ಧರ್ಮಸ್ಥಳ ವಿರುದ್ಧ ಭಾರೀ ಷಡ್ಯಂತ್ರ, 25 ವಿಡಿಯೋ ಮಾಡಿಟ್ಟುಕೊಂಡಿದ್ದ ‘ಬುರುಡೆ’ ಗ್ಯಾಂಗ್: ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತನಾಗಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನಿಂದ ಎಸ್‌ಐಟಿ ಸ್ಫೋಟಕ ಮಾಹಿತಿ ಕಲೆಹಾಕಿರುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ‘ಬುರುಡೆ ಗ್ಯಾಂಗ್’ 25ಕ್ಕೂ ಹೆಚ್ಚು ವಿಡಿಯೋಗಳನ್ನು ತಯಾರಿಸಿ, ಚಿನ್ನಯ್ಯನ ಬಂಧನ, ಪರಾರಿ, ಅಥವಾ ಒಂದು ವೇಳೆ ಮೃತಪಟ್ಟರೆ ಹೇಗೆ ಬೇಕೋ ಆಯಾ ಸಂದರ್ಭಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಿತ್ತು ಎಂಬುದು ಬಹಿರಂಗವಾಗಿದೆ.

ಮಂಗಳೂರು, ಆಗಸ್ಟ್ 25: ಧರ್ಮಸ್ಥಳ (Dharmasthala) ಆಸುಪಾಸಿನಲ್ಲಿ ನೂರಾರು ಶವ ಹೂಳಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿತನಾದ ಮಾಸ್ಕ್‌ಮ್ಯಾನ್ ಚಿನ್ನಯ್ಯ ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ದೊರೆತಿದೆ. ಅಲ್ಲದೆ, ‘ಬುರುಗಡೆ ಗ್ಯಾಂಗ್’ ಚಿನ್ನಯ್ಯನ ವಿಚಾರವಾಗಿ ಏನೇನು ಪ್ಲಾನ್ ಮಾಡಿತ್ತು ಎಂಬುದು ತಿಳಿದುಬಂದಿದೆ. ‘ಟಿವಿ9’ಗೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಚಿನ್ನಯ್ಯ ಸಿಕ್ಕಿಬಿದ್ದರೆ ಯಾವ ರೀತಿ ಬಿಂಬಿಸಬೇಕು ಎಂಬುದಕ್ಕೂ ವಿಡಿಯೋ ಮಾಡಿಸಿ ಇಡಲಾಗಿತ್ತು.
25ಕ್ಕೂ ಹೆಚ್ಚು ವಿಡಿಯೋ ಮಾಡಿಸಿಟ್ಟಿದ್ದ ‘ಬುರುಡೆ’ ಗ್ಯಾಂಗ್
ಚಿನ್ನಯ್ಯ ಎಸ್ಐಟಿಕೆ ನೀಡಿದ ಹೇಳಿಕೆ ಪ್ರಕಾರ, ‘ಬುರುಡೆ’ ಗ್ಯಾಂಗ್ 25ಕ್ಕೂ ಹೆಚ್ಚು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಅವುಗಳನ್ನು ಸಂದರ್ಶನ ಶೈಲಿಯಲ್ಲಿ ಹಾಗೂ ವಿಭಿನ್ನ ಮಾದರಿಯಲ್ಲಿ ಸಿದ್ಧಪಡಿಸಲಾಗಿತ್ತು. ಗ್ಯಾಂಗ್‌ಗೆ ಸೇರಿದ ಪ್ರತಿಯೊಬ್ಬರ ಚಟುವಟಿಕೆ, ಪ್ರಕರಣ ಬೆಳವಣಿಗೆ ಹಾಗೂ ಭವಿಷ್ಯದಲ್ಲಿ ಸಂಭವಿಸಬಹುದಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಯಾವ ವಿಡಿಯೋ ಬಿಡುಗಡೆ ಮಾಡಬೇಕು ಎಂಬುದರ ಕುರಿತು ಗ್ಯಾಂಗ್ ಯೋಜನೆ ರೂಪಿಸಿಕೊಂಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಂಧನವಾದರೆ ಯಾವ ವಿಡಿಯೋ ಬಿಡುಗಡೆ ಮಾಡಬೇಕು, ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ, ಚಿನ್ನಯ್ಯ ಮೃತಪಟ್ಟರೆ ಯಾವ ವಿಡಿಯೋ; ಈ ರೀತಿಯಾಗಿ ಇಂತಹ ಪ್ರತಿಯೊಂದು ಸಂದರ್ಭಕ್ಕೂ ಗ್ಯಾಂಗ್ ಪ್ರತ್ಯೇಕ ವಿಡಿಯೋ ತಯಾರಿಸಿಕೊಂಡಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಇಷ್ಟೇ ಅಲ್ಲದೆ, ಯುವತಿಯ ಅತ್ಯಾಚಾರ ಪ್ರಕರಣ ಮುನ್ನೆಲೆಗೆ ಬಂದರೆ ಅದಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲು ವಿಶೇಷ ವಿಡಿಯೋ ಸಿದ್ದಪಡಿಸಲಾಗಿತ್ತು. ಯಾರು ಯಾರ ಹೆಸರು ಬರುತ್ತದೆಯೋ, ಆ ಸಂದರ್ಭದಲ್ಲಿ ಪ್ರತ್ಯೇಕ ವಿಡಿಯೋಗಳನ್ನು ಪ್ರಸಾರ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಚಿನ್ನಯ್ಯ ಎಸ್ಐಟಿ ಬಳಿ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಮೂಲಕ ಧರ್ಮಸ್ಥಳ ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, ‘ಬುರುಡೆ’ ಗ್ಯಾಂಗ್‌ನ ಕಾರ್ಯವೈಖರಿ ಒಂದೊಂದಾಗಿ ಬಹಿರಂಗವಾಗುತ್ತಿದೆ.
ಮಂಗಳವಾರವಷ್ಟೇ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರನ ಮನೆಗಳಿಗೆ ತೆರಳಿದ್ದ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್ಐಟಿ ಶೋಧ: ಚಿನ್ನಯ್ಯಗೆ ಸಂಬಂಧಿಸಿದ್ದ ವಸ್ತುಗಳು ವಶಕ್ಕೆ
ಚಿನ್ನಯ್ಯ ಒಟ್ಟು ಹತ್ತು ದಿನ ಎಸ್ಐಟಿ ವಶದಲ್ಲಿರಲಿದ್ದು, ಇಂದು ಕೂಡ ವಿಚಾರಣೆ ನಡೆಯಲಿದೆ. ಮಂಗಳವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ಆಗಿರುವ ಹಿನ್ನೆಲೆ, ಇಂದು ಬೆಳಗ್ಗೆ 11:30 ಕ್ಕೆ ಕಚೇರಿಗೆ ಬರುವಂತೆ ಅಧಿಕಾರಿಗಳಿಗೆ ಎಸ್ಐಟಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಸುಜಾತಾ ಭಟ್ ಸಹ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.



