ಮಂಗಳೂರು: ನೆಟ್ಫ್ಲಿಕ್ಸ್ನ (Netflix) ಡಾಕ್ಯುಮೆಂಟರಿ ಸೀರೀಸ್ನಲ್ಲಿ ಬರುತ್ತಿರುವ ಕ್ರೈಂ ಸ್ಟೋರೀಸ್ನಲ್ಲಿ ಇಂಡಿಯಾ ಡಿಟೆಕ್ಟಿವ್ಸ್ನ (Crime Stories: India Detectives) ಟ್ರೈಲರ್ ಈಗ ಎಲ್ಲಾ ಕಡೆ ಭಾರೀ ಹವಾ ಸೃಷ್ಟಿಸಿದೆ. ಒಟ್ಟು ನಾಲ್ಕು ಕ್ರೈಂ ಸ್ಟೋರಿಗಳನ್ನು ಆಧರಿಸಿ ಈ ಡಾಕ್ಯುಮೆಂಟರಿಯನ್ನು (India Detectives Trailer) ಮಾಡಲಾಗಿದೆ. ಈ 4ರಲ್ಲಿ ಮೂರು ಕ್ರೈಂ ಸ್ಟೋರಿ ಅಂದು ಬೆಂಗಳೂರು ಉತ್ತರ ಉಪ ವಿಭಾಗದಲ್ಲಿ ನಡೆದ ಸ್ಟೋರಿಗಳಾಗಿದೆ. 2019-20ರ ಮಧ್ಯದಲ್ಲಿ ನಡೆದ ಈ ಕ್ರೈಂ ಸ್ಟೋರಿಗಳು ಅಂದು ಸಮಾಜವನ್ನು ಬೆಚ್ಚಿ ಬೀಳಿಸಿತ್ತು. ಈ ಮೂರು ಘಟನೆ ನಡೆದಿದ್ದ ಉತ್ತರ ವಿಭಾಗದ ಅಂದಿನ ಡಿಸಿಪಿ ಆಗಿದ್ದವರು ಇಂದು ಮಂಗಳೂರು ಪೊಲೀಸ್ ಕಮಿಷನರ್ ಆಗಿರುವ ಎನ್. ಶಶಿಕುಮಾರ್ (N Shashikumar). ಅಂದಿನ ಕ್ರೈಂಗಳು ಮತ್ತು ಈ ಡಾಕ್ಯುಮೆಂಟರಿ ಶೂಟಿಂಗ್ ವಿಚಾರದ ಬಗ್ಗೆ ಟಿವಿ9 ಡಿಜಿಟಲ್ ಜೊತೆ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆ ಮತ್ತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಮೂರು ಕ್ರೈಂಗಳು ಈ ವೆಬ್ ಸೀರಿಸ್ನ ಮೇಜರ್ ರೋಲ್ ಆಗಿವೆ. ಮೊದಲನೆಯದು ತನ್ನ ಮಗಳನ್ನೇ ತಾಯಿ ಕೊಲೆ ಮಾಡೋ ಸ್ಟೋರಿ. ಇದು ತುಂಬಾ ಸೆನ್ಸೇಷನ್ ಉಂಟು ಮಾಡಿದ್ದ ಸ್ಟೋರಿ. ಮಗಳನ್ನು ಕೊಲ್ಲಲು ತಾಯಿ ಆಡಿದ ನಾಟಕ ಮತ್ತು ಪೊಲೀಸರು ಅದನ್ನು ಮಾಡಿದ ತನಿಖೆ ಅತೀ ರೋಚಕವಾಗಿತ್ತು. ಅಂದು ನನಗೆ ಒಂದು ಕರೆ ಬರುತ್ತೆ. ನಮ್ಮ ಇನ್ಸ್ಪೆಕ್ಟರ್ ಕರೆ ಮಾಡಿ ಕೊಲೆ ವಿಚಾರ ಹೇಳುತ್ತಾರೆ. ಈ ಪ್ರಕರಣ ತುಂಬಾ ಟ್ರಿಕ್ ಆಗಿ ಕಂಡುಬಂದಿತ್ತು. ಆದ್ದರಿಂದ ಸ್ಟಾರ್ಟಿಂಗ್ ಟು ಎಂಡಿಗ್ ಪಾಯಿಂಟ್ವರೆಗೂ ಸಿಸಿಟಿವಿ ಫಾಲೋ ಮಾಡಲು ಹೇಳಿದ್ದೆವು. ಸಿಕ್ಕ ಒಂದೇ ಒಂದು ಸುಳಿವಿಂದ ಪ್ರಕರಣ ತುಂಬಾ ಅಚ್ಚುಕಟ್ಟಾಗಿ ಟ್ರೇಸ್ ಔಟ್ ಆಗಿತ್ತು. ಇಂತಹ ಪ್ರಕರಣದಲ್ಲಿ ಒಂದು ಸ್ವಲ್ಪ ದಿಕ್ಕು ಬದಲಾದರೂ ಅದು ಎಲ್ಲಿಗೋ ಹೋಗಿ ನಿಲ್ಲುತ್ತದೆ, ಆದ್ದರಿಂದ ಅಚ್ಚುಕಟ್ಟಾಗಿ ಅದನ್ನು ಮುಗಿಸಿದ್ದೇವೆ ಎಂದು ಹೇಳುತ್ತಾರೆ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್.
ಎರಡನೇ ಕ್ರೈ ಒಂದು ಬೀದಿ ಬದಿ ವಾಸ ಮಾಡೋ ನಿರ್ಗತಿಕರ ಸುತ್ತ ನಡೆದ ಘಟನೆ. ಅದೊಂದು ಫ್ಲೈ ಓವರ್ ಕೆಳಗೆ ವಾಸಿಸುತ್ತಿದ್ದ ಕುಟುಂಬ. ಅಲ್ಲಿ ಜನರ ಜೀವಕ್ಕೆ ಬೆಲೆ ಇಲ್ಲದಂತಹ ಸ್ಥಳ. ಅವರಿಗೆ ಯಾರು ಏನು ಮಾಡಿದ್ರು ಪೊಲೀಸರು ಬಿಟ್ರೆ ಇನ್ಯಾರೂ ಕೇಳೋರು ಇರುವುದಿಲ್ಲ. ಅಂಥದ್ದೊಂದು ಸ್ಥಿತಿಯಲ್ಲಿದ್ದ ಆ ಬೀದಿ ಬದಿ ಜೀವಿಸುವ ಕುಟುಂಬದ ಒಂದು ಮಗು ಕಿಡ್ನಾಪ್ ಆಗುತ್ತದೆ. ಮಗು ಮಾರಾಟಕ್ಕಾಗಿ ಪರಿಚಯವಿದ್ದವರೇ ಈ ಕೃತ್ಯ ಎಸಗಿರುತ್ತಾರೆ. ಇದೊಂದು ರೋಚಕ ಕ್ರೈಂ ಸ್ಟೋರಿಯಾಗಿತ್ತು. ಇಲ್ಲಿ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಇಲ್ಲದೆ ಆಗಿದ್ದ ಪ್ರಕರಣದಲ್ಲಿ ಸಿಕ್ಕ ತಿರುವುಗಳು ಇಲಾಖೆಯನ್ನೇ ಅಚ್ಚರಿಗೆ ತಳ್ಳಿತ್ತು. ಇನ್ನು 35 ವರ್ಷದ ಪುರುಷನ ಕೊಲೆ ಪ್ರಕರಣ ಕೂಡ ತುಂಬಾ ಕ್ಲಿಷ್ಟಕರವಾಗಿತ್ತು. ಅಲ್ಲಿ ಭೀಕರತೆ ಕೂಡ ಇತ್ತು. ಕ್ರೈಂಗಳಲ್ಲಿ ವಿಭಿನ್ನವಾದ ಕ್ರೈಂ ಇವಾಗಿದ್ದು ಇವುಗಳ ಪತ್ತೆ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ ಅಂತಾರೆ ಶಶಿಕುಮಾರ್.
