ಸೈಕ್ಲಿಸ್ಟ್ಗಳ ತವರೂರು ವಿಜಯಪುರದಲ್ಲಿ ಸೈಕ್ಲಿಂಗ್ನಿಂದ ಆರೋಗ್ಯ ಸುಧಾರಣೆ: ಇಂಧನ ಉಳಿತಾಯವೂ ಸಾಧ್ಯ!
ಆರೋಗ್ಯಕ್ಕಾಗಿ ಸೈಕಲ್ ಬಳಕೆ ಮಾಡಬೇಕು ಹಾಗೂ ಇಂಧನವನ್ನು ಉಳಿಸಬಹುದು ಎಂಬ ನಿಟ್ಟಿನಲ್ಲಿ ವಿಜಯಪುರ ಜನರು ಸೈಕ್ಲಿಂಗ್ ಜಾಥಾ ನಡೆಸಲಾಯಿತು.

ವಿಜಯಪುರ: ಸೈಕ್ಲಿಸ್ಟ್ಗಳ ತವರೂರು ವಿಜಯಪುರ! ಅಂತರರಾಷ್ಟ್ರ ಹಾಗೂ ರಾಷ್ಟ್ರಮಟ್ಟದ ಸೈಕ್ಲಿಸ್ಟ್ಗಳು ಜಿಲ್ಲೆಗೆ ಖ್ಯಾತಿ ತಂದಿದ್ದಾರೆ. ಜಿಲ್ಲೆಯ ನೂರಾರು ಸೈಕ್ಲಿಸ್ಟ್ಗಳು ಎಲ್ಲೇ ಸೈಕ್ಲಿಂಗ್ ಚಾಂಪಿಯನ್ ಶಿಫ್ಗಳು ನಡೆಯಲಿ ಪದಕ ತಮ್ಮದಾಗಿಸಿಕೊಳ್ಳುವುದು ಮಾತ್ರ ಗ್ಯಾರಂಟಿ.
ಈ ದಿಸೆಯಲ್ಲಿ ಸೈಕ್ಲಿಂಗ್ ಕುರಿತು ಜಾಗೃತಿ ಹಾಗೂ ಜನ ಸಾಮಾನ್ಯರು ಆರೋಗ್ಯಕ್ಕಾಗಿ ಸೈಕಲ್ ಬಳಕೆ ಮಾಡಬೇಕೆಂಬ ನಿಟ್ಟಿನಲ್ಲಿ ಜನ್ಮ ತಾಳಿದ್ದೇ ವಿಜಯಪುರ ಸೈಕ್ಲಿಂಗ್ ಗ್ರೂಪ್. ಸೈಕ್ಲಿಂಗ್ ಗ್ರೂಪ್ ಜನ್ಮ ತಾಳಲು ಕಾರಣೀಕರ್ತರು ಡಾ. ಮಹಾಂತೇಶ ಬಿರಾದಾರ್.
ಗ್ರೂಪ್ ರಚನೆಯ ಉದ್ದೇಶ ಹಾಗೂ ಕಾರ್ಯಗಳು: ಇಂದಿನ ಜಾಗತೀಕರಣದ ಭರಾಟೆಯಲ್ಲಿ ಜನರು ಆರೋಗ್ಯದ ಕುರಿತು ಕಾಳಜಿ ತೋರುತ್ತಿಲ್ಲ. ಬಿಡುವಿಲ್ಲದ ಹಾಗೂ ನಿರಂತರ ಕೆಲಸದ ಒತ್ತಡಗಳಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಖಾಯಿಲೆ, ರಕ್ತದೊತ್ತಡದಂಥಹ ಖಾಯಿಲೆಗಳಿಗೆ ಸರಳವಾಗಿ ಆಹ್ವಾನ ನೀಡುತ್ತಿದ್ದಾರೆ.
