ಟೆಂಡರ್ ವಿಚಾರದಲ್ಲಿ ಕೈ – ಕಮಲ ನಾಯಕರ ಕೆಸರೆರೆಚಾಟ; ಉದ್ಘಾಟನೆಗೊಂಡು ವರ್ಷವಾದ್ರೂ ಸಿಗದ ಟೆಂಡರ್ ಭಾಗ್ಯ
ಸ್ಮಾರ್ಟ್ ಸಿಟಿ ಯೋಜನೆಯಿಂದ ಮಂಗಳೂರು ತುಂಬಾ ಸ್ಮಾರ್ಟ್ ಆಗುತ್ತೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದ್ರೆ, ಕಾಮಗಾರಿಯಲ್ಲಿನ ವಿಳಂಬ ಹಾಗೂ ಬೇಕಾಬಿಟ್ಟಿ ಕಾಮಗಾರಿಯಿಂದ ಜನರು ಆ ನಿರೀಕ್ಷೆಯನ್ನೇ ಕೈ ಬಿಟ್ಟಿದ್ದಾರೆ. ಕನಿಷ್ಟ ಪೂರ್ಣಗೊಂಡಿರುವ ಕಾಮಗಾರಿಯಾದರೂ ಜನರ ಉಪಯೋಗಕ್ಕೆ ಸಿಗಬಹುದು ಅಂದುಕೊಂಡಿದ್ದರೆ, ಅಲ್ಲೂ ರಾಜಕೀಯ ಕಾರಣದಿಂದಾಗಿ ನಗರದ ಹಾಟ್ಸ್ಪಾಟ್ ಸ್ಥಳ ಪಾಳು ಬೀಳುವಂತಾಗಿದೆ.
ದಕ್ಷಿಣ ಕನ್ನಡ, ನ.05: ಮಂಗಳೂರಿನ ಸುಂದರ ಪಾರ್ಕ್ ಆಗಿದ್ದ ಕದ್ರಿ ಪಾರ್ಕ್(Kadri Park), ಮಂಗಳೂರಿ(Mangalore)ನ ಬಹುತೇಕ ಜನರ ವೀಕೆಂಡ್ ಹಾಟ್ ಸ್ಪಾಟ್ ಆಗಿತ್ತು. ಸದ್ಯ ಪಾರ್ಕ್ ಚೆನ್ನಾಗಿದ್ರೂ, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸಿ ಪಾರ್ಕ್ ಹೊರಗಿನ ರಸ್ತೆ ಹಾಗೂ ಅದರ ಇಕ್ಕೆಲಗಳಲ್ಲೂ ಅಂಗಡಿಗಳನ್ನು ನಿರ್ಮಿಸಿದ ಬಳಿಕ ಎಲ್ಲಾ ವ್ಯವಸ್ಥೆಗಳು ಬುಡಮೇಲಾಗಿದೆ. ಅಗಲವಿದ್ದ ರಸ್ತೆಯನ್ನು ಕಿರಿದು ಮಾಡಿ ವಾಹನ ಪಾರ್ಕ್ ಮಾಡಲು ಜಾಗ ಇಲ್ಲದಂತೆ ಮಾಡಿರುವುದು ಒಂದೆಡೆಯಾದ್ರೆ, ರಸ್ತೆ ಬದಿಯಲ್ಲಿ ನಿರ್ಮಿಸಿರುವ ಅಂಗಡಿ ಕೋಣೆಗಳು ಪಾಳು ಬೀಳುತ್ತಾ ಇರುವುದು ಇನ್ನೊಂದು ಸಮಸ್ಯೆಯಾಗಿದೆ. ಕದ್ರಿ ಪಾರ್ಕ್ಗೆ ಹೈಟೆಕ್ ಟಚ್ ಕೊಟ್ಟು ಬೀದಿ ಬದಿ ವ್ಯಾಪಾರ ನಿಲ್ಲಿಸಿ, ಹೈಜೆನಿಕ್ ಫುಡ್ ಕೋರ್ಟ್ ಮಾಡುವ ಪ್ಲಾನ್ ಸದ್ಯಕ್ಕೆ ಪ್ಲಾಪ್ ಆಗಿದೆ.
