ಶಿವರಾತ್ರಿಗೆ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಮಹತ್ವದ ಸೂಚನೆ

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ರಸ್ತೆ ಸುರಕ್ಷತೆಗಾಗಿ ಪ್ರತಿಫಲಕಗಳನ್ನು (Reflector) ಧರಿಸಲು, ರಸ್ತೆಯ ಬಲಭಾಗದಲ್ಲಿ ನಡೆಯಲು, ಪರಿಸರ ಸ್ವಚ್ಛತೆ ಸೇರಿದಂತೆ ಭಕ್ತರು ಜಾಗೃತರಾಗಿರುವ ಮೂಲಕ ಸುರಕ್ಷಿತ ಮತ್ತು ಸುಗಮ ಯಾತ್ರೆಯನ್ನು ಮಾಡುವಂತೆ ಸೂಚನೆ ನೀಡಲಾಗಿದೆ.

ಶಿವರಾತ್ರಿಗೆ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಮಹತ್ವದ ಸೂಚನೆ
ಶಿವರಾತ್ರಿಗೆ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಮಹತ್ವದ ಸೂಚನೆ

Updated on: Feb 07, 2025 | 6:40 PM

ಮಂಗಳೂರು, ಫೆಬ್ರವರಿ 07: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಅದರಲ್ಲೂ ಪ್ರತಿ ವರ್ಷ ಮಹಾ ಶಿವರಾತ್ರಿ ಆಚರಿಸಲು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ. ಇದು ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿರುವ ಪರಂಪರೆಯಾಗಿದೆ. ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಸಲಹೆಗಳು ಹೀಗಿವೆ

  • ಪಾದಯಾತ್ರಿಗಳು ರಸ್ತೆಯ ಬಲಬದಿಯಲ್ಲಿ ಚಲಿಸಿ.
  • ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ (Reflector) ಇರಲೇಬೇಕು.
  • ಪಾದಯಾತ್ರೆಯಲ್ಲಿ ಬರುವಾಗ ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ.
  • ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
  • ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ.
  • ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ.
  • ಪಾದಯಾತ್ರಿಗಳು ಏಕಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುವ ಬದಲು, ಒಂದೇ ಬಾಟಲಿಯಲ್ಲಿ ದಾರಿಯುದ್ದಕ್ಕೂ ವಿವಿಧೆಡೆ ಲಭ್ಯವಿರುವ ಕುಡಿಯುವ ನೀರನ್ನು ತುಂಬಿಸಿಕೊಂಡು ಮರುಬಳಕೆ ಮಾಡಿದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಿದಂತಾಗುತ್ತದೆ.

ಶಾಸಕ ಎಸ್. ಸುರೇಶ್‌ ಕುಮಾರ್​​ ಪೋಸ್ಟ್ 

ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್‌ ಕುಮಾರ್​​ ಈ ಬಗ್ಗೆ ಪೋಸ್ಟ್ ಮಾಡಿದ್ದು, ಪ್ರತಿ ವರ್ಷ ಶಿವರಾತ್ರಿಯನ್ನು ಆಚರಿಸಲು ಧರ್ಮಸ್ಥಳಕ್ಕೆ ಪಾದಯಾತ್ರೆಯನ್ನು ಲಕ್ಷಾಂತರ ಜನ ರಾಜ್ಯದ ವಿವಿಧ ಮೂಲೆಗಳಿಂದ ಕೈಗೊಳ್ಳುತ್ತಾ ಬಂದಿದ್ದಾರೆ. ಇದು ಅನೇಕ ವರ್ಷಗಳಿಂದ ನಡೆದು ಬಂದಿರುವ ಪರಂಪರೆ. ಈ ಸಂದರ್ಭದಲ್ಲಿ ಪಾದಯಾತ್ರೆ ಭಕ್ತ ಮಹಾಶಯರಿಗೆ ಕೆಲವು ಸೂಚನೆಗಳನ್ನು ನೀಡಿಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:46 pm, Fri, 7 February 25