ಬಳ್ಳಾರಿ: ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಅಲೂರು ತಾಲೂಕಿನ ಕೈರುಪ್ಪಲ ಗ್ರಾಮದಲ್ಲಿ ಇತ್ತೀಚೆಗೆ ಪರಸ್ಪರ ಸಗಣಿ ಕುಳ್ಳು ಎರಚಾಟ ನಡೆದಿದ್ದು, ಈ ಎರಚಾಟದ ವೇಳೆ ಅಂದಾಜು 60 ಮಂದಿ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯುಗಾದಿ ಪಾಡ್ಯದ ಮಾರನೇ ದಿನವೇ ನೆರೆಯ ಆಂಧ್ರ ಪ್ರದೇಶದ ಈ ಕೈರಪ್ಪಲ ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇಗುಲದ ಭಕ್ತರ ನಡುವೆ ನಡೆಯುವ ಈ ಕಾಳಗದಲ್ಲಿ ಸಗಣಿಯಿಂದ ತಟ್ಟಿ, ಬಿಸಿಲಿನಲ್ಲಿ ಒಣಗಿಸಿದ ಕುಳ್ಳುಗಳನ್ನ ಭಾನತ್ತೆರಕ್ಕೆ ತೂರಾಟ ನಡೆಸುವುದು ಹಾಗೂ ಪರಸ್ಪರ ಎರಚಾಟ ನಡೆಸುವುದು ಇಲ್ಲಿನ ವಾಡಿಕೆ. ಈ ಆಚರಣೆಯಲ್ಲಿ ಸಹಸ್ರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.
ಮಹಾಮಾರಿ ಕೊರೊನಾ ಎರಡನೇ ಅಲೆಯ ಭೀತಿಯಲ್ಲೂ ಕೂಡ ಪರಸ್ಪರ ಸಗಣಿ ಕುಳ್ಳು ಎರಚಾಟ ನಡೆದಿದ್ದು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಬಡಿದಾಟ ನಡೆಸಿಕೊಂಡಿರುವುದು ಈಗ ಬಹುಚರ್ಚಿತ ವಿಷಯವಾಗಿದೆ. ಇದು ಕೇವಲ ಮೇಲ್ನೋಟಕ್ಕೆ ಮಾತ್ರ ಸೆಗಣಿ ಕುಳ್ಳು ಎರಚಾಟವಾದರು ಒಳಗೊಳಗೆ ಕೆಲ ಭಕ್ತರು ಅಸ್ತ್ರ ಪ್ರಯೋಗ ಕೂಡ ಮಾಡುತ್ತಾರೆ ಎನ್ನುವುದು ಮೂಲಗಳಿಂದ ತಿಳಿದು ಬಂದಿದೆ.
ಈ ಕಾಳಗವನ್ನು ನೋಡಲು ಕರ್ನಾಟಕದ ನೆರೆಯ ಪ್ರದೇಶಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಸೇರಿದಂತೆ ಇನ್ನಿತರೆ ಕಡೆಗಳಿಂದ ಸಹಸ್ರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಪೂರ್ವಿಕರ ಕಾಲದಿಂದಲೂ ಈ ಆಚರಣೆ ಇದ್ದು, ವೀರ ಭದ್ರೇಶ್ವರ ಸ್ವಾಮಿ ಯುಗಾದಿ ಹಬ್ಬದ ಮಾರನೇ ದಿನ ವಿಹಾರ ಮುಗಿಸಿ ವಾಪಾಸ್ ಬರುವಾಗ ಭದ್ರಕಾಳಿ ಭಕ್ತರು ಸೆಗಣಿ ಎರಚುತ್ತಾರೆ. ಇದಕ್ಕೆ ಪ್ರತಿಯಾಗಿ ವೀರಭದ್ರೇಶ್ವರ ಸ್ವಾಮಿಯ ಭಕ್ತರು ಕೂಡ ಸೆಗಣಿ ಎರಚುತ್ತಾರೆ. ಇದೊಂದು ಪಾರಂಪರಿಕ ಹಬ್ಬವಾಗಿದ್ದು, ಪ್ರತಿವರ್ಷ ಹೀಗೆ ನಡೆದುಕೊಂಡು ಬರುತ್ತದೆ. ಈ ಆಚರಣೆ ವೇಳೆ ಗಲಾಟೆಯಾಗುವುದು ಸಹಜ ಎನ್ನುವುದು ಇಲ್ಲಿನ ಸ್ಥಳಿಯರ ಮಾತು.
ಇದನ್ನೂ ಓದಿ:
ಯಾದಗಿರಿ ಜಿಲ್ಲೆಯಲ್ಲಿದೆ 101 ದೇವಸ್ಥಾನ; ಪುರಾಣ ಪ್ರಸಿದ್ಧ ದೇವಾಲಯವನ್ನು ಸಂರಕ್ಷಿಸುವಂತೆ ಗ್ರಾಮಸ್ಥರ ಒತ್ತಾಯ
ಯುಗಾದಿ ಆಚರಣೆ; ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಮಲೆ ಮಹದೇಶ್ವರ ದೇವಾಲಯದಲ್ಲಿ ಭಕ್ತರಿಗೆ ನಿರ್ಬಂಧ
(Cow dung fight between villagers and 60 people injured in Ballari)
Published On - 1:29 pm, Sun, 18 April 21