
ಬೆಂಗಳೂರು, (ಏಪ್ರಿಲ್ 20): ಹಿಂದೂ (hindu) ಯುವಕರು ಮುಸ್ಲಿಂ (Muslim) ಯುವತಿಯರನ್ನು ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ (chakravarthy sulibele) ಕರೆ ಕೊಟ್ಟು ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಇದರ ಬೆನ್ನಲ್ಲೇ ಇದೀಗ ಹಿಂದೂಗಳು ಮತಾಂತರ ಮಾಡುವಂತೆ ಕರೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೂಲಿಬೆಲೆ, ಯಾರಾದರೂ ನಮಗೆ ಮತಾಂತರ ಆಗಬೇಕು ಅಂದರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತೆ. ಬನ್ನಿ ಎಂದು ಕರೆಯಿರಿ ಎಂದು ಹಿಂದೂಗಳು ಮತಾಂತರ (Conversion) ಮಾಡುವಂತೆ ಬಹಿರಂಗವಾಗಿ ಕರೆ ಕೊಟ್ಟಿದ್ದಾರೆ.
ಇತ್ತೀಚೆಗೆ ಬಜರಂಗದಳದವರು (Bajrang Dal) ಸಂಕಲ್ಪ ತಗೊಂಡಿದ್ದಾರೆ. ಹಿಂದೂಗಳ ಸಂಖ್ಯೆ ಜಾಸ್ತಿ ಮಾಡಲು ಏನು ಐಡಿಯಾ ಇದೆ ಎಂದು ಕೇಳಿದಾಗ ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡಿಕೊಳ್ತೇವೆ ಎಂದು ಹೇಳಿದ್ರು. ಆದ್ರೆ ನಮ್ಮ ಜನ ಎರಡ್ಮೂರು ಮಕ್ಕಳನ್ನ ಮಾಡ್ತಾರೇನ್ರೀ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ. ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಿ ಮಾಡಬೇಕು ಅನ್ನೋದಷ್ಟೇ ಇದೆ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹಾಗಾಗಿ ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಪೊಲೀಸರಿಗೂ ಹೇಳುತ್ತಿದ್ದೇನೆ. ಇದು ಸರ್ಕಾರ ಕೊಟ್ಟಿರೋ ಕಾನೂನು, ನಮ್ಮದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವೂ ಮತಾಂತರ ಮಾಡಬಹುದು ಅಂತ. ಸರ್ಕಾರವೇ ಧೈರ್ಯವಾಗಿ ಹೇಳಿದೆ, ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಜಗತ್ತಿನ ಯಾವ ರಾಷ್ಟ್ರದಲ್ಲೂ ಈ ರೀತಿಯ ಪರಿಸ್ಥಿತಿ ಇಲ್ಲ. ಹಾಗಾಗಿ ಮತಾಂತರ ಮಾಡಿ, ಸರ್ಕಾರವೇ ಅಧಿಕೃತವಾಗಿ ಹೇಳಿದೆ, ಮಾಡಲು ನಿಮಗೆ ಕಷ್ಟ ಏನು? ಎಂದು ಹೇಳಿದರು.
ಮತಾಂತರ ಮಾಡುವುದು ಕಷ್ಟ ಏನಲ್ಲ. ನಾನು ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಧರ್ಮಕ್ಕೆ ಸೇರಿದವನು. ಜಗತ್ತಿನಲ್ಲಿ ಅನೇಕ ಮತ ಪಂಥಗಳಿವೆ. ಆದರೆ ಅವರಿಗೆಲ್ಲಾ (ಮುಸ್ಲಿಂ) ಒಬ್ಬನೇ ದೇವರು. ಒಬ್ಬ ದೇವರಿಗೆ ಸಮಸ್ಯೆಯಾದ್ರೆ ಆ ಧರ್ಮವೇ ಹೋಯಿತು. ಆದರೆ ನಮಗೆ 33 ಕೋಟಿ ದೇವತೆಗಳು. ನೀವು ರಾಮನನ್ನ ಬೈದರೆ ನಾನು ಸೀತೆಯನ್ನ ಹಿಡಿದುಕೊಳ್ತೀನಿ. ನೀವು ಸೀತೆಗೆ ಕಳಂಕ ತರೋ ಪ್ರಯತ್ನ ಪಟ್ಟರೆ ಶ್ರೀಕೃಷ್ಣ ಇದ್ದಾನೆ. ಕೃಷ್ಣನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನಮಗೆ ಮಂಜುನಾಥಸ್ವಾಮಿ ಇದ್ದಾನೆ. ನೀವು ಮಂಜುನಾಥನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನನಗೆ ಊರಲ್ಲೊಂದು ದೇವಸ್ಥಾನ ಇದೆ. ಎಲ್ಲಿ ಬೇಕಾದರೂ ಹೋಗ್ತೀನಿ ಎಂದರು.
ಅವರಿಗೆ ಹೇಳಿ, ಒಂದೇ ದೇವರು ಒಳ್ಳೆಯದೋ ಅಥವಾ 33 ಕೋಟಿ ದೇವರು ಒಳ್ಳೆಯದೋ? ಅಂತ. ಮಿತ್ರರೇ ಅವರು ಬಂದು ಹೇಳ್ತಾರೆ, ನಮ್ಮದೊಂದೇ ಪುಸ್ತಕ, ನಿಮ್ಮತ್ರ ಬಹಳ ಪುಸ್ತಕ ಇದೆ ಎಂದು. ಆಗ ನೀವು ಹೇಳಿ, ನಮ್ಮತ್ರ ಲೈಬ್ರಿರಿ ಇದೆ, ಯಾವುದೋ ಒಂದು ಪುಸ್ತಕ ಸುಡುವುದರಿಂದ ಹಿಂದೂ ಧರ್ಮ ಸಾಯಲ್ಲ. ನಿಮ್ಮ ಮತ-ಪಂಥಗಳಲ್ಲಿ ಹೆಣ್ಮಕ್ಕಳಿಗೆ ಗೌರವ ಇಲ್ಲ ಎಂದು ಅವರಿಗೆ ಹೇಳಿ. ಇಲ್ಲಿರೋ ಹೆಣ್ಮಕ್ಕಳಿಗೆ ಮುಖ ಮುಚ್ಚಿಕೊಳ್ಳಿ ಅಂತ ಹೇಳಿಲ್ಲ, ಗಂಡು ಮಕ್ಕಳ ಪಕ್ಕದಲ್ಲಿ ಕೂರಬೇಡಿ ಅಂತ ಹೇಳಿಲ್ಲ. ಬರೋರಿಗೆ ಬನ್ನಿ ಅಂತ ಹೇಳಿ, ಬರುವವರನ್ನು ಮುಕ್ತ ಕಂಠದಿಂದ ಸ್ವಾಗತಿಸಿ, ಸಂಖ್ಯೆ ವೃದ್ಧಿಸಲು ಮಕ್ಕಳೇ ಆಗಬೇಕೆಂದಿಲ್ಲ. ನಮ್ಮ ಹೃದಯ ಸ್ವಲ್ಪ ವಿಶಾಲ ಆಗಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