ಮಂಗಳೂರಿನಲ್ಲಿ ಟಿವಿ9 ಡಿಜಿಟಲ್ ಟೀಂ ಜೊತೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಬಗ್ಗೆ ಮಾತಿಗಿಳಿದಾಗ ಮೊದಲು ಹೇಳಿದ್ದೇ ಈ ಮಾತು. ನೆಟ್ಫ್ಲಿಕ್ಸ್ ತಂಡ ನಮ್ಮ ಜೊತೆ ಬಂದು ಏನೇನೊ ಮಾಡುತ್ತಿದ್ದರು. ಏನೇನೊ ಶೂಟಿಂಗ್ ಮಾಡ್ತಾ ಇದ್ದರು. ಆದ್ರೆ ಅವರು ಅದೆಷ್ಟು ಫರ್ಫೆಕ್ಟ್ ಆಗಿ ಮಾಡಿದ್ದಾರೆ ಅಂತ ಈ ಟ್ರೈಲರ್ ನೋಡಿದ ಮೇಲೆ ಗೊತ್ತಾಯ್ತು. ಈ ತಂಡದಲ್ಲಿ ಲಂಡನ್ ನಿಂದ ಕ್ಲಾರಾ ಮತ್ತು ಜಾನ್ ಬಂದಿದ್ದರು. ಅವರ ಜೊತೆ ರಿಚಾ, ನವೀನ್ ಸೇರಿ ಐದಾರು ಜನರು ಬಂದಿದ್ದರು. ಕಂಟ್ರೋಲ್ ರೂಂನಿಂದ ಕರೆ ಬಂದಿತ್ತು. ಅಂದಿನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕರೆ ಮಾಡಿ ಹೀಗೆ ನಾಲ್ಕೈದು ಜನರು ಬರುತ್ತಾರೆ. ಅವರಿಗೆ ಸಂಪೂರ್ಣ ಸಹಕಾರ ಕೊಡಿ ಅಂತ ಹೇಳಿದರು. ಸುಮಾರು 6ರಿಂದ 8 ತಿಂಗಳ ಕಾಲ ಆ ತಂಡ ರಾತ್ರಿ ಹಗಲು ಎನ್ನದೆ ನಮ್ಮ ಜೊತೆ ಇದ್ದರು. ದಿನದ 24 ಗಂಟೆ ಕೂಡ ನಮ್ಮ ಜೊತೆ ಕ್ರೈಂ ನಡೆದ ಜಾಗಗಳಿಗೆ ಬರುತ್ತಿದ್ದರು. ಪ್ರೀ ಪ್ರೋಡಕ್ಷನ್ ಗೆ ಇಷ್ಟು ಸಮಯ ತೆಗೆದುಕೊಂಡವರು ಪೋಸ್ಟ್ ಪ್ರೊಡಕ್ಷನ್ ಗೆ ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಜಾನ್ ಎಂಬಾತ ರಂಗ್ ದೇ ಬಸಂತಿ ಚಿತ್ರದಲ್ಲಿ ಆಕ್ಟಿಂಗ್ ಮಾಡಿದ್ದ. ಇವರ ತಂಡ ತುಂಬಾ ಚೆನ್ನಾಗಿತ್ತು. ಎಷ್ಟು ಡೆಡಿಕೇಷನ್ ಆಗಿ ಕೆಲಸ ಮಾಡುತ್ತಿದ್ರು ಅಂದರೆ ಕ್ರೈಂ ನಡೆದ ವೇಳೆ ಪೊಲೀಸ್ ಠಾಣೆಯ ಚೇರ್ ಗಳ ಮೇಲೇ ಮಲಗುತ್ತಿದ್ದರು. ರಾತ್ರಿಯಿಡೀ ಕೇಸ್ ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ ಒಂದು ಕೇಸ್ ನ ತರೆಹಿಂದೆ ಯಾರು ಕೆಲಸ ಮಾಡುತ್ತಾರೆ ಅವರನ್ನು ಕೂಡ ಮಾತನಾಡಿಸುತ್ತಿದ್ದರು.
