ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್ಐಟಿ ಶೋಧ: ಚಿನ್ನಯ್ಯಗೆ ಸಂಬಂಧಿಸಿದ್ದ ವಸ್ತುಗಳು ವಶಕ್ಕೆ
ಧರ್ಮಸ್ಥಳದ ಬುರುಡೆ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಂಡಿದೆ. ಚಿನ್ನಯ್ಯನ ವಿಚಾರಣೆ ನಡೆಸಿದ್ದ SIT ಇಂದು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಲಗ್ಗೆಯಿಟ್ಟಿತ್ತು. ಚಿನ್ನಯ್ಯನಿಗೆ ಆಶ್ರಯ ಕೊಟ್ಟಿದ್ದಕ್ಕೆ ತಲಾಶ್ ಮಾಡಿದರು. ಈ ವೇಳೆ ಸಿಸಿಟಿವಿ ಡಿವಿಆರ್, ಐಡಿ ಕಾರ್ಡ್ಗಳು ಮತ್ತು ಆ್ಯಂಡ್ರಾಯ್ಡ್ ಫೋನ್ ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಆಗಸ್ಟ್ 26: ಬುರುಡೆ ಕೇಸ್‌ನ ಅಸಲಿ ಜಾಡು ಹಿಡಿದ ಎಸ್‌ಐಟಿ ಅಧಿಕಾರಿಗಳು, ಧರ್ಮಸ್ಥಳ (Dharmasthala), ಮಂಡ್ಯ, ತಮಿಳುನಾಡು ಸೇರಿದಂತೆ ಹಲವೆಡೆ ತನಿಖೆ ನಡೆಸಿದ್ದರು. ಇದೀಗ ಬುರುಡೆ ಮ್ಯಾನ್ ಚಿನ್ನಯ್ಯ ಎಲ್ಲಿದ್ದ ಎಂಬ ಬಗ್ಗೆ ವಿಚಾರಣೆ ನಡೆಸಿದಾಗ ಅತ ಹೇಳಿದ್ದು ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ನಿವಾಸ. ಹೀಗಾಗಿ ಇಂದು ಬೆಳ್ಳಂಬೆಳಿಗ್ಗೆ ತಿಮರೋಡಿ ನಿವಾಸಕ್ಕೆ ಎಂಟ್ರಿಕೊಟ್ಟಿದ್ದ ಅಧಿಕಾರಿಗಳು ಶೋಧ ಮಾಡಿದರು. ಬಟ್ಟೆ, ಬ್ಯಾಗ್ ಪರಿಶೀಲಿಸಿ ಸಿಸಿಟಿವಿ ಡಿವಿಆರ್, ಚಿನ್ನಯ್ಯಗೆ ಸಂಬಂಧಿಸಿದ ಐಡಿ ಕಾರ್ಡ್ಗಳು ಸೇರಿದಂತೆ ಆ್ಯಂಡ್ರಾಯ್ಡ್ ಫೋನ್ ವಶಕ್ಕೆ ಪಡೆದಿದ್ದಾರೆ.
ತಿಮರೋಡಿ ಮನೆಯಲ್ಲಿ ಎಸ್ಐಟಿ ಶೋಧ
ಚಿನ್ನಯ್ಯನಿಗೆ ಆಶ್ರಯ ನೀಡಿದ್ದು ಯಾರು ಅನ್ನೋ ಪ್ರಶ್ನೆಗೆ ಬುರುಡೆ ಮ್ಯಾನ್ ಬೆರಳು ತೋರಿಸಿದ್ದು ಇದೇ ತಿಮರೋಡಿ ಮನೆಯತ್ತ. ಎರಡು ತಿಂಗಳ ಕಾಲ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದಾಗಿ ಚಿನ್ನಯ್ಯ ಬಾಯ್ಬಿಟ್ಟಿದ್ದ. ಹೀಗಾಗಿ ಇಂದು ಶೋಧಕ್ಕಿಳಿದ ಅಧಿಕಾರಿಗಳು ಚಿನ್ನಯ್ಯ ತಿಮರೋಡಿ ಮನೆಯಲ್ಲಿ ಯಾವ ಸಮಯದಲ್ಲಿ ಏನೇನು ಮಾಡುತ್ತಿದ್ದ. ಎಸ್ಐಟಿ ಕಚೇರಿಗೆ ಹೋಗುವ ಮುನ್ನ, ಹೋಗಿಬಂದ ನಂತರ ಏನ್ಮಾಡುತ್ತಿದ್ದ ಎಂಬುವುದನ್ನು ಜಾಲಾಡಿದ್ದಾರೆ.
ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಮಾಸ್ಕ್ಮ್ಯಾನ್ ಚಿನ್ನಯ್ಯ ಮೊಬೈಲ್ ಪತ್ತೆ
ಆರೋಪಿ ಚಿನ್ನಯ್ಯ 2 ತಿಂಗಳಿಂದ ಯಾರು ಯಾರನ್ನು ಭೇಟಿ ಮಾಡುತ್ತಿದ್ದ. ಯಾರು ಯಾರಿಗೆ ಸಂದರ್ಶನ ನೀಡಿದ್ದನೆಂಬ ಬಗ್ಗೆ SIT ಮಾಹಿತಿ ಸಂಗ್ರಹಿಸಿದೆ. ತಿಮರೋಡಿ ಮನೆಗೆ ಯಾವಾಗ ಬಂದೆ, ಎಷ್ಟು ದಿನಗಳಿಂದ ವಾಸವಿದ್ದೆ. ಯಾರು ಯಾರು ಜೊತೆಗಿರುತ್ತಿದ್ದರೆಂದು ಚಿನ್ನಯ್ಯನ ವಿಚಾರಣೆ ನಡೆಸಿ ರೆಕಾರ್ಡ್ ಮಾಡಲಾಗಿದೆ.
ಚಿನ್ನಯ್ಯಗೆ ಎಸ್ಐಟಿಯಿಂದ ಪ್ರಶ್ನೆಗಳ ಸುರಿಮಳೆ
ಶವಗಳನ್ನು ಹೂತಿದ್ದಾಗಿ ದೂರು ಕೊಡಲು ಬಂದಾಗ ನೀನೆಲ್ಲಿ ವಾಸವಿದ್ದೆ. ಶೆಟ್ಟಿ ಮನೆಗೆ ಮೊದಲು ಯಾರು ಕರೆತಂದರು, ಯಾರನ್ನ ಭೇಟಿಯಾಗಿದ್ದೆ. ಮಹೇಶ್ ಶೆಟ್ಟಿ ಮನೆಯಲ್ಲಿದ್ದಾಗ ಯಾರು ಹೆಚ್ಚಾಗಿ ಭೇಟಿ ಮಾಡುತ್ತಿದ್ದರು. ನೀನು ಯಾರನ್ನು ಭೇಟಿ ಮಾಡುತ್ತಿದ್ದೆ, ಆ ಸಂದರ್ಭದಲ್ಲಿ ಏನ್ ಹೇಳ್ತಿದ್ದೆ ಎಂದು ಚಿನ್ನಯ್ಯಗೆ ಹಲವು ವಿಚಾರಗಳ ಬಗ್ಗೆ ಪ್ರಶ್ನಿಸಿದ SIT ಪೊಲೀಸರು ಆತನ ಉತ್ತರವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಜರುಗಾಗಿ ಚಿನ್ನಯ್ಯನನ್ನು ಮಹೇಶ್ ತಿಮರೋಡಿ ಮನೆಗೆ ಕರೆತಂದ ಎಸ್ಐಟಿ ಅಧಿಕಾರಿಗಳು
ಚಿನ್ನಯ್ಯ ಹೇಳಿದ ಸ್ಥಳ, ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಎಸ್ಐಟಿ, ಎಷ್ಟು ದಿನದಿಂದ ಫೋನ್ ಬಳಸುತ್ತಿದ್ದೆ, ಫೋನ್ ಇಲ್ಲವೆಂದು ಹೇಳಿದ್ಯಾಕೆ, ಇವಾಗ ನಿನ್ನ ಫೋನ್ ಸಿಕ್ಕಿದೆ, ಏನ್ ಹೇಳುತ್ತೀಯಾ ಎಂದು SIT ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 pm, Tue, 26 August 25