ಸೈಕ್ಲಿಂಗ್ ಮೂಲಕ ರಕ್ತದೊತ್ತಡ, ಸಕ್ಕರೆ ಖಾಯಿಲೆ ಬಾರದಂತೆ ತಡೆಯಬಹುದು. ಈ ನಿಟ್ಟಿನಲ್ಲಿ ಜನ ಸಾಮಾನ್ಯರು ಕನಿಷ್ಟ ಮಟ್ಟಿಗೆ ಸೈಕ್ಲಿಂಗ್ ಮಾಡಬೇಕೆಂಬ ಕನಸು ಈ ತಂಡದ್ದದಾಗಿದೆ. ಇನ್ನು, ನಿತ್ಯ ನಗರದ ರಸ್ತೆಗಳಲ್ಲಿ, ಗ್ರಾಮಗಳ ಭಾಗದಲ್ಲಿ ಸೈಕ್ಲಿಂಗ್ ಮಾಡುವುದರ ಮೂಲಕ ಜನರನ್ನು ಸೆಳೆಯುವುದು. ಸೈಕ್ಲಿಂಗ್ ಮಾಡುವುದರ ಮೂಲಕ ಜನರಿಗೆ ತಿಳಿವಳಿಕೆ ಹಾಗೂ ಆರೋಗ್ಯದ ವಿಚಾರದಲ್ಲಿ ಆಗುವ ಲಾಭಗಳನ್ನು ತಿಳಿಸುವುದು. ಈ ಮೂಲಕ ಸೈಕ್ಲಿಂಗ್ ಮಾಡಲು ಎಲ್ಲರನ್ನೂ ಪ್ರೋತ್ಸಾಹಿಸುವುದಾಗಿದೆ.

ಇಂಧನ ಉಳಿತಾಯ ಹಾಗೂ ಕಡಿಮೆ ಬೇಡಿಕೆಗಾಗಿ ಕಾರ್ಯಕ್ರಮ ಭಾರತ ಸರ್ಕಾರದ ತೈಲ ಹಾಗೂ ಅನೀಲ ನೈಸರ್ಗಿಕ ಖಾತೆಯ ಹಸಿರು ಹಾಗೂ ಸ್ವಚ್ಚ ಪರಿಸರ ಅಭಿಯಾನದ ಅಂಗವಾಗಿ ಭಾರತ ಪೇಟ್ರೋಲ್ ಕಾರ್ಪೋರೇಷನ್ ಹಾಗೂ ವಿಜಯಪುರ ಸೈಕ್ಲಿಂಗ್ ಗ್ರುಪ್ ಇಂದು ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಯಾವುದೇ ಸರ್ಕಾರಗಳು ಬಂದರೂ ಪೇಟ್ರೋಲ್ ಬೆಲೆ ಕಡಿಮೆ ಆಗುವುದಿಲ್ಲ.
ಪೆಟ್ರೋಲ್ ಬೆಲೆ ನಿಯಂತ್ರಿಸುವುದು ಸರ್ಕಾರ ಬಳಿ ಇಲ್ಲ. ಅದನ್ನು ನಿಯಂತ್ರಿಸುವವರು ಉತ್ಪಾದಿಸುವ ದೇಶಗಳು. ಅದರ ಹಿಂದೆ ದೊಡ್ಡ ಅಂತರರಾಷ್ಟ್ರೀಯ ಮಾಫಿಯಾ ಇದೆ. ಪೆಟ್ರೋಲ್‍ನಲ್ಲಿ ಶೇ. 50ರಷ್ಟು ಇಥೆನಾಲ್ ಮಿಶ್ರಣ ಮಾಡಿ, ಅನೇಕ ರಾಷ್ಟ್ರಗಳಲ್ಲಿ ಬಳಸುತ್ತಿದ್ದಾರೆ. ನಮ್ಮ ರಾಷ್ಟ್ರದಲ್ಲಿ ಶೇ. 10ರಷ್ಟು ಮಾತ್ರ ಇಥೆನಾಲ್ ಮಿಶ್ರಣಕ್ಕೆ ಅವಕಾಶ ಇದೆ. ನಮ್ಮಲ್ಲಿ ಯಥೇಚ್ಚವಾಗಿ ಇಥೆನಾಲ್ ಉತ್ಪಾದನೆ ಆಗುತ್ತಿದೆ.
