ಕೊರೊನಾ ಅಕ್ರಮ? ಆಮೂಲಾಗ್ರ ತನಿಖೆಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸ್ಸು
ಕೊರೊನಾ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಾದ ಹಗರಣ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ತನಿಖೆಯನ್ನು ಪ್ರತಿಷ್ಠಿತ ಸ್ವಾಯತ್ತ ತನಿಖಾ ಸಂಸ್ಥೆ ನಡೆಸಬೇಕು ಎಂದು ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದೆ.

ಬೆಂಗಳೂರು ಜು.18: ಕೊರೊನಾ (Covid) ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಾದ ಹಗರಣ (Scam) ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ತನಿಖೆಯನ್ನು ಪ್ರತಿಷ್ಠಿತ ಸ್ವಾಯತ್ತ ತನಿಖಾ ಸಂಸ್ಥೆ ನಡೆಸಬೇಕು ಎಂದು ಸಚಿವ ಹೆಚ್.ಕೆ.ಪಾಟೀಲ್ (HK Patil) ನೇತೃತ್ವದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (PCA) ವಿಧಾನಸಭೆಯಲ್ಲಿ (Vidhan Sabha) ಪ್ರಸ್ತಾಪಿಸಿದೆ. ಸೋಮವಾರ ವಿಧಾನಸಭೆಯಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆಯು ಕೈಗೊಂಡ ಕ್ರಮಗಳ ಕುರಿತು ಸಮಿತಿಯ ವಿಶ್ಲೇಷಣಾತ್ಮಕ ವರದಿಯನ್ನು ಮಂಡಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖರೀದಿಸಿದ ವೈದ್ಯಕೀಯ ಯಂತ್ರೋಪಕರಣಗಳು, ಔಷಧ, ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿ, ಪಡೆದ ಹಾಸಿಗೆಗಳ ವಿತರಣೆ ಮತ್ತು ಆಕ್ಸಿಜನ್ ಪೂರೈಕೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಹಗರಣ ನಡೆದಿದೆ. ಈ ಮೂಲಕ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಆಗಿನ ರಾಜ್ಯ ಸರ್ಕಾರ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಸ್ವಾಯತ್ತ ತನಿಖಾ ಸಂಸ್ಥೆಯ ಮೂಲಕ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಒತ್ತಾಯಿಸಿದೆ.
ಕೆಲವು ಖಾಸಗಿ ಆಸ್ಪತ್ರೆಗಳು ಸರಕಾರವು ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚು ಲಸಿಕಾ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿರುವುದನ್ನು ಸಮಿತಿಯು ಗಮನಿಸಿದೆ. ಆದುದರಿಂದ ಅಧಿಕ ಶುಲ್ಕ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಪತ್ತೆ ಹಚ್ಚಲು ಇಲಾಖೆಯು ತಂಡಗಳನ್ನು ರಚಿಸಿ, ಅನಿರೀಕ್ಷಿತ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ಇದನ್ನೂ ಓದಿ: ಕೊರೊನಾ ಎಫೆಕ್ಟ್.. 2ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ: ಶಾಕಿಂಗ್ ರಿಪೋರ್ಟ್ ಬಹಿರಂಗ
ಅಧಿಕಾರಿಗಳು ಟೆಂಡರ್‌ಗಳನ್ನು ಆಹ್ವಾನದ ವಿವರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಏಪ್ರಿಲ್ 2021 ರಲ್ಲಿ, ಇಲಾಖೆಯು ಟೆಂಡರ್‌ಗಳನ್ನು ಆಹ್ವಾನಿಸಿತು ಮತ್ತು 6.9 ಲಕ್ಷ ಕೊರೊನಾ ಪರೀಕ್ಷೆ ಕಿಟ್‌ಗಳನ್ನು ಪೂರೈಸಲು ಸುದರ್ಶನ್ ಫಾರ್ಮಾಗೆ ಆದೇಶ ನೀಡಿತ್ತು. ಆದರೆ ಕಂಪನಿಯು ಆರ್ಡರ್ ಮಾಡಿದ ಕಿಟ್‌ಗಳಲ್ಲಿ ಶೇ 50 ಮಾತ್ರ ಪೂರೈಸಿದೆ. ಆದರೂ ಸರ್ಕಾರ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿಲ್ಲವೆಂದು ಸಮಿತಿ ಹೇಳಿದೆ.
ಐವರ್ಮೆಕ್ಟಿನ್ ಮಾತ್ರೆಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವುದಿಲ್ಲ ಎಂದು WHO ಮಾರ್ಚ್ 2021 ರಲ್ಲಿ ಎಚ್ಚರಿಸಿದ್ದರೂ, ಇಲಾಖೆಯು 2021ರ ಏಪ್ರಿಲ್ ಮತ್ತು ಮೇ ನಡುವೆ ಮೂರು ಬಾರಿ 1.10 ಕೋಟಿ ಮಾತ್ರೆಗಳನ್ನು ಖರೀದಿಸಿದೆ. ಆಸ್ಪತ್ರೆಗಳಿಗೆ ಮಾತ್ರೆಗಳ ವಿತರಣೆಯ ಬಗ್ಗೆ ವಿವರಗಳನ್ನು ನೀಡಲು ಇಲಾಖೆ ವಿಫಲವಾಗಿದೆ. ಈ ಮಾತ್ರೆಗಳನ್ನು ನೀಡುವ ಮೂಲಕ ಇಲಾಖೆ ರೋಗಿಗಳ ಜೀವದ ಜತೆ ಆಟವಾಡಿರುವುದು ದುರದೃಷ್ಟಕರ ಎಂದು ಸಮಿತಿ ಪ್ರಸ್ತಾಪಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Wed, 19 July 23