ಘಟನೆಗಳನ್ನು ಫೀಲ್ ಮಾಡಿದ್ರಿಂದ ಮೂಡಿದ ದೃಶ್ಯಗಳು:
ಚಿತ್ರತಂಡ ಕೇವಲ ಕೇಸ್ಗಳನ್ನು ಚಿತ್ರಕ್ಕಾಗಿ ಮಾತ್ರ ನೋಡುತ್ತಿರಲಿಲ್ಲ. ಆ ಘಟನಾವಳಿಗಳ ಬಗ್ಗೆ ಫೀಲ್ ಮಾಡುತ್ತಿದ್ದರು. ಅದೆಷ್ಟೋ ಕಡೆ ಚಿತ್ರ ತಂಡದ ಸದಸ್ಯರು ಕಣ್ಣೀರನ್ನು ಹಾಕುವುದನ್ನು ನಾನು ಗಮನಿಸಿದ್ದೇನೆ. ಒಂದೊಂದು ಬಾರಿ ಎಮೋಷನಲಿ ಡಿಸ್ಟರ್ಬ್ ಆಗಿದ್ದೂ ಉಂಟು ಅಂತಾರೆ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್. ಚಿತ್ರತಂಡ ಒಂದು ಕ್ರೈಂ ನಡೆದಾಗ ಪ್ರತಿಯೊಂದು ಹಂತದಲ್ಲೂ ನಮ್ಮ ಜೊತೆಗೆ ಇರುತ್ತಿದ್ದರು. ಆರೋಪಿಗಳನ್ನು ಚೇಸ್ ಮಾಡಿ ಹಿಡಿಯುವಾಗ ಕೂಡ ಆ ತಂಡವನ್ನು ನಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದೆವು. ಬಳಿಕ ತನಿಖೆಯಿಂದ ಹಿಡಿದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸುವುದು. ಬಳಿಕ ಪತ್ರಿಕಾಗೋಷ್ಠಿ ಮಾಡುವವರೆಗೂ ನಮ್ಮ ಜೊತೆ ಇರುತ್ತಿದ್ದರು. ಸಂತ್ರಸ್ತರನ್ನು, ಅವರ ಸಂಬಂಧಿಕರನ್ನು ಮಾತನಾಡಿಸುತ್ತಿದ್ದರು. ತನಿಖೆಗೆ ಸಹಕರಿಸಿದವರನ್ನು ಕೂಡ ಮಾತನಾಡಿಸುತ್ತಿದ್ದರು. ಕಿಡ್ನಾಪ್ ಆದ ಮಗುವಿನ ತಾಯಿ ಜೊತೆ ಮಾತನಾಡುವಾಗ ಅವರೆಲ್ಲಾ ತುಂಬಾ ಡಿಸ್ಟರ್ಬ್ ಆಗಿದ್ದರು. ಇದನ್ನು ನೋಡಿದ ಪೊಲೀಸರ ಕಣ್ಣು ಕೂಡ ಒದ್ದೆಯಾಗಿತ್ತು.
