AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್​: ಚಾರ್ಜ್​ಶೀಟ್ ಸಲ್ಲಿಕೆ, ಕೋರ್ಟ್​ಗೆ ಎಸ್ಐಟಿ ಮಹತ್ವದ ಮನವಿ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾರೆಂದು ಅಪಪ್ರಚಾರ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ತಲುಪಿದೆ. SIT ಬೆಳ್ತಂಗಡಿ ನ್ಯಾಯಾಲಯಕ್ಕೆ 3,932 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಪ್ರಮುಖ ಆರೋಪಿ ಚಿನ್ನಯ್ಯ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಹಲವರ ಹೇಳಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ತನಿಖೆಗಾಗಿ SIT ಕಾಲಾವಕಾಶ ಕೇಳಿದೆ.

ಧರ್ಮಸ್ಥಳ ಕೇಸ್​: ಚಾರ್ಜ್​ಶೀಟ್ ಸಲ್ಲಿಕೆ, ಕೋರ್ಟ್​ಗೆ ಎಸ್ಐಟಿ ಮಹತ್ವದ ಮನವಿ
ಧರ್ಮಸ್ಥಳ ಕೇಸ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Nov 20, 2025 | 7:39 PM

Share

ಮಂಗಳೂರು, ನವೆಂಬರ್​ 20: ಧರ್ಮಸ್ಥಳದ (Dharmasthala) ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆರು ತಿಂಗಳ ಹೈಡ್ರಾಮಾ, ನಾಲ್ಕು ತಿಂಗಳ ತನಿಖೆಗೆ ಸಂಬಂಧಿಸಿದಂತೆ ಗುರುವಾರ ತನಿಖಾಧಿಕಾರಿ ಜಿತೇಂದ್ರ ಕುಮಾರ್ ನೇತೃತ್ವದಲ್ಲಿ ಚಾರ್ಜ್​ಶೀಟ್ (Charge sheet) ಹಾಗೂ ಸುಳ್ಳು ಸಾಕ್ಷ್ಯ ವರದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್​ಗೆ ಸಲ್ಲಿಸಲಾಗಿದೆ. ಸದ್ಯ ಎಸ್​​ಐಟಿ ತನಿಖೆಯ ವರದಿ ಹಲವರಲ್ಲಿ ನಡುಕ ಹುಟ್ಟಿಸಿದ್ದು, ಪ್ರಕರಣದ ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

3,932 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ತಂಡ 7 ಫೈಲ್​ಗಳುಳ್ಳ 3,932 ಪುಟಗಳ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನ ಕೋರ್ಟ್​ಗೆ ಸಲ್ಲಿಸಿದೆ. ಆರಂಭದಲ್ಲಿ ಚಿನ್ನಯ್ಯನ ಹೇಳಿಕೆ, ಮಹಜರು, 17 ಹೆಚ್ಚು ಜಾಗದಲ್ಲಿ ನಡೆದಿದ್ದ ಸಮಾಧಿ ಶೋಧ, ಆತನ ಸಂಪರ್ಕದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಹೀಗೆ ಎಲ್ಲರ ಹೇಳಿಕೆಗಳನ್ನ SIT ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಗ್ಯಾಂಗ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧ: ಚಾರ್ಜ್‌ಶೀಟಿನಲ್ಲೇನಿದೆ?

ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆ ಸೇರಿದಂತೆ ಇನ್ನುಳಿದವರ ವಿಚಾರಣೆಗೆ ಎಸ್​ಐಟಿ ನೋಟಿಸ್ ಕೊಟ್ಟಿದ್ದು, ಸದ್ಯ ವಿಚಾರಣೆಗೆ ಕೋರ್ಟ್ ತಡೆ ಆದೇಶವನ್ನು ನೀಡಿದೆ. ಈ ನಡುವೆಯೂ ಎಸ್​ಐಟಿ ತಮ್ಮ ವರದಿಯನ್ನು ಬೆಳ್ತಂಗಡಿ ಕೋರ್ಟ್​ಗೆ ನೀಡಿದೆ. ಕೆಲ ಆರೋಪಿಗಳ ವಿಚಾರಣೆ ಇನ್ನು ಬಾಕಿ ಇದೆ. ಜೊತೆಗೆ ಲ್ಯಾಬ್ ರಿಪೋರ್ಟ್ ಕೂಡ ಇನ್ನು ಬಂದಿಲ್ಲ. ಆದ್ದರಿಂದ ತನಿಖೆ ಮುಂದುವರೆಸಲು ಇನ್ನು ಕಾಲಾವಕಾಶ ಬೇಕು ಅಂತಾ ಎಸ್ಐಟಿ ನ್ಯಾಯಾಧೀಶರನ್ನ ಕೇಳಿದೆ. ಸಂಪೂರ್ಣ ತನಿಖೆ ಬಳಿಕ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಅಂತಾ ಹೇಳಿದೆ.

ಎಸ್ಐಟಿ ಮಹತ್ವದ ಮನವಿ

ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಕೆ ಜೊತೆಗೆ ಮುಂದಿನ ತನಿಖೆಯ ಬಗ್ಗೆ ಮಾರ್ಗದರ್ಶನ ಕೋರಿ ವಾದ ಮಂಡಿಸಲಾಗಿದೆ. ಈವರೆಗಿನ ತನಿಖೆ ಕುರಿತ ಮಧ್ಯಂತರ ಚಾರ್ಜ್​​ಶೀಟ್ ಪರಿಗಣಿಸಿ ಮುಂದಿನ ತನಿಖೆಗೆ ಎಸ್ಐಟಿ ಅಧಿಕಾರಿಗಳು ನಿರ್ದೇಶನ ಕೋರಿದ್ದಾರೆ. ಎಸ್ಐಟಿ ಸಲ್ಲಿಸಿದ ಮನವಿ ಸ್ವೀಕರಿಸಿದ ಜಡ್ಜ್, SIT ಪರ ವಕೀಲರ ವಾದ ಆಲಿಸಿ ವಿಚಾರಣೆ ನಾಳೆಗೆ ಮುಂದೂಡಿದ್ದು, ನಾಳೆ ನಿರ್ದೇಶನ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್: ಗಡಿಪಾರಿನಿಂದ ಮಹೇಶ್ ಶೆಟ್ಟಿ ತಿಮರೋಡಿ ಪಾರು!

ಬೆಳ್ತಂಗಡಿ ಕೋರ್ಟ್ ವರದಿ ಸಲ್ಲಿಕೆ ಬಳಿಕ ಡಿಜಿಪಿ ಎಸ್​ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಸರ್ಕಾರಕ್ಕೂ ವರದಿ ನೀಡಲಿದ್ದಾರೆ. ಒಟ್ಟಿನಲ್ಲಿ ಇಡೀ ದೇಶದಲ್ಲಿ ಕುತೂಹಲ ಕೆರಳಿಸಿದ್ದ ಧರ್ಮಸ್ಥಳ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪ್ಪಿದ್ದು, ಸದ್ಯ ಪ್ರಕರಣದ ಎ1 ಆರೋಪಿಯಾಗಿ ಚಿನ್ನಯ್ಯ ಮಾತ್ರ ಅಂದರ್ ಆಗಿದ್ದಾರೆ. ಇನ್ನುಳಿದವರಿಗೂ ಎಸ್ಐಟಿ ವರದಿ ನಡುಕ ಹುಟ್ಟಿಸಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.