ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹಿಂದೂಯೇತರ ಅಧಿಕಾರಿ ನೇಮಕ ಆರೋಪ: ಬಿಜೆಪಿಯ ಸುಳ್ಳು ಸುದ್ದಿಯೆಂದ ರಾಮಲಿಂಗಾ ರೆಡ್ಡಿ

| Updated By: Ganapathi Sharma

Updated on: May 02, 2024 | 3:19 PM

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಿಂದೂಯೇತರ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ವಿಎಚ್​​ಪಿ ಹಾಗೂ ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ಆದರೆ, ಆರೋಪವನ್ನು ಅಲ್ಲಗಳೆದಿರುವ ಮಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಇದು ಬಿಜೆಪಿ ಹರಡಿಸುತ್ತಿರುವ ಸುಳ್ಳು ಸುದ್ದಿ ಎಂದು ದೂರಿದ್ದಾರೆ. ಜತೆಗೆ, ಅಧಿಕಾರಿಗೆ ಸಂಬಂಧಿಸಿದ ಮಾಹಿತಿಯನ್ನೂ ನೀಡಿದ್ದಾರೆ. ಆ ಕುರಿತು ವಿವರ ಇಲ್ಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹಿಂದೂಯೇತರ ಅಧಿಕಾರಿ ನೇಮಕ ಆರೋಪ: ಬಿಜೆಪಿಯ ಸುಳ್ಳು ಸುದ್ದಿಯೆಂದ ರಾಮಲಿಂಗಾ ರೆಡ್ಡಿ
ಸಚಿವ ರಾಮಲಿಂಗಾ ರೆಡ್ಡಿ ಎಕ್ಸ್ ಸಂದೇಶ
Follow us on

ಮಂಗಳೂರು, ಮೇ 2: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ (Kukke Shri Subrahmanya Swamy Temple) ಹಿಂದೂಯೇತರ ಅಧಿಕಾರಿಯನ್ನು ನೇಮಿಸಿದ ಆರೋಪ ಕೇಳಿಬಂದಿದೆ. ಆದರೆ, ಮಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಈ ಆರೋಪವನ್ನು ಅಲ್ಲಗಳೆದಿದ್ದು, ಇದು ಬಿಜೆಪಿಯ (BJP) ಸುಳ್ಳು ಸುದ್ದಿ ಎಂದಿದ್ದಾರೆ. ದೇಗುಲದ ನೂತನ ಎಇಒ ಆಗಿ ಏಸುರಾಜ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿತ್ತು. ಏಸುರಾಜ್ ಹಿಂದೂವೇ (Hindu) ಅಥವಾ ಮತಾಂತರಗೊಂಡ ಕ್ರಿಶ್ಚಿಯನ್ನರೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.

ಏಸುರಾಜ್ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ವಿಹೆಚ್​​ಪಿ ಸಂದೇಶ ಪ್ರಕಟಿಸಿತ್ತು.

ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ಏಸುರಾಜ್ ಅಧಿಕಾರ ಸ್ವೀಕಾರ ಗೊಂದಲದ ಬಗ್ಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸ್ಪಷ್ಟನೆ ನೀಡಿರುವ ರಾಮಲಿಂಗಾ ರೆಡ್ಡಿ, ಇದು ಬಿಜೆಪಿಯ ಮತ್ತೊಂದು ಫೇಕ್ ವಾಟ್ಸ್​ಆ್ಯಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ ಎಂದು ಟೀಕಿಸಿದ್ದಾರೆ.

ರಾಮಲಿಂಗಾ ರೆಡ್ಡಿ ಎಕ್ಸ್ ಸಂದೇಶ


ಬಿಜೆಪಿಯ ಮತ್ತೊಂದು ಫೇಕ್ ವಾಟ್ಸ್​ಆ್ಯಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವವರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಕರ್ನಾಟಕ ಬಿಜೆಪಿಯ ಮತ್ತೊಂದು ಸುಳ್ಳು ಹಬ್ಬಿಸುವ ಸೋಶಿಯಲ್ ಮೀಡಿಯಾ ವಾಟ್ಸಾಪ್ ಫೇಕ್ ಯುನಿವರ್ಸಿಟಿಯ ಆಟವಾಗಿದೆ. ಅವರು ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ ಎಂದು ದಾಖಲೆಗಳನ್ನು ಲಗತ್ತಿಸಿದ್ದಾರೆ.

ಇದನ್ನೂ ಓದಿ: ಮೋದಿ ಗೆಲ್ಲಿಸುವಂತೆ ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣ: ವರನ ವಿರುದ್ಧ ದೂರು ದಾಖಲು

ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆ ಹತ್ತಿರ ಇರುವುದರಿಂದ ಜನರನ್ನು ದಾರಿ ತಪ್ಪಿಸಿ ಅವರ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಸೋಲಿನ ಭಯ ಶುರುವಾಗಿರುವುದು ಸ್ಪಷ್ಟ ಎಂದು ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Thu, 2 May 24