ಅಬ್ದುಲ್ ರಹಿಮಾನ್ ಹತ್ಯೆ ಕೇಸ್​: ಕಾಂಗ್ರೆಸ್ ನಾಯಕರ ರಾಜೀನಾಮೆಗೆ ಮುಸ್ಲಿಂ ಮುಖಂಡರ ಆಗ್ರಹ

ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಮುಸ್ಲಿಂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡುವಂತೆ ಆಗ್ರಹಿಸಿದ್ದಾರೆ. 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಬ್ದುಲ್ ರಹಿಮಾನ್ ಹತ್ಯೆ ಕೇಸ್​: ಕಾಂಗ್ರೆಸ್ ನಾಯಕರ ರಾಜೀನಾಮೆಗೆ ಮುಸ್ಲಿಂ ಮುಖಂಡರ ಆಗ್ರಹ
ಮೃತ ಅಬ್ದುಲ್ ರಹಿಮಾನ್
Edited By:

Updated on: May 28, 2025 | 11:09 AM

ಮಂಗಳೂರು, ಮೇ 28: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದಲ್ಲಿ (Bantwala) ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸರ್ಕಾರ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮೂಹಿಕ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಜಿಲ್ಲೆಗೆ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನು, ಪ್ರಕರಣ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ನಿಸಾ‌ರ್ ಎಂಬುವರು ನೀಡಿದ ದೂರು ಆಧರಿಸಿ, ಅಬ್ದುಲ್ ರಹಿಮಾನ್​ಗೆ ಪರಿಚಯಸ್ಥರೇ ಆಗಿರುವ ದೀಪಕ್ ಮತ್ತು ಸುಮಿತ್ ಸೇರಿದಂತೆ 15 ಜನರ ವಿರುದ್ಧ ಬಿಎನ್​ಎಸ್​ ಕಾಯ್ದೆ 103, 109, 118(1), 118(2), 190, 191(1), 191(2), 191(3)ರ ಅಡಿ ಎಫ್​ಐಆರ್​ ದಾಖಲಾಗಿದೆ.

“ಅಬ್ದುಲ್ ರಹಿಮಾನ್ ಮತ್ತು ನಾನು (ಕಲಂದರ್ ಶಾಫಿ) ಪಿಕ್ ಅಪ್ ವಾಹನದಲ್ಲಿನ ಮರಳನ್ನು ಅನ್​ ಲೋಡ್ ಮಾಡಲು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆಗೆ ಹೋಗಿದ್ದೇವು. ಈ ವೇಳೆ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ದಾಳಿ ಮಾಡಿದ್ದಾರೆ. ಚಾಲಕನ ಸೀಟಿನಲ್ಲಿ ಕುಳಿತಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು, ಅವರ ಮೇಲೆ ತಲವಾರು, ಚೂರಿ, ರಾಡ್​ಗಳಿಂದ ಹಲ್ಲೆ ಮಾಡಿದರು. ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾದರು” ಎಂದು ಹಲ್ಲೆಗೊಳಗಾದ ಕಲಂದ‌ರ್ ಶಾಫಿ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಮೊಹಮ್ಮದ್ ನಿಸಾ‌ರ್ ಎಂಬವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ.

ಇದನ್ನೂ ಓದಿ
VHP ಮುಖಂಡ ಶರಣ್ ಪಂಪ್ವೆಲ್ ಅರೆಸ್ಟ್: ಹಿಂದೂ ಕಾರ್ಯಕರ್ತರ ಜಮಾವಣೆ
ಬಂಟ್ವಾಳ ಅಬ್ದುಲ್ ಹತ್ಯೆ​: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು: ಓರ್ವನ ಬರ್ಬರ ಕೊಲೆ
ಸುಹಾಸ್ ಶೆಟ್ಟಿ ಕೊಲೆ ಆರೋಪಿ ಮೇಲೆ ಜೈಲಲ್ಲೇ ಸಹ ಕೈದಿಗಳಿಂದ ಅಟ್ಯಾಕ್‌

15 ಮಂದಿ ವ್ಯವಸ್ಥಿತವಾಗಿ ಹತ್ಯೆ ಮಾಡಿದ್ದಾರೆ: ಎಸ್​ಡಿಪಿಐ ಜಿಲ್ಲಾಧ್ಯಕ್ಷ

ಕೊಲ್ತಮಜಲು ಬಳಿ ಪಿಕಪ್ ಚಾಲಕನಾಗಿದ್ದ ಮುಸ್ಲಿಂ ಯುವಕನಿಗೆ ಮರಳು ಲೋಡ್​ಗೆ ಕರೆದಿದ್ದರು. ಸಂಘ ಪರಿವಾರಕ್ಕೆ ಸೇರಿದ ಗೂಂಡಾ ಪಡೆ ಏಕಾಏಕಿ ತಲವಾರಿನಿಂದ ದಾಳಿ ನಡೆಸಿದೆ. ಇಮ್ತಿಯಾಜ್ ಆಲಿಯಾಸ್ ಅಬ್ದುಲ್ ರಹಿಮಾನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಕೆಲ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆ. ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೊನ್ನೆ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಹೇಳಿದ್ದಾನೆ. ಮತ್ತೊಬ್ಬ ಭರತ್ ಕುಮ್ಡೇಲ್ ಎಂಬ ಗೂಂಡಾ ಪೋಸ್ಟ್​ಮಾರ್ಟ್ಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡುತ್ತೇನೆ ಎಂದಿದ್ದಾನೆ ಎಂದು ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದರು.

ಅಬ್ದುಲ್​ ರಹಿಮಾನ್​ ಹತ್ಯೆಗೆ ಗುಂಡೂರಾವ್​ ಖಂಡನೆ

ಮಂಗಳೂರಿನ ಬಂಟ್ವಾಳದ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ಯುವಕನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ DG &IGP ಹಾಗೂ ಕಾನೂನು ಸುವ್ಯವಸ್ಥೆ ADGP ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಸೂಕ್ತ ಬಿಗಿ ಕಾನೂನು ಕ್ರಮಗಳನ್ನ ಜರುಗಿಸುವಂತೆ ಸೂಚನೆ ನೀಡಿದರು. ಅಲ್ಲದೇ ಮಂಗಳೂರು ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಅವರೊಂದಿಗೆ ಮಾತನಾಡಿದ ಸಚಿವರು ಮಂಗಳೂರಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದರು. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನೂ ಓದಿ: ವಿಜಯಪುರ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ ಕಳ್ಳತನ

ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲು ನಿರ್ಧಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಜಿಲ್ಲಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್​ಗೆ ಕ್ರಮ ಕೈಗೊಳ್ಳಲಾಗಿದೆ. ಉಡುಪಿ, ಚಿಕಮಗಳೂರು, ಮೈಸೂರು, ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಪಡೆ ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಆಯಕಟ್ಟಿನ ಸ್ಥಳಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಅನುಮಾನಾಸ್ಪದ ಚಟುವಟಿಕೆ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Wed, 28 May 25