸನ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,36,610. ಪುರುಷರು 8,63,727, ಮಹಿಳೆಯರು 8,72,840, ಇತರರು 43.. ಚಾಮರಾಜನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 17,78,310.. ಪುರುಷರು 8,78,702, ಮಹಿಳೆಯರು 8,99,501, ಇತರರು 107 ಮಂದಿ ಇದ್ದಾರೆ.
ಮತದಾನದ ಸಮಯ
ನಾಳೆ 14 ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 6 ಗಂಟೆ ನಂತತರ ಮತಗಟ್ಟಿಗೆ ನೋ ಎಂಟ್ರಿ ಬೋರ್ಡ್ ಹಾಕಲಾಗುತ್ತದೆ.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