AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್​ಎಸ್​ಎಲ್ ವರದಿಯಲ್ಲಿ ಚಿನ್ನಯ್ಯನ ‘ಬುರುಡೆ’ ರಹಸ್ಯ ಬಯಲು! ಪ್ರಾಥಮಿಕ ವರದಿಯಲ್ಲಿದೆ ವಿವರ

ಧರ್ಮಸ್ಥಳ ಪ್ರಕರಣದ ಕೇಂದ್ರಬಿಂದುವಾಗಿರುವ ಮಾಸ್ಕ್​​ಮ್ಯಾನ್ ಚಿನ್ನಯ್ಯ ಆರಂಭದಲ್ಲಿ ತಂದಿದ್ದ ತಲೆಬುರುಡೆಯ ಎಫ್​ಎಸ್​ಎಲ್ ವರದಿ ಎಸ್​ಐಟಿ ಅಧಿಕಾರಿಗಳ ಕೈಸೇರಿದೆ. ತಲೆಬುರುಡೆಯ ಕುರಿತಾಗಿ ಆ ವರದಿಯಲ್ಲೇನಿದೆ ಎಂಬ ಮಾಹಿತಿ ‘ಟವಿ9’ಗೆ ಲಭ್ಯವಾಗಿದೆ. ಹಾಗಾದರೆ, ಚಿನ್ನಯ್ಯ ‘ಬುರುಡೆ’ ರಹಸ್ಯ ಏನು? ಮಾಹಿತಿ ತಿಳಿಯಲು ಮುಂದೆ ಓದಿ.

ಎಫ್​ಎಸ್​ಎಲ್ ವರದಿಯಲ್ಲಿ ಚಿನ್ನಯ್ಯನ ‘ಬುರುಡೆ’ ರಹಸ್ಯ ಬಯಲು! ಪ್ರಾಥಮಿಕ ವರದಿಯಲ್ಲಿದೆ ವಿವರ
ಚಿನ್ನಯ್ಯ
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma|

Updated on:Aug 26, 2025 | 2:22 PM

Share

ಮಂಗಳೂರು, ಆಗಸ್ಟ್​ 26: ಧರ್ಮಸ್ಥಳ  (Dharmasthala) ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡು ಮೊದಲ ಬಾರಿಗೆ ದೂರು ನೀಡುವಾಗ ಮಾಸ್ಕ್​​ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆಯ ರಹಸ್ಯ ಈಗ ಬಯಲಾಗಿದೆ. ಬುರುಡೆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್​ಎಸ್​ಎಲ್/ FSL)​ ಪರೀಕ್ಷೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಹೆಣ್ಣುಮಗಳ ತಲೆಬುರುಡೆ ಎಂದು ತಂದಿದ್ದ ಚಿನ್ನಯ್ಯ, ಇದೇ ರೀತಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದಿದ್ದ. ಇದೀಗ ಮೊದಲ ಬುರುಡೆಯ ಅಸಲಿಯತ್ತು ಬಯಲಾಗಿದೆ. ಚಿನ್ನಯ್ಯ ತಂದಿದ್ದ ಬುರುಡೆ 25-30 ವರ್ಷದೊಳಗಿನ ಪುರುಷನದ್ದು ಎಂದು ಎಫ್​ಎಸ್​ಎಲ್ ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.

ಚಿನ್ನಯ್ಯ ‘ಬುರುಡೆ’ ರಹಸ್ಯ!

ಎಫ್​ಎಸ್​ಎಲ್ ವರದಿ ಕುರಿತು ‘ಟಿವಿ9’ಗೆ ಸಿಕ್ಕ ಮಾಹಿತಿ ಪ್ರಕಾರ, ಚಿನ್ನಯ್ಯ ನೀಡಿದ್ದ ಬುರುಡೆಯಲ್ಲಿ ಯಾವುದೇ ಮಣ್ಣಿನ ಕಣ ಪತ್ತೆಯಾಗಿಲ್ಲ. ಆದರೆ, ಬುರುಡೆಯಲ್ಲಿ ಅಂಟಿಕೊಂಡಿರುವ ಮಣ್ಣಿನ ಸೂಕ್ಷ್ಮ ಕಣಗಳನ್ನ ಎಫ್​ಎಸ್​ಎಲ್ ಸಂಗ್ರಹಿಸಿದೆ. ಈ ಎಲ್ಲದರ ಬಗ್ಗೆ ಎಫ್​ಎಸ್​ಎಲ್​​ನ ಒಂದು ರಿಪೋರ್ಟ್ ಎಸ್​ಐಟಿಯ ಕೈ ಸೇರಿದೆ. ಚಿನ್ನಯ್ಯ ತಂದಿದ್ದ ಬುರುಡೆ ಯಾರದ್ದು ಎಂದು ಶೋಧ ನಡೆಸಲಾಗುತ್ತಿದೆ. ಅಲ್ಲದೆ, ಬುರುಡೆ ತಂದಿರುವ ಜಾಗಕ್ಕೆ ಚಿನ್ನಯ್ಯನನ್ನು ಕರೆದೊಯ್ಯಲಿರುವ ಎಸ್​ಐಟಿ, ಮಹಜರು ನಡೆಸಲು ಸಿದ್ಧತೆ ಮಾಡಿದೆ. ಚಿನ್ನಯ್ಯ ತೋರಿಸುವ ಆ ಜಾಗದಲ್ಲಿ ಮಣ್ಣು ಸಂಗ್ರಹಿಸಿ, ಅಲ್ಲಿನ ಮಣ್ಣು, ಡಿಎನ್​ಎ ಹೊಂದಾಣಿಕೆ ಮಾಡಲು ಎಸ್​ಐಟಿ ಮುಂದಾಗಿದೆ.

