ವಿಜಯಪುರ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಕಳ್ಳತನ
ಇತ್ತೀಚಿಗೆ ಕರ್ನಾಟಕದಲ್ಲಿ ಬ್ಯಾಂಕ್ ಕಳ್ಳತನ ಪ್ರಕರಣಗಳು ಸಾಮಾನ್ಯವಾಗಿವೆ. ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬ್ಯಾಂಕ್ನಲ್ಲಿ ಕಳ್ಳತನವಾಗಿತ್ತು. ಸಾಮಾನ್ಯವಾಗಿ ಕಳ್ಳರು ಬ್ಯಾಂಕ್ ಒಳಗೆ ನುಗ್ಗಿ ಹಣ ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗುತ್ತಾರೆ. ಆದರೆ, ವಿಜಯಪುರ ಜಿಲ್ಲೆಯ ಬಸವನವಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ನಡೆದ ಕಳ್ಳತನ ಮಾತ್ರ ವಿಚಿತ್ರವಾಗಿದೆ. ಕಳ್ಳರು ಬ್ಯಾಂಕ್ನಲ್ಲಿನ ಹಣ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಲ್ಲದೇ ಬ್ಯಾಂಕ್ನಲ್ಲೇ ವಾಮಾಚಾರ ಮಾಡಿದ್ದಾರೆ. ಇಲ್ಲಿದೆ ವಿವರ

ವಿಜಯಪುರ, ಮೇ 28: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ (Basavan Bagewadi) ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ (Canara Bank) ಕಳ್ಳತನವಾಗಿದೆ. ಬ್ಯಾಂಕ್ ಬಾಗಲಿನ ಬೀಗ ಮುರಿದು, ಕಿಟಕಿಯ ಬಾರ್ಗಳನ್ನು ಕಟ್ ಮಾಡಿ ಒಳಗೆ ನುಗ್ಗಿದ ಕಳ್ಳರು ಮೊದಲು ವಾಮಾಚಾರ ಮಾಡಿದ್ದಾರೆ. ಬಳಿಕ, ಬ್ಯಾಂಕ್ನಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಇಷ್ಟೇ ಅಲ್ಲದೇ, ಬ್ಯಾಂಕ್ನಲ್ಲಿ ಸಿಸಿ ಕ್ಯಾಮೆರಾಗಳ ಹಾರ್ಡ್ ಡ್ರೈವ್ ಕೂಡ ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಈ ಚಾಲಾಕಿತನ ಪೊಲೀಸರ ನಿದ್ದೆಗೆಡಸಿದೆ.
ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು, ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬೆರಳಚ್ಚು ತಂಡ ಪರಿಶೀಲನೆ ನಡೆಸಿದೆ. ಕೆನರಾ ಬ್ಯಾಂಕ್ ಸಿಬ್ಬಂದಿ ಲೆಕ್ಕಪತ್ರಗಳನ್ನು ತಿರುವಿ ಹಾಕುತ್ತಿದ್ದಾರೆ. ಕೆನರಾ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಸಹ ಆಗಮಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆದರೆ, ಎಷ್ಟು ಹಣ ಮತ್ತು ಚಿನ್ನಾಭರಣ ಕಳ್ಳತನವಾಗಿದೆ ಎಂಬುವುದಕ್ಕೆ ನಿಖರವಾದ ಅಂಕಿ-ಸಂಖ್ಯೆಗಳು ಇನ್ನೂ ಬಹಿರಂಗವಾಗಿಲ್ಲ.
ಬ್ಯಾಂಕ್ ಒಳಗೆ ನುಗ್ಗಿರುವ ಕಳ್ಳರು ಸೈರನ್ ಮೊಳಗದಂತೆ ನೋಡಿಕೊಂಡಿದ್ದಾರೆ. ಸಿಸಿ ಕ್ಯಾಮೆರಾಗಳ ಹಾರ್ಡ್ ಡ್ರೈವ್ ತೆಗೆದುಕೊಂಡು ಹೋಗಿದ್ದಾರೆ. ಇನ್ನು, ಮನಗೂಳಿ ಪಟ್ಟಣ ಪಂಚಾಯತಿಯಿಂದ ಪ್ರಮುಖ ಭಾಗಗಳಲ್ಲಿ 35 ಸಿಸಿ ಕ್ಯಾಮೆರಾಮಗಳನ್ನು ಅಳವಡಿಕೆ ಮಾಡಲಾಗಿದ್ದು, ತನಿಖಾಧಿಕಾರಿಗಳು ಅವುಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳ ಪರಿಶೀಲನಾ ಕಾರ್ಯ ಕೂಡ ನಡೆದಿದೆ. ಮೂಲಗಳ ಪ್ರಕಾರ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ ಎನ್ನಲಾಗಿದೆ. ಆದರೆ, ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ಯಾವುದೇ ಮಾಹಿತಿ ನೀಡದೆ ಇರುವುದು ಗ್ರಾಹಕರಲ್ಲಿ ಭಯ ಹುಟ್ಟಿಸಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಬ್ಯಾಂಕ್ನಲ್ಲಿಟ್ಟಿದ್ದೇವೆ. ಈಗ ಕೆನರಾ ಬ್ಯಾಂಕ್ ಕಳ್ಳತನವಾಗಿ ಸಮಸ್ಯೆಯಾಗಿದೆ. ನಮ್ಮ ಚಿನ್ನಾಭರಣ ಹಾಗೂ ನಗದು ಹಣಕ್ಕೆ ಬ್ಯಾಂಕ್ನವರೇ ಹೊಣೆ. ನಮ್ಮ ಹಣ ಹಾಗೂ ಚಿನ್ನಾಭರಣಗಳನ್ನು ಬ್ಯಾಂಕ್ನವರೇ ನಮಗೆ ವಾಪಸ್ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆಂದು ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ಇಂಡಸ್ಟ್ರಿಯಲ್ ಹಬ್ ವಿರೋಧ ಸಿಡಿದೆದ್ದ ರೈತರು: ದೊಡ್ಡ ಮಟ್ಟದ ಹೋರಾಟಕ್ಕೆ ಅಣಿ
ವಿಜಯಪುರದಲ್ಲಿ 10 ವರ್ಷಗಳ ಹಿಂದೆ ಸಿದ್ದೇಶ್ವರ ಸಹಕಾರಿ ಬ್ಯಾಂಕ್ನಲ್ಲಿ ಕಳ್ಳತನವಾಗಿತ್ತು. ಇದೀಗ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಕಳ್ಳತನವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Wed, 28 May 25







