ದಕ್ಷಿಣ ಕನ್ನಡ: 18 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ, ರೌಡಿಗಳಿಗೆ ಎಸ್​ಪಿ ವಾರ್ನಿಂಗ್​​​​

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡದಲ್ಲಿ ಇತ್ತೀಚಿಗೆ ನಕ್ಸಲ್​​ರ ಓಡಾಟ ಹೆಚ್ಚಾಗಿದೆ. ಏಪ್ರಿಲ್ 26 ರಂದು ನಡೆಯುವ ಮತದಾನದಂದು ಯಾವುದೆ ಅಹಿತಕರ ಘಟನೆ ಸಂಭವಿಸಬಾರದೆಂದು ​ದಕ್ಷಿಣ ಕನ್ನಡ ಜಿಲ್ಲಾಡಳಿತ 18 ನಕ್ಸಲ್​ ಪೀಡಿತ ಪ್ರದೇಶಗಳನ್ನು ಗುರುತಿಸಿದ್ದು, ಕಟ್ಟೆಚ್ಚರ ವಹಿಸಿದೆ.

ದಕ್ಷಿಣ ಕನ್ನಡ: 18 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ, ರೌಡಿಗಳಿಗೆ ಎಸ್​ಪಿ ವಾರ್ನಿಂಗ್​​​​
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
Edited By: ವಿವೇಕ ಬಿರಾದಾರ

Updated on: Apr 24, 2024 | 12:48 PM

ಮಂಗಳೂರು, ಏಪ್ರಿಲ್​ 24: ಲೋಕಸಭೆ ಚುನಾವಣೆಯ (Lok Sabha Election) ಕರ್ನಾಟಕದ ಮೊದಲ ಹಂತದ ಮತದಾನ (Voting) ಏಪ್ರಿಲ್​ 26 ರಂದು ನಡೆಯಲಿದೆ. ಮತದಾನ ಪ್ರಕ್ರಿಯೆ ಯಾವುದೇ ಅಡಚಣೆ ಇಲ್ಲದಂತೆ ನಿರ್ವಿಘ್ನವಾಗಿ ನಡೆಯಲೆಂದು ದಕ್ಷಿಣ ಕನ್ನಡ (Dakshin Kannada) ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಚುನಾವಣೆ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರ ಆತಂಕ ಹೆಚ್ಚಾಗಿದೆ. ಹೀಗಾಗಿ ಪೊಲೀಸ್​ ಇಲಾಖೆ 18 ನಕ್ಸಲ್ (Naxal) ಪೀಡಿತ ಪ್ರದೇಶವನ್ನ ಗುರುತಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಪೊಲೀಸ್ ಕಮೀಷನರ್ ಅನುಪಮ್ ಅಗರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಎಸ್​ಪಿ ರಿಷ್ಯಂತ್ ಸಿ.ಬಿ ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಸಿಎಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯೊಂದಿಗೆ ನಕ್ಸಲ್ ನಿಗ್ರಹ ಪಡೆ ಕಣ್ಗಾವಲಿಗೆ ಇರಲಿದೆ. ನಕ್ಸಲ್ ನಿಗ್ರಹ ಪಡೆ ಈಗಾಗಲೆ ಕಾಡಿನಲ್ಲಿ ಕೂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ. ಮತದಾರರು ಯಾವುದೇ ಆತಂಕ ಇಲ್ಲದೆ, ಅನುಮಾನ ಇಲ್ಲದೆ ಮತದಾನ ಮಾಡಿ ಎಂದು ಹೇಳಿದರು.

ಏನೇ ಸಮಸ್ಯೆ ಆದರೂ ನಮಗೆ ತಿಳಿಸಿ. ನೈತಿಕ ಪೊಲೀಸ್ ಗಿರಿ ನಡೆಸುವುದು, ಅಡ್ಡಗಟ್ಟುವುದು ಮಾಡಿದರೆ ಸಹಿಸಲ್ಲ. ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. 1600 ಪೊಲೀಸ್ ಸಿಬ್ಬಂದಿಗಳನ್ನು ಮತಗಟ್ಟೆಯಲ್ಲಿ ನಿಯೋಜನೆ ಮಾಡಲಾಗಿದೆ. ಸಿ.ಎ.ಪಿಎಫ್, ಕೆ.ಎಸ್.ಆರ್.ಪಿ, 560 ಹೋಮ್ ಗಾರ್ಡ್, ಎ.ಎನ್.ಎಫ್, ಫಾರೆಸ್ಟ್ ಗಾರ್ಡ್ಸ್ ಭದ್ರತೆಗೆ ಇರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಪತ್ತೆ

ಇಂದು (ಏ.24) ಸಂಜೆ 6 ಗಂಟೆ ಬಳಿಕ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಇರಬಾರದು. ಸಂಜೆ 6 ಗಂಟೆಗೆಯಿಂದ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತದೆ. ಆ ಬಳಿಕ ರ್ಯಾಲಿ, ಬೀದಿ ಬೀದಿ ಪ್ರಚಾರಗಳು ಮಾಡುವಂತಿಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡುವ ಅವಕಾಶ ಬಿಟ್ಟು ಬೇರೆ ಯಾವುದೇ ಅವಕಾಶ ಇಲ್ಲ. ಸಂಜೆ 6 ಗಂಟೆಯಿಂದ ಎಪ್ರಿಲ್ 26ರವರೆಗೆ ಮದ್ಯ ಮಾರಾಟ ನಿಷೇಧಿಸಿದ್ದೇವೆ. ಕೇರಳದಲ್ಲಿಯೂ ಅದೇ ದಿನ ಚುನಾವಣೆ ಇರುವುದರಿಂದ ಅಲ್ಲಿಯೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಖಾಸಗಿ ಕಾರ್ಯಕ್ರಮದ ನೆಪದಲ್ಲಿ ರಾಜಕೀಯ ಕಾರ್ಯಕ್ರಮ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದರು.

ಭದ್ರತೆ ದೃಷ್ಟಿಯಿಂದ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 1157 ರೌಡಿ ಆಸಾಮಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. 75 ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. 806 ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಷರತ್ತು ಉಲ್ಲಂಘನೆ ಮಾಡಿದರೆ ಅಂತವರ ಬಾಂಡ್ ಹಣ ಮುಟ್ಟುಗೋಲು ಹಾಕುತ್ತೇವೆ. 8 ಜನ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೂ ಕ್ರಮ ಆಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಹೇಳಿದರು.

ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us