ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಗಮನ ಸೆಳೆಯಲು ಕ್ರಿಕೆಟ್, ತ್ರೋಬಾಲ್ ಪಂದ್ಯಾಟ, ಪೋಸ್ಟ್ ಕಾರ್ಡ್ ಅಭಿಯಾನ!
ಕಡಲನಗರಿ ಮಂಗಳೂರು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮಹಾನಗರ. ಪ್ರತಿ ಕ್ಷೇತ್ರಗಳಲ್ಲಿಯೂ ಮಹತ್ವದ ಅಭಿವೃದ್ದಿಯನ್ನು ಕಾಣುತ್ತಿರುವ ಈ ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕೆನ್ನುವುದು ದಶಕಗಳ ಬೇಡಿಕೆ. ಇದೀಗ ಆ ಬೇಡಿಕೆ ಮತ್ತಷ್ಟು ಬಲಗೊಳ್ಳುತ್ತಿದ್ದು ನ್ಯಾಯವಾದಿಗಳು ಒಟ್ಟು ಸೇರಿ ಚಳವಳಿ ನಡೆಸಲು ಮುಂದಾಗಿದ್ದಾರೆ.
ಮಂಗಳೂರು, ಡಿಸೆಂಬರ್ 14: ಕಡಲ ನಗರಿ ಮಂಗಳೂರು ಕೈಗಾರಿಕಾ, ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಹೊಂದುತ್ತಿರುವ ನಗರ. ಇಲ್ಲಿನ ಹಾಗೂ ಸುತ್ತಮುತ್ತಲ ಜಿಲ್ಲೆಯ ಜನರಿಗೆ ಸೂಕ್ತ ಹಾಗೂ ತ್ವರಿತ ನ್ಯಾಯ ಸಿಗಬೇಕೆಂಬ ಹಿನ್ನಲೆಯಲ್ಲಿ ಇಲ್ಲಿ ಹೈಕೋರ್ಟ್‌ನ ಪೀಠ ಸ್ಥಾಪನೆಯಾಗಬೇಕೆಂಬ ಬೇಡಿಕೆ ಬಹುಕಾಲದ್ದು. 2008ರಲ್ಲಿ ಈ ಬಗ್ಗೆ ಹೋರಾಟ ಆರಂಭವಾಗಿದ್ದು ಇದೀಗ ಈ ಬೇಡಿಕೆ ಮತ್ತಷ್ಟು ಬಲಗೊಂಡಿದೆ. ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಮಂಗಳೂರು ವಕೀಲರ ಸಂಘ ಹೈಕೋರ್ಟ್ ಪೀಠ ಚಳವಳಿಯನ್ನು ಪ್ರಧಾನವಾಗಿಟ್ಟುಕೊಂಡು ಎಲ್ಲ ಕಡೆ ಹೈಕೋರ್ಟ್ ಪೀಠ ಸ್ಥಾಪನೆಯ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸುತ್ತಿದೆ. ಇದರ ಭಾಗವಾಗಿ ರಾಜ್ಯದ ಪ್ರತಿ ಜಿಲ್ಲೆಯ ವಕೀಲರ ಸಹಕಾರ ಪಡೆಯಲು, ಹಕ್ಕೊತ್ತಾಯ ಮಂಡಿಸಲು ಮಂಗಳೂರಿನಲ್ಲಿ ವಕೀಲರ ರಾಜ್ಯಮಟ್ಟದ ಕ್ರಿಕೆಟ್ ಹಾಗೂ ಥ್ರೋಬಾಲ್ ಪಂದ್ಯಾಟ ಆಯೋಜಿಸಿದೆ.
ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಕೀಲರ 36 ತಂಡಗಳು ಭಾಗವಹಿಸಿದ್ದು, ಈ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನ್ಯಾಯಧೀಶರು, ನ್ಯಾಯವಾದಿಗಳು, ಜನಪ್ರತಿನಿಧಿಗಳ ಮುಂದೆ ಹೈಕೋರ್ಟ್ ಪೀಠದ ಹಕ್ಕೊತ್ತಾಯ ಮಾಡಲಾಗುತ್ತಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದ್ದಾರೆ.
ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಆರು ಜಿಲ್ಲೆಯ ಜನರಿಗೆ ಅನುಕೂಲ
ಹೈಕೋರ್ಟ್ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾದರೆ ಕೇವಲ ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಮಡಿಕೇರಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಒಟ್ಟು ಆರು ಜಿಲ್ಲೆಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದರ ಜೊತೆ ಅಕ್ಕಪಕ್ಕದ ಜಿಲ್ಲೆಯವರು ಮಂಗಳೂರಿಗೆ ಬರಲು ಸಾಕಷ್ಟು ಅಗತ್ಯ ಸೌಕರ್ಯಗಳು ಇವೆ. ಹೀಗಾಗಿ ಇಲ್ಲಿಗೆ ಬರುವುದಕ್ಕೂ ಸಮಸ್ಯೆ ಆಗುವುದಿಲ್ಲ.
ಸದ್ಯ ಹೈಕೋರ್ಟ್‌ನ ಪ್ರಕರಣಕ್ಕಾಗಿ ಈ ಭಾಗದ ಜನ ದೂರದ ಬೆಂಗಳೂರಿಗೆ ತೆರಳಬೇಕಾಗಿದೆ. ಇದರ ಜೊತೆ ಬೆಂಗಳೂರು ಹೈಕೋರ್ಟ್‌ನಲ್ಲಿ ಈ ಭಾಗದ 30 ಶೇಕಡಾ ಪ್ರಕರಣಗಳ ವಿಲೇವಾರಿಗೆ ಬಾಕಿಯಿದೆಯೆಂದು ವಕೀಲರು ತಿಳಿಸಿದ್ದು, ಹೈಕೋರ್ಟ್ ಪೀಠ ಇಲ್ಲಿ ಸ್ಥಾಪನೆಯಾದರೆ ಈ ಸಮಸ್ಯೆಗಳೆಲ್ಲಾ ಬಗೆಹರಿಯಲಿವೆ. ಹೀಗಾಗಿಯೇ ರಾಜ್ಯದ ವಕೀಲರ ಗಮನಸೆಳೆಯಲು ಕ್ರೀಡಾಕೂಟ ಆಯೋಜಿಸಲಾಗಿದೆ. ಇದರ ಜೊತೆ ಪೋಸ್ಟ್ ಕಾರ್ಡ್ ಅಭಿಯಾನ ಸಹ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹಾಸನ: ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಉದ್ಘಾಟನೆಗೆ ಸಜ್ಜು, ಕಾಮಗಾರಿಯೇ ಮುಗಿದಿಲ್ಲ!
ಹೈಕೋರ್ಟ್ ಪೀಠ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿ, ಅನುದಾನ ಮೀಸಲಿಡಬೇಕು. ಆ ಬಳಿಕ ಗವರ್ನರ್, ಹೈಕೋರ್ಟ್ ನ್ಯಾಯಾಮೂರ್ತಿಗಳು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಒತ್ತಾಯಿಸಿದಾಗ ಹೈಕೋರ್ಟ್ ಪೀಠ ಸ್ಥಾಪನೆಯ ಕಾರ್ಯ ಸುಲಭವಾಗುತ್ತದೆ. ಒಟ್ಟಿನಲ್ಲಿ ಕರಾವಳಿ, ಮಲೆನಾಡು ಭಾಗಕ್ಕೆ ಹೈಕೋರ್ಟ್ ಪೀಠದ ಅವಶ್ಯಕತೆ ಹೆಚ್ಚಿದ್ದು, ಮುಂದೆ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