ಮಂಗಳೂರು: ತಾನು ದಿವ್ಯಾಂಗನಾಗಿದ್ರು ಕಾನೂನು ಹೋರಾಟದ ಮೂಲಕ ತನಗೆ ಸಿಗಬೇಕಾದ ನ್ಯಾಯವನ್ನು ದಕ್ಕಿಸಿಕೊಂಡ ಕಥೆ ಇದು. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಈ ಒಂದು ಸ್ಪೂರ್ತಿದಾಯಕ ಪ್ರಸಂಗ ನಡೆದಿದೆ. ಇದು ಕಾಣಿಯೂರು ಗ್ರಾಪಂ ವ್ಯಾಪ್ತಿಯ ಚಾರ್ವಾಕ ಬೀರೋಳಿ ನಿವಾಸಿ ಯತೀಂದ್ರ ಗೌಡ ಬಿ.ಎಲ್ ಅವರ ಕಥೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಮರದಿಂದ ಬಿದ್ದ ಪರಿಣಾಮ ಸ್ಪೈನಲ್‌ಕಾರ್ಡಿಗೆ ಪೆಟ್ಟುಬಿದ್ದು ಸೊಂಟದಿಂದ ಕೆಳಭಾಗಕ್ಕೆ ಸ್ಪರ್ಶ ಜ್ಞಾನ ಇಲ್ಲದಂತಾಗಿದೆ. ಸದಾ ಹಾಸಿಗೆಯಲ್ಲಿಯೇ ಇವರ ಬದುಕಾಗಿತ್ತು. ಇವರಿಗೆ ನಾಲ್ಕೂವರೆ ವರ್ಷದ ಪುಟ್ಟ ಮಗು ಇದೆ. ಇವರಿಗೆ ಅಂಗವಿಕಲ ಸೌಲಭ್ಯ ಸಿಗದಂತೆ ಮಾಡಲು ರಾಜಕೀಯ ಪಿತೂರಿ ನಡೆಸಲಾಗಿತ್ತು.
ಇನ್ನು ಯಾವ ಅಂಗವಿಕಲರಿಗೂ ಇಂತಹ ಕಾನೂನು ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಬಾರದು ಎಂಬವುದೇ ನನ್ನ ಉದ್ದೇಶವಾಗಿದೆ ಅನ್ನುತ್ತಾರೆ ಯತೀಂದ್ರ. ಕಾಣಿಯೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಶ್ವತ ಅಂಗವಿಕಲನಾಗಿದ್ದ ಯತೀಂದ್ರಗೆ ಸೌಲಭ್ಯ ನೀಡಲು ಗ್ರಾ.ಪಂ ತೀರ್ಮಾನಿಸಿ ಕ್ರಮ ಕೈಗೊಂಡಿದ್ದರು. ಸ್ವತಹ ಗ್ರಾಪಂ ಅಧ್ಯಕ್ಷರೇ ಇವರ ಹೆಸರು ಪ್ರಸ್ತಾಪಿಸಿ ಸೌಲಭ್ಯ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಆದರೆ ಇದಕ್ಕೆ ಗ್ರಾಪಂ ಸದಸ್ಯ ಗಣೇಶ್ ಕೆ.ಎಸ್ ಎಂಬ ಸದಸ್ಯರು ಅಡ್ಡಗಾಲು ಹಾಕಿದರು.
ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಯತೀಂದ್ರ ದೂರು ನೀಡಿದ್ದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಕೊನೆಗೆ ಲೋಕಾಯುಕ್ತಕ್ಕೆ ಸ್ಥಳೀಯ ವ್ಯಕ್ತಿಯೊಬ್ಬರ ಮೂಲಕ ದೂರು ಸಲ್ಲಿಸಿದ್ರು. ಇದರ ಪರಿಣಾಮ ಕಾನೂನು ಹೋರಾಟ ನಡೆಸಿ ಸೌಲಭ್ಯ ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಯಾವ ಅಂಗವಿಕಲನಿಗೂ ಇಂತಹ ಪರಿಸ್ಥಿತಿ ಸ್ಥಳೀಯ ರಾಜಕೀಯ ಹೆಸರಲ್ಲಿ ಮಾಡಬಾರದು ಎಂದು ಯತೀಂದ್ರ ಕಣ್ಣೀರಿಟ್ಟಿದ್ದಾರೆ.
ವಿಕಲಚೇತನರ ಬದುಕಿಗೇ ಅಪಮಾನ ಮಾಡಬೇಡಿ
ಶಾಶ್ವತ ಅಂಗವಿಕಲನಾದ ಇವರ ವಿರುದ್ಧ ರಾಜಕೀಯ ನಡೆಸುವ ಮೂಲಕ ವಿಕಲಚೇತನರ ಬದುಕಿಗೇ ಅಪಮಾನ ಮಾಡಿದ್ದಾರೆ. ತನ್ನ ಚಿಲ್ಲರೆ ರಾಜಕೀಯ ಬುದ್ದಿಯಿಂದ ಸರ್ಕಾರಿ ಸೌಲಭ್ಯ ಪಡೆಯಲು ತಡೆ ಹಾಕಿದ್ದರು. ಆದರೆ ಕಾನೂನು ಹೋರಾಟದ ಮೂಲಕ ಸೌಲಭ್ಯ ಪಡೆಯುವ ಅನಿವಾರ್ಯತೆ ಉಂಟು ಮಾಡಿದ್ದರು. ಎಲ್ಲಾ ಅಂಗವಿಕಲರಿಗೆ ಇದು ಸಾಧ್ಯವಾಗಲಾರದು.
ಗಣೇಶ್ ಕೆಎಸ್ ನಂತಹ ವ್ಯಕ್ತಿಗಳು ಗ್ರಾಪಂ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಸರ್ಕಾರದಿಂದ ಅರ್ಹರಿಗೆ ದೊರಕುವ ಸೌಲಭ್ಯ ದೊರಕದಂತೆ ಮಾಡುವ ಕೃತ್ಯ ನಡೆಸುತ್ತಿದ್ದು, ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಜಿಲ್ಲಾಡಳಿತ ಎಂದು ಯತೀಂದ್ರ ಆಗ್ರಹಿಸಿದ್ರು. ಅವರು ದಯವಿಟ್ಟು ಯಾವ ಗ್ರಾಪಂ ಸದಸ್ಯರೂ ನನ್ನಂತಹ ಶಾಶ್ವತ ವಿಕಲ ಚೇತನರ ಬದುಕಿನಲ್ಲಿ ಆಡುವ ಕೆಟ್ಟ ಕೃತ್ಯ ಮಾಡಬೇಡಿ ಎಂದು ಅವರು ವಿನಂತಿಸಿದರು.
Published On - 3:33 pm, Fri, 5 June 20