ಪೊಲೀಸ್ ವೃತ್ತಿ ಹಾಗೂ ಜೀವನದ ಚಿತ್ರಣ:
ಈ ಡಾಕ್ಯುಮೆಂಟರಿ ಟೀಂ ಕೇವಲ ಪೊಲೀಸರ ಕೆಲಸದಲ್ಲಷ್ಟೆ ಭಾಗಿಯಾಗಿಲ್ಲ. ಬದಲಿಗೆ ಇದು ಪೊಲೀಸರ ವೈಯುಕ್ತಿಕ ಜೀವನವನ್ನು ಇಣುಕಿ ನೋಡಿದೆ. ಅವತ್ತು ಹಾಸನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿಯೊಬ್ಬರ ಮದುವೆ ಇತ್ತು. ಆ ಮದುವೆಗೂ ಕೂಡ ಈ ತಂಡ ಭಾಗವಹಿಸಿತ್ತು. ಪೊಲೀಸರು ವೃತ್ತಿ ಬದುಕಿನಲ್ಲಿ ಹೇಗಿರುತ್ತಾರೆ. ಅಲ್ಲಿ ನೋಡಿದ ಕ್ರೈಂ ನನಪಿನಲ್ಲಿ ತಮ್ಮ ಕುಟುಂಬದ ಜೊತೆ ಹೇಗಿರುತ್ತಾರೆ. ಎಮೋಷನ್ ಗಳನ್ನು ಹೇಗೆ ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಎಂಬುದನ್ನು ಅಧ್ಯಯನ ಮಾಡಿತ್ತು. ಇನ್ನು ಪೊಲೀಸರಿಗೆ ಇರುವ ಕಷ್ಟಗಳೇನು ಎಂಬುದರ ಬಗ್ಗೆ ಕೂಡ ಅಧ್ಯಯನ ಮಾಡಿದೆ.
ಈ ಕಿರುಚಿತ್ರದ ಚಿತ್ರೀಕರಣ ಲೈವ್ ಆಗೇ ನಡೆದಿದ್ದು. ಎಲ್ಲೂ ಕೂಡ ರಿಕ್ರೇಯೇಟ್ ಮಾಡಿಲ್ಲ. ಆಗಿನ ಕ್ರೈಂ ಸೀನ್ ಹೇಗಿರುತ್ತದೆ ಹಾಗೆ ಶೂಟಿಂಗ್ ಮಾಡಕೊಳ್ಳುತ್ತಿದ್ದರು. ಅದನ್ನು ಹೇಗೆ ಪ್ರಾಜೆಕ್ಟ್ ಮಾಡುತ್ತಾರೆ ಎಂಬುದು ಮುಖ್ಯವಾದ ವಿಷಯ. ಒಂದೊಂದು ಲಾಗ್ನಲ್ಲಿ ನನ್ನ ಸಂದರ್ಶನ ದೀರ್ಘವಾಗಿರುತ್ತಿತ್ತು. ಮೂರು ಲಾಗ್ ನಿಂದ ನನ್ನದೇ ಸೆವೆನ್ ಹವರ್ಸ್ ಆಗಿದೆ ಅಂತಾರೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್. ಬಹಳ ಆಸಕ್ತಿ ಇಟ್ಟು ಅವರು ಕೆಲಸ ಮಾಡಿದರು. ಟ್ರೈಲರ್ ಇಷ್ಟು ಚೆನ್ನಾಗಿ ಮೂಡಿ ಬಂದಿದೆ ಅಂದರೆ ಸೀರೀಸ್ಗೆ ಇನ್ನು ಕಾತುರರಾಗಿದ್ದೇವೆ.
(ವಿಶೇಷ ಬರಹ: ಪೃಥ್ವಿರಾಜ್ ಬೊಮ್ಮನಕೆರೆ)
ಇದನ್ನೂ ಓದಿ: ನೆಟ್ಫ್ಲಿಕ್ಸ್, ಪ್ರೈಮ್ ಬಳಕೆದಾರರಿಗೆ ಸಿಹಿ ಸುದ್ದಿ; ಮುಂದಿನ ತಿಂಗಳಿಂದ ಬರ್ತಿದೆ ಹೊಸ ನಿಯಮ
(Crime Stories: India Detectives to stream on Netflix IPS Officer N Shashikumar shared Bengaluru Crime Series Shooting Experience)
Published On - 8:30 pm, Tue, 14 September 21