ದ್ವೇಷ ಸಾಧನೆಗೆ ಮಹಿಳಾ ಅಧಿಕಾರಿಗಳು ಬಲಿ; ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ವ್ಯಾಪಕ ಆಕ್ರೋಶ

ದ್ವೇಷ ಸಾಧನೆಗೆ ಮಹಿಳಾ ಅಧಿಕಾರಿಗಳು ಬಲಿ; ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ವ್ಯಾಪಕ ಆಕ್ರೋಶ
ಮಹಿಳಾ ಅಧಿಕಾರಿ ಸಂಧ್ಯಾ ಮತ್ತು ಶಾಸಕ ಹರೀಶ್ ಪೂಂಜಾ

ಪ್ರಕರಣದ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ವಿಷಯ ತಿಳಿದು ತನಿಖೆ ನಡೆಸಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ನಾಲ್ಕು ಸಿಬ್ಬಂದಿಗಳನ್ನು ಅಮಾನತು ಮಾಡಿದರು. ಇದರಿಂದಾಗಿ ಕಂಗೆಟ್ಟ ಶಾಸಕ ಹರೀಶ್ ಪೂಂಜಾ ಈ ಮಹಿಳಾ ಅಧಿಕಾರಿ ಮೇಲೆ ದ್ವೇಷದಿಂದ ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

TV9kannada Web Team

| Edited By: preethi shettigar

Jan 29, 2022 | 2:47 PM

ದಕ್ಷಿಣ ಕನ್ನಡ: ಬಿಜೆಪಿ ನಾಯಕರೊರ್ವರ ಮರಕಳ್ಳತನವನ್ನು ಭೇದಿಸಿದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ(Harish Poonja) ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಹಗೆತನ ಸಾಧಿಸಿದ್ದಾರೆ ಎಂಬ ಆರೋಪ(Allegation) ವ್ಯಕ್ತವಾಗಿದೆ. ಸಂಧ್ಯಾ ಸಚಿನ್ ಅವರು ಉಡುಪಿ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿಯಾಗಿದ್ದರು(Forest department). ಮಂಗಳೂರು ಅರಣ್ಯ ಸಂಚಾರಿ ದಳದ ಪ್ರಬಾರ ಅಧಿಕಾರಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳನ್ನು ‘ಪಂಚಮುಖಿ’ ಬಾಲಕೃಷ್ಣ ಶೆಟ್ಟಿ ಎಂಬಾತ ಕಡಿದುರುಳಿಸಿದ್ದರು. ಈ ಸ್ಥಳೀಯರ ದೂರಿನಂತೆ ತನ್ನ ತಂಡದೊಂದಿಗೆ ದಾಳಿ ನಡೆಸಿದಾಗ ಹೆಬ್ಬಲಸು, ಹಲಸು, ಬೋಗಿ, ಕಿರಲ್ ಬೋಗಿ, ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಹಾಕಿರುವುದು ಪತ್ತೆಯಾದವು. ಈ ಸಂಬಂಧ ಪ್ರಕರಣ ದಾಖಲಿಸಿದ ಅರಣ್ಯಾಧಿಕಾರಿ ಸಂಧ್ಯಾ, ಸ್ಥಳದಲ್ಲಿದ್ದ ಬಾಲಕೃಷ್ಣ ಶೆಟ್ಟಿಗೆ ಸೇರಿದ ಲಾರಿ ಸಮೇತ ಮರಗಳನ್ನು ಮುಟ್ಟುಗೋಲು ಹಾಕಿಕೊಂಡರು.

ಪ್ರಕರಣದ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ವಿಷಯ ತಿಳಿದು ತನಿಖೆ ನಡೆಸಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ನಾಲ್ಕು ಸಿಬ್ಬಂದಿಗಳನ್ನು ಅಮಾನತು ಮಾಡಿದರು. ಇದರಿಂದಾಗಿ ಕಂಗೆಟ್ಟ ಶಾಸಕ ಹರೀಶ್ ಪೂಂಜಾ ಈ ಮಹಿಳಾ ಅಧಿಕಾರಿ ಮೇಲೆ ದ್ವೇಷದಿಂದ ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲು ಯಶಸ್ವಿಯಾಗಿದ್ದಾರೆ. ಸ್ವತಃ ತಾನೇ ಮುಂದೆ ನಿಂತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂಲಕ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಾಸಕ ಹರೀಶ್ ಪೂಂಜಾ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದ ಪತ್ರ ಹಾಗೂ ಮುಖ್ಯಮಂತ್ರಿಗಳ ಆದೇಶ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಮಹಿಳಾ ಅಧಿಕಾರಿಗಳೇ ಟಾರ್ಗೆಟ್

ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರೊರ್ವರು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ ಮಹಿಳಾ ಅಧಿಕಾರಿ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಸೌಮ್ಯಲತಾ ಎಂಬವವರನ್ನು ಒಂದು ತಿಂಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಕಾರಿಂಜ ದೇವಸ್ಥಾನದ ಮುಂಭಾಗದಲ್ಲಿ ಸಂಘ ಪರಿವಾರ ನಡೆಸಿದ ಪ್ರತಿಭಟನೆಯಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರ ಕಾಲರ್ ಪಟ್ಟಿ ಹಿಡಿಯಲು ಕರೆ ನೀಡಿದ ಸಂಘ ಪರಿವಾರದ ನಾಯಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ ಮಹಿಳಾ ಅಧಿಕಾರಿ ಪುಂಜಾಲಕಟ್ಟೆ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೌಮ್ಯ ಅವರನ್ನು ಎರಡು ವಾರದ ಹಿಂದೆ ವರ್ಗಾವಣೆ ಮಾಡುವ ಮೂಲಕ ದ್ವೇಷ ಸಾಧನೆ ಮಾಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಪಕ್ಷದ ಶಾಸಕ ಹರೀಶ್ ಪೂಂಜಾ ಮಹಿಳಾ ಅಧಿಕಾರಿಗಳ ಮೇಲೆ ಹಗೆತನ ಸಾಧಿಸುತ್ತಿರುವುದು ಬಿಜೆಪಿ ಪಕ್ಷದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಲ್ಲವ ಸಂಘಕ್ಕೆ ದೂರು

ಈ ನಡುವೆ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಅವರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಿದ ಬಗ್ಗೆ ನ್ಯಾಯಕೋರಿ ಬಿಲ್ಲವ ಸಂಘಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬಿಲ್ಲವ ಸಂಘಟನೆಗಳು ಒಂದಾಗಿ ಹೋರಾಟ ನಡೆಸಿದ್ದು , ಇದೀಗ ಬಿಲ್ಲವ ಸಮುದಾಯದ ಮಹಿಳಾ ಅಧಿಕಾರಿಯ ವರ್ಗಾವಣೆಯಲ್ಲಿ ಶಾಸಕ ಹರೀಶ್ ಪೂಂಜಾರ ದ್ವೇಷ ಸಾಧನೆ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಬಿಲ್ಲವ ಸಂಘಟನೆಗಳು ಸಜ್ಜಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಇದನ್ನೂ ಓದಿ: ‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ರದ್ದು ಎನ್ನಲಾದ ವೈರಲ್ ಆಡಿಯೊ ನಕಲಿ; ಬಿಜೆಪಿ ಶಾಸಕರಿಂದ ದೂರು ದಾಖಲು

Follow us on

Related Stories

Most Read Stories

Click on your DTH Provider to Add TV9 Kannada