ಅನ್ಯ ಧರ್ಮದ ಯುವತಿಯರನ್ನ ಪ್ರೀತಿಸಿ ಮದುವೆಯಾಗಿ: ನನ್ನ ಹೇಳಿಕೆಗೆ ನಾನು ಬದ್ಧ ಎಂದ ಸೂಲಿಬೆಲೆ
ಮಂಗಳೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ, ಲವ್ ಜಿಹಾದ್ ಅಂದರೆ ಅವರು ಪ್ರೀತಿ ಅಂತಾರೆ. ಅದಕ್ಕೆ ನಾನು ನೀವು ಕೂಡ ಪ್ರೀತಿ ಮಾಡಿ ಮದುವೆ ಆಗಿ ಅಂತಾ ಹೇಳಿದ್ದೀನಿ. ನಿನ್ನೆಯ ಹೇಳಿಕೆಗೆ ನಾನು ಬದ್ದವಾಗಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಗೆ DYFI ಮತ್ತು SDPI ನಂತಹ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಮಂಗಳೂರು, ಮಾರ್ಚ್ 10: ಅನ್ಯಧರ್ಮಿಯರನ್ನು ಪ್ರೀತಿಸಿ ವಿವಾಹವಾಗಿ ಅಂತಾ ಹಿಂದುಗಳಿಗೆ ಕರೆ ಕೊಟ್ಟಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಹೀಗಿರುವಾಗ ಪ್ರತಿಕ್ರಿಯಿಸಿರುವ ಚಕ್ರವರ್ತಿ ಸೂಲಿಬೆಲೆ, ನಿನ್ನೆಯ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ನಾವು ಲವ್ ಜಿಹಾದ್ಗೆ (Love Jihad) ಬಲಿಯಾಗಬೇಡಿ ಅಂತಾ ಹೇಳಿ ಹೇಳಿ ಸಾಕಾಯಿತು. ಲವ್ ಜಿಹಾದ್ ಅಂದರೆ ಅವರು ಪ್ರೀತಿ ಅಂತಾರೆ. ಅದಕ್ಕೆ ನಾನು ನೀವು ಕೂಡ ಪ್ರೀತಿ ಮಾಡಿ ಮದುವೆ ಆಗಿ ಅಂತಾ ಹೇಳಿದ್ದೇನೆ ಎಂದಿದ್ದಾರೆ.
ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ನಾವು ಕೇಸರಿ ಜಿಹಾದ್ ಮಾಡುತ್ತೀವೆ ಅಂತಾ ಹೇಳುವುದಕ್ಕೆ ಆಗಲ್ಲ. ಹಿಂದು ಧರ್ಮದಲ್ಲಿ ಜಿಹಾದ್ ಅನ್ನವುದೇ ಇಲ್ಲ. ಡಿವೈಎಫ್ಐ ಹಾಗೂ ಎಸ್ಡಿಪಿಐ ನಂತಹ ಪಕ್ಷಗಳು ಇದನ್ನು ವಿರೋಧಿಸಿದೆ ಎಂದರು.
ಇದನ್ನೂ ಓದಿ: ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ: ವ್ಯಾಪಕ ವಿರೋಧ
ವಿದೇಶದಲ್ಲಿ ಮತಾಂತರ ನಿಷೇಧ ಕಾನೂನನ್ನು ಬಹುಸಂಖ್ಯಾತರು ವಿರೋಧಿಸುತ್ತಾರೆ. ಭಾರತದಲ್ಲಿ ಅಲ್ಪಸಂಖ್ಯಾತರೇ ಇದನ್ನು ವಿರೋಧಿಸುತ್ತಿದ್ದಾರೆ. ಎಸ್ಡಿಪಿಐನಿಂದ ಬೆದರಿಕೆ ಹೊಸದಲ್ಲ. ಎನ್ಆರ್ಸಿ, ಸಿಎಎ ವೇಳೆ ನನ್ನ ಮೇಲೆ ದಾಳಿಗೆ ಮುಂದಾಗಿದ್ದರು ಎಂದು ಹೇಳಿದ್ದಾರೆ.
ಮುಸ್ಲಿಂರ ವಿರುದ್ಧ ದ್ವೇಷ ಹುಟ್ಟಿಸಲು ಸೂಲಿಬೆಲೆ ಈ ಹೇಳಿಕೆ ನೀಡಿದ್ದಾರೆ: ಮುನೀರ್ ಕಾಟಿಪಳ್ಳ
ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಟಿವಿ9 ಜೊತೆ ಮಾತನಾಡಿ, ಚಕ್ರವರ್ತಿ ಸೂಲಿಬೆಲೆ ಭಾಷಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮ್ಮಲ್ಲಿ ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು. ಯಾವ ಧರ್ಮ, ಯಾವ ಜಾತಿಯವರನ್ನು ಮದುವೆಯಾಗಲು ನಮ್ಮ ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಅದನ್ನು ಸೂಲಿಬೆಲೆ ಹೇಳಬೇಕಾಗಿಲ್ಲ. ಮುಸ್ಲಿಂ ಹೆಣ್ಣುಮಕ್ಕಳನ್ನು ಹಿಂದೂಗಳು, ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಂರು ಪರಸ್ಪರ ಒಪ್ಪಿಗೆ ಇದ್ದರೆ ಮದುವೆಯಾಗಲು ಯಾವುದೇ ಸಮಸ್ಯೆಗಳಿಲ್ಲ. ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಸೂಲಿಬೆಲೆ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆಗೆ ಎಸ್ಡಿಪಿಐ ಸಂಘಟನೆ ಎಚ್ಚರಿಕೆ
ಚಕ್ರವರ್ತಿ ಸೂಲಿಬೆಲೆ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಎಸ್ಡಿಪಿಎಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ನಿಮ್ಮ ಕುಟುಂಬದ ಎಷ್ಟು ಜನ ಅನ್ಯಧರ್ಮೀಯರನ್ನು ವಿವಾಹವಾಗಿದ್ದಾರೆ? ಹಿಂದೂ ಧರ್ಮದ ಯುವತಿಯರನ್ನು ಮದುವೆಯಾಗಲು ಯಾವ ಧರ್ಮದವರಿಗೆ ಕಾಂಟ್ರ್ಯಾಕ್ಟ್ ಕೊಟ್ಟಿದ್ದೀಯಾ ಎಂದು SDPI ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ಮಂಗಳೂರು: ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ
ಜನಸಂಖ್ಯೆ ನಿಯಂತ್ರಣ ಹೆಸರಿನಲ್ಲಿ ನಿಮ್ಮ ಜಾತಿ ಹೆಣ್ಮಕ್ಕಳ ಸಂಖ್ಯೆಗೆ ಬರ ಬಂದಿದೆ. ಮುಸ್ಲಿಂ ಹುಡುಗಿಯರ ತಂಟೆಗೆ ಬಂದರೆ, ತಕ್ಕ ಶಾಸ್ತ್ರ ಕಂಡುಕೊಂಡಿದ್ದಾರೆ ಹುಷಾರ್ ಎಂದು ಚಕ್ರವರ್ತಿ ಸೂಲಿಬೆಲೆಗೆ ಎಸ್ಡಿಪಿಐ ಸಂಘಟನೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:43 pm, Mon, 10 March 25