AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಸ್ತೆ ಗುಂಡಿಗೆ ಬಿದ್ದು ಪ್ರಾಣ ಹೋದರೆ ಇಂಜಿನಿಯರ್‌ಗಳೇ ನೇರ ಹೊಣೆ’: ಸಚಿವ ಯು.ಟಿ.ಖಾದರ್ ಖಡಕ್ ವಾರ್ನಿಂಗ್

ಸಚಿವ ಯು.ಟಿ. ಖಾದರ್ ದಕ್ಷಿಣ ಕನ್ನಡದಲ್ಲಿ ಮಳೆಗಾಲದ ವಿಪತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಸ್ತೆ ಹೊಂಡಗಳಿಂದ ಅಪಘಾತ ಸಂಭವಿಸಿದರೆ ಎಂಜಿನಿಯರ್‌ಗಳೇ ಹೊಣೆಗಾರರು ಎಂದು ಎಚ್ಚರಿಸಿದ್ದಾರೆ. ವಿದ್ಯುತ್ ಸಂಪರ್ಕ ಹಾಗೂ ರಸ್ತೆ ತೆರವು ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸಲು ಆದೇಶಿಸಿದ್ದಾರೆ. ತಳಮಟ್ಟದಿಂದಲೇ ವಿಪತ್ತು ನಿರ್ವಹಣೆಯನ್ನು ಬಲಪಡಿಸಲು ಗ್ರಾಮ ಪಂಚಾಯಿತಿಗಳಿಗೆ ನೋಡಲ್ ಅಧಿಕಾರಿಗಳ ನೇಮಕಕ್ಕೂ ಸೂಚಿಸಿದ್ದಾರೆ.

‘ರಸ್ತೆ ಗುಂಡಿಗೆ ಬಿದ್ದು ಪ್ರಾಣ ಹೋದರೆ ಇಂಜಿನಿಯರ್‌ಗಳೇ ನೇರ ಹೊಣೆ': ಸಚಿವ ಯು.ಟಿ.ಖಾದರ್ ಖಡಕ್ ವಾರ್ನಿಂಗ್
ಯು.ಟಿ. ಖಾದರ್Image Credit source: Tv9 kannada
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Jun 08, 2026 | 9:13 PM

Share

ಮಂಗಳೂರು, ಜೂ.8: ಮಳೆಗಾಲದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ವಿಪತ್ತುಗಳನ್ನು ಎದುರಿಸಲು ಅಧಿಕಾರಿಗಳು ಅತ್ಯಂತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ತುರ್ತು ಸಂದರ್ಭ ಎದುರಾದಾಗ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿಯೂ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆದೇಶಿಸಿದರು.

ಸಭೆಯಲ್ಲಿ ರಸ್ತೆಗಳ ದುರಸ್ತಿ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಮಳೆಗಾಲದಲ್ಲಿ ರಸ್ತೆ ಹೊಂಡಗಳಿಂದಾಗಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಉಂಟಾದರೆ, ಅದಕ್ಕೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು. ಕೇವಲ ತಾತ್ಕಾಲಿಕವಾಗಿ ಪದೇ ಪದೇ ಗುಂಡಿ ಮುಚ್ಚುವ ನಾಟಕವಾಡುವುದನ್ನು ಬಿಟ್ಟು, ರಸ್ತೆಗಳ ಶಾಶ್ವತ ಕಾಮಗಾರಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.

ಮಳೆಗಾಲದಲ್ಲಿ ಸುರಿಯುವ ಭಾರೀ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಮುರಿದು ಬಿದ್ದು ಉಂಟಾಗುವ ಅನಾಹುತಗಳನ್ನು ಮತ್ತು ಮಾನವ ನಿರ್ಮಿತ ಸಮಸ್ಯೆಗಳನ್ನು ತಗ್ಗಿಸಲು ಇಲಾಖೆ ಗಮನಹರಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ತ್ವರಿತವಾಗಿ ಮರುಸ್ಥಾಪಿಸಲು ಹೆಚ್ಚುವರಿ ಲೈನ್‌ಮ್ಯಾನ್‌ಗಳು ಹಾಗೂ ತುರ್ತು ವಾಹನಗಳನ್ನು ಬಳಸಿಕೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ನೆರೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡರೆ ಅಥವಾ ಮರಗಳು ಬಿದ್ದರೆ ಆಯಾ ಸ್ಥಳೀಯ ಸಂಸ್ಥೆಗಳು ಯಾವುದೇ ವಿಳಂಬ ಮಾಡದೇ ತಕ್ಷಣವೇ ತೆರವುಗೊಳಿಸಬೇಕು ಎಂದರು.

ಇದನ್ನೂ ಓದಿ: ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ವಿಪತ್ತು ನಿರ್ವಹಣೆಯನ್ನು ತಳಮಟ್ಟದಿಂದಲೇ ಬಲಪಡಿಸಲು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಚಿವರು ಆದೇಶಿಸಿದರು. ಯಾವುದೇ ಭಾಗದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಂಘ-ಸಂಸ್ಥೆಗಳನ್ನು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ ಸಚಿವರು, ಮಳೆಗಾಲದ ಸವಾಲುಗಳನ್ನು ಎದುರಿಸಲು ಇಡೀ ಜಿಲ್ಲಾಡಳಿತ ಸನ್ನದ್ಧವಾಗಿರಬೇಕು ಎಂದು ಸೂಚನೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶೋಕ್​ ಪೂಜಾರಿ, ಮಂಗಳೂರು
ಅಶೋಕ್​ ಪೂಜಾರಿ, ಮಂಗಳೂರು

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More