ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್ ರಾಮಯ್ಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್

| Updated By: Rakesh Nayak Manchi

Updated on: Mar 17, 2024 | 6:24 PM

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಘೋಷಣೆಯಾಗಿದೆ. ಇನ್ನೊಂದೆಡೆ, ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ವಾಪಸ್ ಆಗಿದ್ದು, ಬಿಜೆಪಿಗೆ ಮತ್ತಷ್ಟು ಬಲ ತಂದಿದೆ. ಈ ನಡುವೆ, ಚೌಟಗೆ ಪ್ರಬಲ ಎದುರಾಳಿ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್​ ಕಸರತ್ತು ನಡೆಸುತ್ತಿದ್ದು, ಈ ಬಾರಿ ಬಿಲ್ಲವ ಸಮುದಾಯದ ನಾಯಕನಿಗೆ ಮಣೆ ಹಾಕಲು ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್ ರಾಮಯ್ಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್
ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್ ರಾಮಯ್ಯ ಮತ್ತು ಕ್ಯಾ, ಬ್ರಿಜೇಶ್ ಚೌಟ
Follow us on

ಮಂಗಳೂರು, ಮಾ.17: ದಕ್ಷಿಣ ಕನ್ನಡ (Dakshina Kannada) ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕ್ಯಾ.ಬ್ರಿಜೇಶ್ ಚೌಟ (Captain Brijesh Chowta) ಅವರಿಗೆ ಘೋಷಣೆಯಾಗಿದೆ. ಇನ್ನೊಂದೆಡೆ, ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ವಾಪಸ್ ಆಗಿದ್ದು, ಬಿಜೆಪಿಗೆ ಮತ್ತಷ್ಟು ಬಲ ತಂದಿದೆ. ಈ ನಡುವೆ, ಚೌಟಗೆ ಪ್ರಬಲ ಎದುರಾಳಿ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್ (Congress)​ ಕಸರತ್ತು ನಡೆಸುತ್ತಿದ್ದು, ಈ ಬಾರಿ ಬಿಲ್ಲವ ಸಮುದಾಯದ ನಾಯಕನಿಗೆ ಮಣೆ ಹಾಕಲು ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.

ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಂಟ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ ಸಮುದಾಯಕ್ಕೆ ಸೇರಿದ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಬಂಟ್ ಸಮುದಾಯದ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಮೋದಿ ಅಲೆಗೆ ಮಿಥುನ್ ರೈ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿದ ಕಾಂಗ್ರೆಸ್, ಜಿಲ್ಲೆಯ ಅತಿ ದೊಡ್ಡ ಸಮುದಾಯವಾದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಪೈಪೋಟಿ ನಡೆಸಲು ಪ್ಲಾನ್ ಮಾಡಿದೆ.

ಜನಾರ್ದನ ಪೂಜಾರಿ ಆಪ್ತನಿಗೆ ಕಾಂಗ್ರೆಸ್ ಟಿಕೆಟ್?

ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಆಪ್ತರಾಗಿರುವ ಪದ್ಮರಾಜ್ ರಾಮಯ್ಯ (Padmaraj Ramaiah) ಅವರಿಗೆ ಟಿಕೆಟ್ ನೀಡಲು ಪಕ್ಷದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ಡೈಜಿವರ್ಲ್ಡ್ ವರದಿ ಮಾಡಿದೆ. ಅದಾಗ್ಯೂ, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಸುಧಾಕರ್ ಅವರಂತಹ ಅನುಭವಿ ಅಭ್ಯರ್ಥಿಗಳು ಟಿಕೆಟ್​ ರೇಸ್​ನಲ್ಲಿದ್ದಾರೆ.

ಇದನ್ನೂ ಓದಿ: ಮಾಜಿ ಅಧ್ಯಕ್ಷ ಕಟೀಲ್​​ ಸೈಡ್ ಹೊಡೆದು ಲೋಕಸಭಾ ಟಿಕೆಟ್ ಗಿಟ್ಟಿಸಿಕೊಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ ಯಾರು?

ಕಳೆದ 15 ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಹಿಡಿತದಲ್ಲಿದೆ. ಸತತ ಮೂರು ಬಾರಿ ನಳಿನ್ ಕುಮಾರ್ ಕಟೀಲ್ ಅವರು ಗೆದ್ದುಕೊಂಡುಬಂದಿದ್ದಾರೆ. ಈ ಬಾರಿ ಮಾಜಿ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ಭದ್ರಕೋಟೆ ಪುತ್ತೂರು ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭೆ ಚುನಾವಣೆಯಲ್ಲೂ ಪಕ್ಷೇತರವಾಗಿ ಸ್ಪರ್ಧಿಸುವ ಘೋಷಣೆಯನ್ನು ಪುತ್ತಿಲ ಪರಿವಾರ ಘೋಷಿಸಿತ್ತು.

ಈ ಘೋಷಣೆಯು ಬಿಜೆಪಿ ನಾಯಕರಿಗೆ ತಲೆಬಿಸಿಯಾದರೆ, ಇತ್ತ, ಪುತ್ತಿಲ ಪರಿವಾರ-ಬಿಜೆಪಿ ನಡುವಿನ ತಿಕ್ಕಾಟವು ತಮಗೆ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಕನಸನ್ನು ಕಾಂಗ್ರೆಸ್​ ನಾಯಕರು ಕಂಡಿದ್ದರು. ಆದರೆ, ನಿರಂತರ ಸಂಧಾನದ ನಂತರ ಪುತ್ತಿಲ ಅವರು ಬಿಜೆಪಿಗೆ ವಾಪಸ್ ಆಗಿದ್ದಾರೆ. ಇದರಿಂದಾಗಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಂತಾಗಿದ್ದು, ನಾಲ್ಕನೇ ಬಾರಿ ಕ್ಷೇತ್ರ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿ ಕೇಸರಿ ನಾಯಕರಿದ್ದಾರೆ. ಆದರೆ, ಪ್ರಬಲ ನಾಯಕರ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಅಂತಿಮವಾಗಿ ಚೌಟ ವಿರುದ್ಧ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