ಬೆಳ್ಳಂಬೆಳಗ್ಗೆ ಎಸ್​ಐಟಿ ವಿಚಾರಣೆಗೆ ಸುಜಾತ ಭಟ್ ಹಾಜರು

ನನಗೊಬ್ಬಳು ಅನನ್ಯ ಭಟ್ ಎಂಬ ಮಗಳಿದ್ದಳು. ಅವಳು 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು. ಅವಳ ಅಸ್ಥಿಯನ್ನಾದರೂ ಹುಡುಕಿ ಕೊಡಿ ಎಂದು ಸುಜಾತ ಭಟ್ ಎಂಬ ಮಹಿಳೆ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಈ ದೂರು ಎಸ್​ಐಟಿಗೆ ವರ್ಗಾವಣೆಯಾಗಿತ್ತು. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್ ನೀಡಿತ್ತು. ಅನಾರೋಗ್ಯದ ಕಾರಣ ನೀಡಿದ್ದ ಸುಜಾತ ಭಟ್, ಆಗಸ್ಟ್ 29ರಂದು ಹಾಜರಾಗುತ್ತೇನೆ ಎಂದಿದ್ದರು. ಆದರೆ, ಇಂದು ಬೆಳ್ಳಂಬೆಳಗ್ಗೆ ಬೆಳ್ತಂಗಡಿಯಲ್ಲಿರುವ ಎಸ್​​ಐಟಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಆದರೆ, ಎಸ್​ಐಟಿ ಅಧಿಕಾರಿಗಳು ತಿಮರೋಡಿ ಮನೆಯಲ್ಲಿ ಶೋಧ ನಡೆಸುತ್ತಿರುವುದರಿಂದ ಸುಜಾತ ಇನ್ನೂ ಎಸ್​ಐಟಿ ಕಚೇರಿಯಲ್ಲೇ ಕುಳಿತಿದ್ದಾರೆ.

ಏತನ್ಮಧ್ಯೆ, ಧರ್ಮಸ್ಥಳದಲ್ಲಿ ಎಸ್​ಐಟಿ ಶೋಧ ಕಾರ್ಯಾಚರಣೆ ವಿಚಾರವಾಗಿ ರಾಜಕೀಯ ಜಟಾಪಟಿ ಮುಂದುವರಿದಿದೆ. ಪ್ರಕರಣದ ತನಿಖೆಯನ್ನು ಎನ್​​ಐಗೆ ಕೊಡಿ ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಗೃಹ ಸಚಿವ ಪರಮೇಶ್ವರ್, ಎಸ್​ಐಟಿ ಬಹಳ ಗಂಭೀರವಾಗಿ ತನಿಖೆ ಮಾಡುತ್ತಿದೆ. ಸತ್ಯ ಹೊರಗಡೆ ಬರಬೇಕೆಂದು ಭಕ್ತರು ಕಾಯುತ್ತಿದ್ದಾರೆ. ಪ್ರಕರಣವನ್ನು ಎನ್​​​​ಐಎ ತನಿಖೆಗೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ‘ಬುರುಡೆ’ ಚಿನ್ನಯ್ಯನ ಮೂಲ ಕೆದಕಿದ ಎಸ್ಐಟಿ, ತಮಿಳುನಾಡಿಗೂ ಲಿಂಕ್!

ಮತ್ತೊಂದೆಡೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ಬಳಿ ಧರ್ಮಸ್ಥಳ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಇತ್ತ ಧಾರವಾಡದಲ್ಲಿ ‘‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’’ ಎಂಬ ಘೋಷವಾಕ್ಯದಡಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಯೂಟ್ಯೂಬರ್​​​ಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Tue, 26 August 25