ನವದೆಹಲಿ, ಸೆಪ್ಟೆಂಬರ್ 26: ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಬೆಂಗಳೂರಿನಲ್ಲಿ ಬಂದ್ (Bangalore Bandh) ನಡೆಯುತ್ತಿರುವುದರ ಮಧ್ಯೆಯೇ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತಕಾರಿ ನಿರ್ಣಯ ಹೊರಬಿದ್ದಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು ಕರ್ನಾಟಕಕ್ಕೆ ಸೂಚನೆ ನೀಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ಪ್ರತಿಭಟನೆಯ ಕಿಚ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶಗಳಾದ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪ್ರತಿಭಟನೆ ಜೋರಾಗಿದೆ.
ಈ ಬಾರಿಯ ಆದೇಶವು ಸಂಕಷ್ಟದ ಮಧ್ಯೆಯೂ ಕರ್ನಾಟಕಕ್ಕೆ ತುಸು ಸಮಾಧಾನಕರ ಎನ್ನಲಾಗಿದೆ. ಈ ಹಿಂದಿನ ಆದೇಶಗಳಿಗಿಂತ ತುಸು ಕಡಿಮೆ ಪ್ರಮಾಣದಲ್ಲಿ ನೀರು ಬಿಡುಗಡೆಗೆ ಈ ಬಾರಿ ಆದೇಶ ನೀಡಲಾಗಿದೆ. ಮುಂದಿನ 15 ದಿನಗಳಿಗೆ ಪ್ರತಿ ದಿನ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಗಿದೆ.
ಕಾವೇರಿ ಕೊಳ್ಳದಲ್ಲಿ ಶೇ 53 ಮಳೆ ಕೊರತೆ ಇದೆ. ಕರ್ನಾಟಕ 161 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. 34 ತಾಲೂಕುಗಳು ಭಾಗಶಃ ಬರಕ್ಕೆ ತುತ್ತಾಗಿವೆ. ಈ ಪರಿಸ್ಥಿತಿಯಲ್ಲಿ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ. ಜಲಾಶಯಗಳಲ್ಲಿ ನೀರಿಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನಂತರ, 3000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಗಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರ ತನಕ ನೀರು ಹರಿಸುವಂತೆ ಆದೇಶಿಸಲಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ವಾದ ಮಂಡಿಸಿತ್ತು. ಜೂನ್ನಿಂದ ಸೆಪ್ಟೆಂಬರ್ವರೆಗೂ 123 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಕರ್ನಾಟಕ ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಬಾಕಿ ಉಳಿದ 83 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಪ್ರತಿಪಾದಿಸಿತ್ತು.
ಇದನ್ನೂ ಓದಿ: ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಮತ್ತೊಂದು ಕ್ಯಾತೆ, ಇದಕ್ಕೆ ಕರ್ನಾಟಕ ಹೇಳಿದ್ದೇನು?
ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಬೇಕೆಂದು ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ಎತ್ತಿಹಿಡಿದಿತ್ತು. ಇದು ಕರ್ನಾಟಕವನ್ನು ಸಂಕಷ್ಟಕ್ಕೀಡುಮಾಡಿತ್ತು. ಇದಾದ ನಂತರ ಕಾವೇರಿ ಜಲಾನಯನ ಪ್ರದೇಶಗಳು ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದವು.
ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ ಆದೇಶ ನೀಡಿರುವುದಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಕಷ್ಟ ಸೂತ್ರ ಪಾಲಿಸಬೇಕೆಂದು ಆಗ್ರಹಿಸಿರುವ ಅವರು, ಸಮಿತಿಗೆ ವಾಸ್ತವಾಂಶ ತಿಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಮತ್ತೆ ನೀರು ಹರಿಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:35 pm, Tue, 26 September 23