ಮಂಗಳೂರು, ಆಗಸ್ಟ್ 11: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ (Talapady) ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದಕ್ಕೆ ನಡೆದ ಚುನಾವಣೆಯಲ್ಲಿ ಎಸ್ಡಿಪಿಐ (SDPI) ಬೆಂಬಲಿತ ಸದಸ್ಯರಿಗೆ ಅಡ್ಡಮತದಾನ ಮಾಡಿದ ಇಬ್ಬರು ಸದಸ್ಯರಿಗೆ ಬಿಜೆಪಿ (BJP) ಗೇಟ್ ಪಾಸ್ ನೀಡಿದೆ. ಅಡ್ಡಮತದಾನದ ಬಗ್ಗೆ ಮಾಧ್ಯಮ ವರದಿಗಳನ್ನು ಬಿಜೆಪಿ ನಾಯಕರು ಅಳ್ಳಗಳೆದ ಬೆನ್ನಲ್ಲೇ ಈ ಕ್ರಮ ಜರುಗಿಸಿಲಾಗಿದೆ.
ಎಸ್ಡಿಪಿಐ ಜೊತೆ ಸ್ವಂತ ಪಕ್ಷದ ಸದಸ್ಯರ ಒಳ ಒಪ್ಪಂದದಿಂದ ಬಿಜೆಪಿಗೆ ಸೋಲಾದ ಹಿನ್ನೆಲೆ ಅಡ್ಡಮತದಾನ ಚಲಾಯಿಸಿದ ಬಿಜೆಪಿ ಬೆಂಬಲಿತ ಸದಸ್ಯರಾದ ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಅವರು ಅಧ್ಯಕ್ಷ ಚುನಾವಣೆಯಲ್ಲಿ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಇಸ್ಮಾಯಿಲ್ ಅವರಿಗೆ ಅಡ್ಡಮತದಾನ ಚಲಾಯಿಸಿದ್ದರು. ಆ ಮೂಲಕ ಎಸ್ಡಿಪಿಐ ಗೆಲುವಿಗೆ ಕಾರಣಕರ್ತರಾಗಿದ್ದರು.
ಇದನ್ನೂ ಓದಿ: ತಲಪಾಡಿ ಗ್ರಾ.ಪಂ. ಚುನಾವಣೆ: ಎಸ್ಡಿಪಿಐ ಬೆಂಬಲಿಸಿಲ್ಲ ಎಂದ ಬಿಜೆಪಿ ನಾಯಕರು, ತೇಜಸ್ವಿ ಸೂರ್ಯ, ಅಮಿತ್ ಮಾಳವೀಯ ಹೇಳಿದ್ದೇನು?
ತಲಪಾಡಿ ಗ್ರಾಮ ಪಂಚಾಯತ್ ಆಡಳಿತದಲ್ಲಿ ಒಟ್ಟು 24 ವಾರ್ಡುಗಳಿವೆ. ಇದರಲ್ಲಿ 13 ಬಿಜೆಪಿ ಬೆಂಬಲಿತ ಸದಸ್ಯರು, 10 ಎಸ್ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಸದಸ್ಯರಿದ್ದಾರೆ. ಅಧ್ಯಕ್ಷ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಬೆಂಬಲಿತ ವೈಭವ್ ವೈ ಶೆಟ್ಟಿ ಮತ್ತು ಎಸ್ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು. ಹೀಗಾಗಿ ಬಹುಮತದ ಕಾರಣ ಬಿಜೆಪಿ ಸದಸ್ಯ ಸತ್ಯರಾಜ್ ಗೆಲ್ಲುವ ಸಾಧ್ಯತೆ ಇತ್ತು.
ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಅವರು ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆ ಇಸ್ಮಾಯಿಲ್ ಮತ್ತು ಬಿಜೆಪಿ ಸತ್ಯರಾಜ್ ನಡುವೆ ಸಮಬಲ ಸಾಧಿಸಿತ್ತು. ಕೊನೆಗೆ ಚೀಟಿ ಎತ್ತಲಾಗಿದ್ದು, ಇದರಲ್ಲಿ ಅಧ್ಯಕ್ಷ ಸ್ಥಾನ ಇಸ್ಮಾಯಿಲ್ ಪಲಾಯಿತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 pm, Fri, 11 August 23