ಟೆಂಡರ್ ವಿಚಾರದಲ್ಲಿ ಕೈ – ಕಮಲ ನಾಯಕರ ಕೆಸರೆರೆಚಾಟ
ಹೌದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆಯಲಾದ ಟೆಂಡರ್ ರದ್ದು ಮಾಡಿ ತಮ್ಮ ಪಕ್ಷದವರಿಗೆ ನೀಡಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಶಾಸಕರು ಆರೋಪ ಮಾಡಿದ್ದಾರೆ. ಕದ್ರಿ ಪಾರ್ಕ್ ರಸ್ತೆಯನ್ನು ಸುಮಾರು 16 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿ ಮಾಡಲಾಗಿದ್ದು, ಇಲ್ಲಿರುವ 38 ಅಂಗಡಿ ಕೋಣೆಗಳಿಗೆ 12 ಕೋಟಿ ರೂ ವ್ಯಯಿಸಲಾಗಿದೆ. ಕಾಮಗಾರಿ ಉದ್ಘಾಟನೆಗೊಂಡು ಹತ್ತು ತಿಂಗಳಾಗಿದ್ದರೂ ಯಾವುದೇ ಅಂಗಡಿಗಳೂ ಓಪನ್ ಆಗುವ ಲಕ್ಷಣ ಇಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆಯಲಾಗಿದ್ದು, ಅದು ಒಬ್ಬ ವ್ಯಕ್ತಿಗೆ ಎಲ್ಲಾ ಅಂಗಡಿಗಳನ್ನು ನೀಡುವ ಪ್ರಸ್ತಾಪವಾಗಿತ್ತು. ಹೀಗಾಗಿ ಹೊಸ ಸರ್ಕಾರ ಬಂದ ತಕ್ಷಣ ಆ ಟೆಂಡರ್ ರದ್ದು ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದವರು ಸ್ಪಷ್ಟನೆ ನೀಡಿದ್ದಾರೆ.
ಸ್ಥಳಿಯಾಡಳಿತದ ಕಟ್ಟಡಗಳನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿ ಹಂಚಿಕೆ ಮಾಡಬೇಕು ಎನ್ನುವ ನಿಯಮ ಇದೆ. ಹಿಂದಿನ ಟೆಂಡರ್ನಲ್ಲಿ ಅದು ಮಾಡದೆ, ಶಾಸಕರು ತಮ್ಮವರಿಗೆ ನೀಡಲು ಒಬ್ಬರಿಗೆ ಎಲ್ಲಾ ಅಂಗಡಿ ನೀಡಿದ ಕಾರಣ ಆ ಟೆಂಡರ್ ರದ್ದು ಮಾಡಲಾಗಿದೆ ಎಂದು ಕಾಂಗ್ರೆಸ್ನವರು ಸಮಜಾಯಿಶಿ ನೀಡುತ್ತಿದ್ದಾರೆ. ಮಂಗಳೂರು ನಗರದಲ್ಲಿ ಪೂರ್ಣಗೊಂಡು ಕಣ್ಣಿಗೆ ಕಾಣುತ್ತಿರುವ ಏಕೈಕ ಸ್ಮಾರ್ಟ್ ಸಿಟಿ ಕಾಮಗಾರಿ ಈ ಕದ್ರಿ ಪಾರ್ಕ್ನ ರಸ್ತೆ ಹಾಗೂ ಅಂಗಡಿಗಳು ಅಲ್ಪ ಪೂರ್ಣಗೊಂಡಿದ್ದರೂ ಕೂಡ ಜನರ ಉಪಯೋಗಕ್ಕೆ ಸಿಗದಂತಾಗಿದೆ. ರಾಜಕೀಯ ಕಾರಣ ಇಟ್ಟುಕೊಂಡು ಸದ್ಯ ಟೆಂಡರ್ ವಿಳಂಬ ಆಗುತ್ತಿದೆ ಎನ್ನುವುದು ರಾಜಕೀಯ ನಾಯಕರ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ. ಸರ್ಕಾರ ಆದಷ್ಟು ಶೀಘ್ರವಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿ, ಈ ಟೆಂಡರ್ ವಿವಾದಕ್ಕೆ ತೆರೆ ಎಳೆಯಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