ಮಿಶ್ರಣದಲ್ಲಿ ಅದರ ಪ್ರಮಾಣ ಹೆಚ್ಚಾಗಬೇಕು. ಆಗ ವಿದೇಶಿ ವಿನಿಮಯ ಉಳಿಯುತ್ತದೆ ಎಂದು ಹೇಳಿದ್ದಾರೆ. ಪೆಟ್ರೋಲ್ ಹಾಗೂ ಡಿಸೇಲ್ ನಮ್ಮ ದೇಶದಲ್ಲಿ ದೊರೆಯುವುದಿಲ್ಲ. ನಾವು ಅದನ್ನು ಹೊರದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕು. ಪ್ರತಿ ವರ್ಷವೂ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಈ ಉತ್ಪನ್ನಗಳಿಗಾಗಿ ನಮ್ಮ ದೇಶಗಳಿಂದ ವ್ಯಯಿಸುತ್ತಿದ್ದೇವೆ. ಆದಷ್ಟು ಕಡಿಮೆ ಇಂಧನ ಬಳಕೆ ಮಾಡಿ, ದೇಶದ ಆರ್ಥಿಕ ಸಂಪತ್ತು ರಕ್ಷಿಸಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಬೆಳಗಾವಿ ವಿಭಾಗೀಯ ಪ್ರಬಂಧಕ ಸಂಗಮೇಶ ಪಡನಾಡ ಮಾತನಾಡಿ ಸಣ್ಣ ಸಣ್ಣ ಕೆಲಸಗಳಿಗೆ ವಾಹನಗಳ ಬಳಕೆ ನಿಲ್ಲಬೇಕು. ಕಡಿಮೆ ದೂರದ ಪ್ರದೇಶಗಳಿಗೆ ನಡೆದುಕೊಂಡೇ ಹೋಗಬೇಕು. ದೂರವಿದ್ದರೆ ಸೈಕಲ್ ಬಳಸಬಹುದು. ಅನಿವಾರ್ಯವಿದ್ದಲ್ಲಿ ಮಾತ್ರ ವಾಹನ ಬಳಸಬೇಕು. ಆ ಮೂಲಕ ಇಂಧನ ಉಳಿತಾಯ ಮಾಡಿ ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿ ನನ್ನ ಮನೆಯಿಂದ ಕಚೇರಿಯು 3 ಕೀ.ಮಿ. ದೂರ ಇದ್ದು ಪ್ರತಿ ದಿನ ನಾನು ಸೈಕಲ್ ಮೇಲೆ ಆಫೀಸ್ಗೆ ಹೋಗಿ ಬರುತ್ತೇನೆ. ಆರಂಭದಲ್ಲಿ ಇದು ಮುಜುಗುರ ಎನಿಸಿದರೂ ನಂತರದಲ್ಲಿ ಇದು ಅಭ್ಯಾಸವಾಗಿದೆ. ಈ ರೀತಿ ಸೈಕಲ್ ಬಳಕೆಯಿಂದ ಆರೋಗ್ಯ ಹಾಗೂ ಇಂಧನ ಉಳಿತಾಯ ಮಾಡಬಹುದು ಎಂದು ತಿಳಿಸಿದರು.
ಸೈಕಲ್ ಜಾಥಾ: ಇಂಧನ ಉಳಿತಾಯಕ್ಕಾಗಿ ಜಾಗೃತಿ ಹಸಿರು ಹಾಗೂ ಸ್ವಚ್ಛ ಪರಿಸರಕ್ಕಾಗಿ ಸೈಕ್ಲಿಂಗ್ ಜಾಥಾಕ್ಕೆ ನಗರ ಡಿಎಸ್‍ಪಿ ಲಕ್ಷ್ಮೀ ನಾರಾಯಣ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ವಿಜಯಪುರ ಸೈಕ್ಲಿಂಗ್ ಗ್ರೂಫ್ನ ಸೋಮಶೇಖರ ಸ್ವಾಮಿ ಇಂಧನ ಬಳಕೆ ಕಡಿಮೆ ಮಾಡುವ ಕುರಿತು ಪ್ರತಿಜ್ಞಾವಿಧಿ ತಿಳಿಸಿದರು.
ಉದ್ಯಮಿ ಶಾಂತೇಶ ಕಳಸಗೊಂಡ, ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ವಿಜಯಕುಮಾರ ವಾರದ, ವೃಕ್ಷ ಅಭಿಯಾನ ಸಂಚಾಲಕ ಪ್ರೊ. ಮುರುಗೇಶ ಪಟ್ಟಣಶೆಟ್ಟಿ ಸೇರಿದಂತೆ ಇತರರು ಸೈಕ್ಲಿಂಗ್ ಜಾಥಾದಲ್ಲಿ ಭಾಗಿಯಾಗಿದ್ದರು. ಅಥಣಿ ರಸ್ತೆಯ ಕುಮಾರೇಶ್ವರ ಪೆಟ್ರೋಲ್ ಪಂಪ್‍ನಿಂದ ಆರಂಭಗೊಂಡ ಸೈಕ್ಲಿಂಗ್ ಜಾಗೃತಿ ಜಾಥಾ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು.
ಫಿಟ್ನೆಸ್ಗಾಗಿ MG ರೋಡ್, ವಿಧಾನಸೌಧ ಸುತ್ತಮುತ್ತ ಸೈಕಲ್ ರೌಂಡ್ ಹೊಡೆದ ಅಪ್ಪು!



