ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಜನಸಾಮಾನ್ಯರಲ್ಲಿ ಸಹಜವಾಗಿಯೇ ಆತಂಕ ಮೂಡಲು ಕಾರಣವಾಗಿದೆ. ಒಂದಂಕಿಯಲ್ಲಿ ಬರುತ್ತಿದ್ದ ಪ್ರಕರಣಗಳು ಇದೀಗ ಎರಡಂಕಿಯಲ್ಲಿ ಪತ್ತೆಯಾಗ್ತಿರೋದು ಕಾಫಿನಾಡಿಗರ ನಿದ್ದೆಗೆಡೆಸಿದೆ. ಅಯ್ಯೋ.. ಕೊರೊನಾ ಹೋಗೇ ಬಿಡ್ತು ಅಂತ ನಿರಾಳವಾಗಿದ್ದ ಮಂದಿ ಇದೀಗ ಕಳೆದೊಂದು ವಾರದಿಂದ ಆಗುತ್ತಿರುವ ಬೆಳವಣಿಗೆ ನೋಡಿ ಅಕ್ಷರಶಃ ಕಂಗಲಾಗಿ ಹೋಗಿದ್ದಾರೆ. ಎರಡು ದಿನದ ಹಿಂದೆ ಚಿಕ್ಕಮಗಳೂರು ನಗರದ ದಂಪತಿ ಕೊರೊನಾದಿಂದ ಮೃತಪಟ್ಟಿದ್ರು. ಅದೇ ದಿನ ನಗರದ ಬಸವನಹಳ್ಳಿ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ 400ಕ್ಕೂ ಅಧಿಕ ಮಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು.
ಇದೀಗ ಕೆಲವರ ವರದಿಗಳು ಬಂದಿದ್ದು, ಅದೇ ಶಾಲೆಯ 26 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಮೊದಲು ಸೋಂಕಿತಳಾಗಿದ್ದ ವಿದ್ಯಾರ್ಥಿನಿಯಿಂದಲೇ ಸೋಂಕು ತಗುಲಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಇನ್ನು ಬಸವನಹಳ್ಳಿ ಸರ್ಕಾರಿ ಫ್ರೌಢಶಾಲೆಗೆ ಹೊಂದಿಕೊಂಡೇ ಕಾಲೇಜು ಕೂಡ ಇರೋದ್ರಿಂದ ಸಹಜವಾಗಿಯೇ ಕಾಲೇಜು ವಿದ್ಯಾರ್ಥಿನಿಯರಲ್ಲೂ ಆತಂಕ ಹೆಚ್ಚಾಗಿದೆ. ಇನ್ನೊಂದೆಡೆ ಶೃಂಗೇರಿಯ ವಸತಿ ಶಾಲೆಯೊಂದರ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 47 ಪ್ರಕರಣಗಳು ಪತ್ತೆಯಾಗಿದೆ. ಗುರುವಾರ 51 ಪ್ರಕರಣಗಳು ಪತ್ತೆಯಾಗಿದ್ದವು.
ಜಿಲ್ಲಾಡಳಿತದ ನಿರ್ಲಕ್ಷ್ಯ, ಮತ್ತಷ್ಟು ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಶಂಕೆ
ಅಂದಹಾಗೆ ಇದು ಇಲ್ಲಿಗೆ ಮುಗಿದಿಲ್ಲ, ಸದ್ಯ ಕೆಲವೇ ಕೆಲವು ವಿದ್ಯಾರ್ಥಿನಿಯರ ಕೊರೊನಾ ರಿಪೋರ್ಟ್ ಮಾತ್ರ ಬಂದಿದೆ. ಇನ್ನೂ ಹಲವು ವಿದ್ಯಾರ್ಥಿಗಳ ವರದಿ ಬರೋದು ಬಾಕಿ ಇದೆ. ಹಾಗಾಗಿ ಉಳಿದ ವಿದ್ಯಾರ್ಥಿನಿಯರಲ್ಲೂ ಆತಂಕ ಮನೆ ಮಾಡಿದೆ. ಸಾಮೂಹಿಕವಾಗಿ ವಿದ್ಯಾರ್ಥಿನಿಯರಲ್ಲಿ ಕೊರೊನಾ ಕಾಣಿಸಿಕೊಳ್ಳಲು ಕಾರಣ ಜಿಲ್ಲಾಡಳಿತದ ನಿರ್ಲಕ್ಷ್ಯ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಸರ್ಕಾರ ಕಠಿಣ ನಿಯಮಗಳನ್ನು ಕಳೆದೊಂದು ವಾರದಿಂದ ಜಾರಿ ಮಾಡ್ತಾ ಬಂದ್ರೂ ಜಿಲ್ಲೆಯಲ್ಲಿ ಅದು ಯಾವುದು ಕೂಡ ಪಾಲನೆ ಆಗ್ತಿಲ್ಲ. ಒಂದ್ಕಡೆ ಜನರು ಬೇಕಾಬಿಟ್ಟಿ ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದಾರೆ, ಸಭೆ ಸಮಾರಂಭಗಳು ಕೂಡ ನಿರಾತಂಕವಾಗಿ ನಡೆಯುತ್ತಿವೆ. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸೋದು ದೂರದ ಮಾತೇ ಸರಿ.
ಇತ್ತ ಶಾಲಾ ಕಾಲೇಜುಗಳಲ್ಲಂತೂ ತುಂಬಾ ಕ್ಲೋಸ್ ಆಗಿ ವಿದ್ಯಾರ್ಥಿಗಳು ಒಡನಾಟ ನಡೆಸೋದ್ರಿಂದ ಹೆಮ್ಮಾರಿ ಜಿಲ್ಲೆಯಲ್ಲಿ ಆರ್ಭಟಿಸುತ್ತಿದೆ. ಕಳೆದ ಒಂದು ವಾರದ ಹಿಂದಿನವರೆಗೂ 2, 3, 5 ಈ ರೀತಿ ಬೆರಳೆಣಿಕೆ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದ್ರೆ ಇದೀಗ ದಿಢೀರ್ ಅಂತ 40, 50, 60 ಸಂಖ್ಯೆಯಲ್ಲಿ ಪ್ರಕರಣಗಳು ಬರ್ತಿರೋದು ಕಾಫಿನಾಡಿಗರು ಕಂಗಾಲಾಗುವಂತೆ ಆಗಿದೆ. ಶಾಲಾ ಕಾಲೇಜುಗಳನ್ನ ತೆರೆದು, ಯಾವುದೇ ನಿಯಮ ಪಾಲಿಸದೇ ಇದ್ದಿದ್ದರ ಪರಿಣಾಮವಾಗಿ ಸಾಮೂಹಿಕವಾಗಿ ವಿದ್ಯಾರ್ಥಿನಿಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇನ್ನಾದರೂ ಎಚ್ಚರಿಕೆಯ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.
(ವರದಿ: ಪ್ರಶಾಂತ್ )
ಇದನ್ನೂ ಓದಿ:
Explainer: ಭಾರತದಲ್ಲಿ ಈಗ ಹರಡುತ್ತಿರುವ ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಸಂಪೂರ್ಣ ಭಿನ್ನ: ಏನಿದು 2ನೇ ಅಲೆ? ಏಕಿಷ್ಟು ಆತಂಕ?
Karnataka Covid-19 Update: ಕರ್ನಾಟಕದಲ್ಲಿ ಇಂದು ಹೊಸದಾಗಿ 4,991 ಜನರಿಗೆ ಕೊರೊನಾ ದೃಢ
Published On - 7:32 am, Sat, 3 April 21