ನೈತಿಕ ಪೊಲೀಸ್ ಗಿರಿ ಮಾಡುವರ ವಿರುದ್ಧ ಕ್ರಮ, ಭಯ ಪಡುವ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನೈತಿಕ ಪೊಲೀಸ್ ಗಿರಿ ಮಾಡುವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಕಮೀಷನರ್, ಎಸ್ಪಿ, ಐಜಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದ್ದೇನೆ ಎಂದಿದ್ದಾರೆ.
ಮಂಗಳೂರು, ಡಿಸೆಂಬರ್ 24: ನೈತಿಕ ಪೊಲೀಸ್ ಗಿರಿ ಮಾಡುವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwara) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ಬಹಳಷ್ಟು ಕಡಿಮೆಯಿದೆ ಎಂಬ ಮಾಹಿತಿ ಬಂದಿದೆ. ನಂಬರ್ಗಳು ಕಡಿಮೆ ಆಗಿರೋದು ಸತ್ಯ, ಅದರ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದ್ದಾರೆ.
ಪೊಲೀಸ್ ಕಮೀಷನರ್, ಎಸ್ಪಿ, ಐಜಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದ್ದೇನೆ. ಹಾಗಂದ ಮಾತ್ರಕ್ಕೆ ಎಲ್ಲರ ಮೇಲೆ ಕೇಸ್ ಹಾಕಬೇಕಂದಲ್ಲ. ಆ್ಯಂಟಿ ಕಮ್ಯೂನಲ್ ವಿಂಗ್ಗೆ ನೇಮಕಾತಿ ಪ್ರಕ್ರಿಯೆ ಆಗುತ್ತಿದೆ. ಹಾಗಾಗಿ ಅವರಿಗೆ ಇನ್ನು ಹೆಚ್ಚಿನ ಸಿಬ್ಬಂದಿ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನಾವು ಸಂವಿಧಾನವನ್ನು ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ
ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾಧಕ ಬಾಧಕ ನೋಡಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ಮುಸ್ಲಿಮರು ಹಿಂದಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದಾಗ ಅದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನವಾಗಿದೆ. ನಾವು ಸಂವಿಧಾನವನ್ನು ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ
ಕೆಲವರಿಗೆ ನೋವಾಗಬಹುದು, ಕೆಲವರಿಗೆ ಸಂತಸವಾಗಬಹುದು. ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದೆ. ಬಸವರಾಜ ಬೊಮ್ಮಾಯಿ ನಾವು ಆದೇಶ ಮಾಡಿಲ್ಲವೆಂದು ಹೇಳಿದ್ದಾರೆ. ಒಂದು ವೇಳೆ ಬಿಜೆಪಿಯವರು ಮಾಡಿದ್ದರೇ ನಾವು ಪರಿಶೀಲಿಸುತ್ತೇವೆ. ಪರಿಶೀಲನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. ಗೊಂದಲ ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ನನಗೆ ಸಿಎಂ ಸ್ಥಾನ ತಪ್ಪಿದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ
ಯಾವುದೇ ಸ್ಥಾನ ಪಡೆದರೆ ಅವನು ದಲಿತ ಅಂತಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಾಮಾನ್ಯವಾಗಿ ಈ ರೀತಿ ಹೇಳುತ್ತಾರೆ ಅದನ್ನೇ ಭಾಷಣದಲ್ಲಿ ಹೇಳಿದ್ದೇನೆ. ಯಾವ ಪಕ್ಷ ನನಗೆ ಗೊತ್ತಿಲ್ಲ, ಆದರೆ ಸಮಾಜದಲ್ಲಿ ಹಾಗೇ ಹೇಳುತ್ತಾರೆ. ನನಗೆ ಸಿಎಂ ಸ್ಥಾನ ತಪ್ಪಿದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಮಾಡುವುದಿಲ್ಲ. ಸಾಮರ್ಥ್ಯ, ಪಕ್ಷಕ್ಕಾಗಿ ಏನು ಮಾಡಿದ್ದಾರೆ, ಹಿರಿತನ ನೋಡಿ ಮಾಡುತ್ತಾರೆ ಎಂದರು.
ಇದನ್ನೂ ಓದಿ: ದ್ವೇಷ ಭಾಷಣ ನಿಯಂತ್ರಿಸಲು ಬಲಪಂಥೀಯ ಕಾರ್ಯಕರ್ತರ ಮೇಲೆ ನಿಗಾ: ಜಿ ಪರಮೇಶ್ವರ
ಮಂಗಳೂರಿನಲ್ಲಿ ನಡೆದ ರಾಜ್ಯ ಆದಿ ದ್ರಾವಿಡ ಸಮಾವೇಶದಲ್ಲಿ ಹಕ್ಕೊತ್ತಾಯಕ್ಕೆ ಸ್ಪಂದಿಸಿದ ಗೃಹ ಸಚಿವ ಡಾ ಜಿ.ಪರಮೇಶ್ವರ್, ಒಂದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಆದಿ ದ್ರಾವಿಡ ಸಮುದಾಯಕ್ಕೆ ಕೊಡುತ್ತೇವೆ. ನಿಗಮ ಮಂಡಳಿಗೆ ಒಂದು ಅಧ್ಯಕ್ಷನನ್ನು ಕೇಳಿದ್ದೀರಿ. ನನ್ನನ್ನು ಮುಖ್ಯಮಂತ್ರಿಗಳು ಏನು ತಿಳಿದುಕೊಂಡರು ಪರವಾಗಿಲ್ಲ. ನಿಗಮ ಮಂಡಳಿಗೆ ನಿಮ್ಮ ಸಮುದಾಯದ ಒಬ್ಬ ಅಧ್ಯಕ್ಷನನ್ನು ಖಂಡಿತವಾಗಿಯು ಮಾಡಿಸುತ್ತೇವೆ. ಯಾವುದು ಅಂತಾ ಗೊತ್ತಿಲ್ಲ, ಹೇಳಲ್ಲ. ಆದರೆ ಒಂದು ನಿಗಮ ಮಂಡಳಿ ಅಧ್ಯಕ್ಷ ಈ ಆದಿ ದ್ರಾವಿಡ ಸಮುದಾಯಕ್ಕೆ ಸಿಗುತ್ತೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.