ಧರ್ಮಸ್ಥಳ ಕೇಸ್: ‘ಬುರುಡೆ’ ಕಾಟಕ್ಕೆ ಬೆಚ್ಚಿಬಿದ್ದಿದ್ದ ಆತ; SIT ವರದಿಯಲ್ಲಿ ಸ್ಫೋಟಕ ಮಾಹಿತಿ
ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ಎಸ್ಐಟಿ ವರದಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಅಪಪ್ರಚಾರಕ್ಕೆ ಬಳಸಿದ 'ಬುರುಡೆ' ಜೊತೆಗಿದ್ದಾಗ ಗ್ಯಾಂಗ್ ಸದಸ್ಯ ಜಯಂತ್ಗೆ ಕೆಟ್ಟ ಕನಸುಗಳು ಬಿದ್ದು ಭಯಭೀತನಾಗಿದ್ದ. ದೆಹಲಿಯಲ್ಲಿ ಬುರುಡೆ ಬಿಟ್ಟು ಬೆಂಗಳೂರಿಗೆ ಮರಳಿದ್ದ ಆತ, ನಂತರ ಅದನ್ನು ಮತ್ತೆ ತಂದಿದ್ದ. ಸುಜಾತಾ ಭಟ್ ಅರಿವಿಲ್ಲದೆ ಬುರುಡೆ ಪಕ್ಕ ಮಲಗಿದ್ದ ಘಟನೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ವರದಿ ಹಲವು ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟಿದೆ.

ಮಂಗಳೂರು, ಡಿಸೆಂಬರ್ 29: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ಕೋರ್ಟ್ಗೆ ಎಸ್ಐಟಿ ಸಲ್ಲಿಸಿದ ಪ್ರಾಥಮಿಕ ವರದಿ ಹಲವಾರು ಕುತೂಹಲಕಾರಿ ಅಂಶಗಳನ್ನು ಬಹಿರಂಗಗೊಳಿಸಿದೆ. ಧರ್ಮಸ್ಥಳದ ವಿರುದ್ಧ ಆರೋಪ ಹೊರಿಸಿದ್ದ ಬುರುಡೆ ಗ್ಯಾಂಗ್ ಸದಸ್ಯನೋರ್ವನಿಗೆ ಅವರು ತಂದಿದ್ದ ಬುರುಡೆಯೇ ಕಾಟ ಕೊಟ್ಟಿತ್ತು ಎನ್ನುವ ಮಾಹಿತಿ SIT ವರದಿಯಲ್ಲಿ ಉಲ್ಲೇಖವಾಗಿದೆ.
ಗ್ಯಾಂಗ್ ಸದಸ್ಯ ಜಯಂತ್ ಬುರುಡೆಯನ್ನ ರೈಲಿನ ಮೂಲಕ ದೆಹಲಿಗೂ ತೆಗೆದುಕೊಂಡು ಹೋಗಿದ್ದ. ಇತರರಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತಾ ಫ್ಲೈಟ್ ಮೂಲಕ ತೆರಳಿದ್ದರು. ಈ ವೇಳೆ ಒಂದೇ ರೂಂನಲ್ಲಿ ಚಿನ್ನಯ್ಯ, ಮಟ್ಟಣ್ಣನವರ್ ಮತ್ತು ಜಯಂತ್ ಮಲಗಿದ್ದ ವೇಳೆ ಕೆಟ್ಟ ಕನಸು ಬಿದ್ದು ಜಯಂತ್ ಕಿರುಚಿಕೊಂಡಿದ್ದ. ಇದೇ ಕಅರಣಕ್ಕೆ ಹೆದರಿ ವಾಪಸ್ ಬುರುಡೆ ತರಲು ಒಪ್ಪದೆ ಅದನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದ. ಬಳಿಕ ಮತ್ತೆ ವಿಮಾನದ ಮೂಲದ ದೆಹಲಿಗೆ ತೆರಳಿದ್ದ ಜಯಂತ್, ರೈಲಿನ ಮೂಲಕ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬುರುಡೆ ತಂದಿದ್ದ. ತಿಮರೋಡಿ ಮನೆಗೆ ಅದನ್ನು ಕೊಂಡೊಯ್ದಿದ್ದ ಎಂದು ವರದಿಯಲ್ಲಿ ಎಸ್ಐಟಿ ಉಲ್ಲೇಖಿಸಿದೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ಗೆ ಮೇಜರ್ ಟ್ವಿಸ್ಟ್; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!
ಬುರುಡೆ ಜೊತೆ ರಾತ್ರಿ ಕಳೆದಿದ್ದ ಸುಜಾತಾ
ದೆಹಲಿಯಲ್ಲಿ ಪ್ರತ್ಯೇಕ ರೂಮ್ನಲ್ಲಿ ಇದ್ದ ಸುಜಾತಾ ಭಟ್ ಅರಿವಿಲ್ಲದೇ ಬುರುಡೆ ಜೊತೆ ರಾತ್ರಿ ಕಳೆದಿದ್ದರು. ದೆಹಲಿಯ ವಿಠ್ಠಲ ಮಂದಿರದಲ್ಲಿ ಆರೋಪಿಗಳು ರೂಂ ಮಾಡಿದ್ದು, ಸುಜಾತಾ ಭಟ್ ಇದ್ದ ರೂಂ ಮಂಚದ ಕೆಳಗೆ ಜಯಂತ್ ಬುರುಡೆ ಬಾಕ್ಸ್ ಇಟ್ಟಿದ್ದ. ಈ ವೇಳೆ ಬಾಕ್ಸ್ನಲ್ಲಿ ಏನಿದೆ ಅಂತಾ ಸುಜಾತಾ ಭಟ್ ಕೇಳಿದ್ದು, ಏನಿಲ್ಲ ಅಂತಾ ಹೇಳಿ ಜಯಂತ್ ಸುಮ್ಮನಾಗಿದ್ದ. ಹೀಗಾಗಿ ಅಂದು ರಾತ್ರಿ ಸುಜಾತಾ ಭಟ್ ಮಲಗಿದ್ದ ಮಂಚದ ಕೆಳಗೇ ಬುರುಡೆ ಇತ್ತು. ಅದೇ ರಾತ್ರಿ ಜಯಂತ್ಗೆ ಕೆಟ್ಟ ಕನಸು ಕೂಡ ಬಿದ್ದಿತ್ತು ಎಂದು ಕೋರ್ಟ್ಗೆ ಎಸ್ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



