ಬೆಂಗಳೂರು, ಜನವರಿ 13): ಕರ್ನಾಟಕ ಕಾಂಗ್ರೆಸ್‌ನಲ್ಲಾಗುತ್ತಿರುವ ರಾಜ್ಯಕೀಯ ಬೆಳವಣಿಗೆ ಮಧ್ಯೆ ಇಂದು (ಜನವರಿ 13) ಬೆಂಗಳೂರಿನ ಸಂಜೆ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಭಾಗಿಯಾಗಿದ್ದರು. ಡಿನ್ನರ್ ಮೀಟಿಂಗ್ ನಡೆಸಲು ಸುರ್ಜೇವಾಲರ ಅನುಮತಿ ಕೇಳಲು ಕೆಲ ಸಚಿವರು ಸಜ್ಜಾಗಿರುವ ಜೊತೆಗೆ ಸಭೆಯಲ್ಲಿ ಅನೇಕ ಗೊಂದಲಗಳ ಬಗ್ಗೆ ಚರ್ಚೆಗಳಾದವು. ಅದರಲ್ಲೂ ಸಿಎಲ್ಪಿ ಸಭೆಯಲ್ಲಿ ಬೆಳಗಾವಿ ಡಿಸಿಸಿ ಕಚೇರಿ ವಿಚಾರವಾಗಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ವಾಗ್ಯುದ್ಧ ನಡೆದಿದೆ.
ಡಿಕೆ ಶಿವಕುಮಾರ್ ಅವರು ತಮ್ಮ ಭಾಷಣದ ವೇಳೆ ಬೆಳಗಾವಿ ಡಿಸಿಸಿ ಕಚೇರಿ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ದಾರೆ ಎಂದರು. ಇದಕ್ಕೆ ಸಿಟ್ಟಿಗೆದ್ದು ಸಭೆಯಲ್ಲಿ ಎದ್ದು ಬಂದು ಮೈಕ್ ಹಿಡಿದ ಸತೀಶ್ ಜಾರಕಿಹೊಳಿ, ಈ ಹಿಂದೆಯೂ ಡಿಕೆ ಶಿವಕುಮಾರ್ ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಇದೇ ವಿಚಾರಕ್ಕೆ ಹೊಗಳಿದ್ರು. ಪದೇ ಪದೇ ನಮಗೆ ಹ್ಯುಮಿಲಿಯೇಷನ್ ಆಗುತ್ತಿದೆ. ರಮೇಶ್ ಜಾರಕಿಹೊಳಿ ಜಾಗ ನೀಡಿದ್ದು, ಹಣ ನೀಡಿದ್ದು ನಾನು ಎಂದು ನೇರವಾಗಿ ಗುಡುಗಿದರು. ಅಲ್ಲದೇ ಪದೇ ಪದೇ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ರು ಅಂತ ಹೇಳಿ ಇತರರನ್ನ ಅವಮಾನಿಸಬೇಡಿ. ನಾನು 3 ಕೋಟಿ ಸ್ವಂತ ದುಡ್ಡು ಖರ್ಚು ಮಾಡಿದ್ದೇನೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ಬೆಳಗಾವಿಯಲ್ಲಿ ಪಕ್ಷದ ಕಚೇರಿ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ನಡುವೆ ಮಾತಿನ ವಾಗ್ಯುದ್ಧ ನಡೆಯಿತು. ಹಲವು ವರ್ಷಗಳಿಂದ ಉಸ್ತುವಾರಿ ಸಚಿವರಾಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಕಚೇರಿಯೇ ಇರಲಿಲ್ಲ. ನಾನು ಮೊದಲ ಬಾರಿ ಸಚಿವೆಯಾಗಿ, ಕಡಿಮೆ ಟೈಂನಲ್ಲಿ ಕಚೇರಿ ನಿರ್ಮಿಸಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸಚಿವೆ ಮಾತಿಗೆ ಸತೀಶ್ ಜಾರಕಿಹೊಳಿ ಗರಂ ಆಗಿದ್ದು, ಜಾಗ ಕೊಟ್ಟಿದ್ದು ನಾವು, ಬಳಿಕ ಕಚೇರಿ ನಿರ್ಮಾಣವಾಗಿದೆ ಎಂದು ತಿರುಗೇಟು ನೀಡಿದರು.
ಇಷ್ಟಕ್ಕೆ ಸುಮ್ಮನಾಗದ ಲಕ್ಷ್ಮೀ ಹೆಬ್ಬಾಳ್ಕರ್, ಕಚೇರಿ ಕಟ್ಟುವಲ್ಲಿ ನಾನೂ ಸಾಕಷ್ಟು ಕೆಲಸ ಮಾಡಿದ್ದೇನೆ. ಸುಮಾರು 7 ಕೋಟಿ ರೂಪಾಯಿಯಷ್ಟು ಹಣ ಬಾಕಿ ಇತ್ತು. ಅದೆಲ್ಲ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ತೀರಿಸಿದ್ದೇನೆ. ಕರೆಂಟ್ ಬಿಲ್, ವಾಟರ್ ಬಿಲ್ ಹೀಗೆ ಸಾಕಷ್ಟು ಬಾಕಿ ಇತ್ತು. ಅದೆಲ್ಲವನ್ನೂ ನಾನು ತೀರಿಸಿದ್ದೇನೆ. ಪಕ್ಷ ಇದನ್ನೂ ಗಮನಿಸುತ್ತೆಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿಗೆ ಕೌಂಟರ್ ನೀಡಿದರು.
ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ಮಾತಿನ ಸಮರ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಡಿಕೆ ಶಿವಕುಮಾರ್ ಹಾಗೂ ಉಳಿದ ನಾಯಕರು ಬ್ರೇಕ್ ಹಾಕಿದರು. ಅಲ್ಲದೇ ಇದೇ ರೀತಿ ಉಳಿದ ಜಿಲ್ಲೆಯಲ್ಲೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಡಿಕೆಶಿವಕುಮಾರ್ ಹಾಗೂ ಸುರ್ಜೆವಾಲಾ ಶಾಂತಿ ಮಂತ್ರಪಠಿಸಿದರು.
ಇನ್ನು ಸಿಎಂ ಕುರ್ಚಿ ಸಂಬಂಧ ಬಹಿರಂಗ ಹೇಳಿಕೆ ನೀಡುವ ಶಾಸಕರು, ಸಚಿವರಿಗೆ ಸುರ್ಜೆವಾಲಾ ಅವರು ಶಾಸಕಾಂಗ ಸಭೆಯಲ್ಲೂ ಖಡಕ್ ಸೂಚನೆ ನೀಡಿದ್ದಾರೆ. ಏನೇ ಗೊಂದಲಗಳಿದ್ದರೂ ನಾಲ್ಕು ಗೋಡೆಯ ಮಧ್ಯೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುವಂತೆ ಶಾಸಕರಿಗೆ ತಾಕೀತು ಮಾಡಿದ್ದಾರೆ. ಇನ್ನು ಸುರ್ಜೆವಾಲಾ ಸುರ್ಜೆವಾಲಾ ಮಾತಿಗೆ ಸಿಎಂ ಸಿದ್ದರಾಮಯ್ಯ ದನಿಗೂಡಿಸಿದ್ದು. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ, ಅದರಂತೆ ಎಲ್ಲರೂ ನಡೆಯಬೇಕು ಎಂದಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬದಲಾವಣೆ ಯಾವುದು ಇಲ್ಲ ಎಂದು ಸಿಎಲ್ಪಿ ಸಭೆಯಲ್ಲಿ ಶಾಸಕರುಗಳ ಮುಂದೆ ಉಸ್ತುವಾರಿ ರಣದೀಪ್ ಸುರ್ಜೆವಾಲ ಸ್ಪಷ್ಟಪಡಿಸಿದರು. ಈ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದರು.
ಈ ಬಗ್ಗೆ ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು. ಸಚಿವರೇ ಇರಲಿ, ಯಾರೇ ಇರಲಿ ಹೇಳಿಕೆ ನೀಡಬಾರದು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದನ್ನ ಸಹಿಸಲ್ಲ. ಯಾವುದೇ ಕ್ರಮದ ಬಗ್ಗೆ ಹೈಕಮಾಂಡ್ ಹಿಂಜರಿಯಲ್ಲ. ಈ ಬಾರಿ ನಾವು 136 ಸ್ಥಾನಗಳನ್ನು ಪಡೆದಿದ್ದೇವೆ. ಗೊಂದಲ ಮೂಡಿಸಿದ್ರೆ 36ಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ ಸುರ್ಜೆವಾಲ, ಯಾವುದೇ ಸಮಸ್ಯೆ ಇದ್ದರೂ ಕುಳಿತು ಬಗೆಹರಿಸಿಕೊಳ್ಳಿ. ಸಿಎಂ ಹಾಗೂ ಡಿಸಿಎಂ ಜೊತೆ ಕುಳಿತು ಬಗೆಹರಿಸಿಕೊಳ್ಳಿ ಎಂದು ಶಾಸಕರು, ಸಚಿವರಿಗೆ ಪಾಠ ಮಾಡಿದರು.
ಇನ್ನು ಇದೇ ಶಾಸಕಾಂಗ ಸಭೆಯಲ್ಲಿ ಅನುದಾನ ಬಗ್ಗೆ ಮತ್ತೆ ಪ್ರತಿಧ್ವನಿಸಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅನುದಾನಬೇಕೆಂದು ಶಾಸಕರು ಧ್ವನಿ ಎತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ,, ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸವುದಾಗಿ ಭರವಸೆ ನೀಡಿದರು. ಬಜೆಟ್ ಮಂಡನೆಗೂ ಮೊದಲು ಮತ್ತೊಮ್ಮೆ ಶಾಸಕಾಂಗ ಸಭೆ ಕರೆಯುವುದಾಗಿ ಹೇಳಿದರು. ಅಲ್ಲದೇ ಶಾಸಕರಿಗೆ ತಲಾ 10 ಕೋಟಿ ಅನುದಾನ ನೀಡಿದ್ದೇನೆ. ನಿನ್ನೆಯಷ್ಟೇ ಅನುದಾನಕ್ಕೆ ಸಹಿ ಹಾಕಿದ್ದೇನೆ. ಎಲ್ಲಾ ಪಕ್ಷದವರಿಗೂ ಅನುದಾನ ನೀಡುತ್ತಿದ್ದೇನೆ. ಬಿಜೆಪಿ, ಜೆಡಿಎಸ್ ಶಾಸಕರಿಗೂ 10 ಕೋಟಿ ಕೊಡ್ತಿದ್ದೇವೆ ಸಿದ್ದರಾಮಯ್ಯ ತಿಳಿಸಿದರು.
ಸುರ್ಜೇವಾಲ ನಡೆಸಿದ ಸರಣಿ ಸಭೆಯಿಂದ ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲಕ್ಕೆ ಬ್ರೇಕ್ ಬೀಳುತ್ತಾ? ಅಥವಾ ಮತ್ತಷ್ಟು ಹೆಚ್ಚಾಗುತ್ತಾ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Mon, 13 January 25