ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಲೇಬಾರದು, ಆಡಿದರೂ ಹೀನಾಯವಾಗಿ ಸೋಲಿಸಬೇಕೆಂದ ಸ್ಪೀಕರ್ ಯುಟಿ ಖಾದರ್
ಭಾರತ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂ ಸಜ್ಜಾಗಿದೆ. ಟಿ20 ವಿಶ್ವಕಪ್ನ ಈ ಪಂದ್ಯದಲ್ಲಿ ಗೆಲುವು ಭಾರತದ್ದಾಗಲಿ ಎಂಬುದು ಭಾರತದ ಅಭಿಮಾನಿಗಳ ಹಾರೈಕೆ. ಈ ಮಧ್ಯೆ, ಪಂದ್ಯದ ಬಗ್ಗೆ ಮಂಗಳೂರಿನಲ್ಲಿ ಹೇಳಿಕೆ ನೀಡಿರುವ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಬೇಕು ಎಂದಿದ್ದಾರೆ.
ಮಂಗಳೂರು, ಜೂನ್ 8: ಭಾರತ ಪಾಕಿಸ್ತಾನ ನಡುವೆ ಭಾನುವಾರ ಟಿ20 ವಿಶ್ವಕಪ್ನ (T20 World Cup 2024) ಹೈವೋಲ್ಟೇಜ್ ಪಂದ್ಯ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಇದ್ದಾರೆ. ಈ ಮಧ್ಯೆ, ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದ ಜೊತೆ ನಾವು ಕ್ರಿಕೆಟ್ ಆಟ ಆಡಲೇಬಾರದು ಎಂದಿದ್ದಾರೆ. ಮಂಗಳೂರಿನಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಅವರು, ಟಿ20 ಮ್ಯಾಚ್ ನಡೆಯುತ್ತಿರುವುದು ಎಲ್ಲರಿಗೂ ಸಂತೋಷದ ವಿಚಾರ. ನಾನು ಸಹ ಕ್ರಿಕೆಟ್ ಆಟಗಾರ ಮತ್ತು ಅಭಿಮಾನಿ. ಅದಕ್ಕಿಂತ ಮಿಗಿಲಾಗಿ ನಾನು ಭಾರತ ದೇಶದ ಪ್ರಜೆ ಎಂದಿದ್ದಾರೆ.
ನಾವು ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟ ಆಡಲೇಬಾರದು. ಪಾಕಿಸ್ತಾನದವರು ಇಲ್ಲಿ ಬಂದಾಗ ವಿರೋಧಿಸಿದ್ದನ್ನು ನೋಡಿದ್ದೇವೆ. ಭಾರತ ದೇಶದಲ್ಲಿ ಅವರ ಜತೆ ಪಂದ್ಯ ಬ್ಯಾನ್ ಮಾಡಲಾಗಿದೆ. ಹಾಗಾದ ಮೇಲೆ ಹೊರದೇಶದಲ್ಲಿ ಯಾಕೆ ಆಟ ಆಡಿಸಬೇಕು? ಅವರು ಸರಿಯಾಗುವ ತನಕ ಅವರ ಜತೆ ಪಂದ್ಯ ಆಡುವುದೇ ಬೇಡ. ಇದು ನನ್ನ ವೈಯಕ್ತಿಕ ಅಂತರಾಳದ ಅನಿಸಿಕೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಭಾರತ-ಪಾಕ್ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ
ಒಂದು ವೇಳೆ ಬಾಂಧವ್ಯ ಸರಿಯಾಗಿದ್ದರೆ ಮತ್ತೆ ನಮ್ಮಲ್ಲಿ ಯಾಕೆ ಆಡುವುದಿಲ್ಲ? ಮ್ಯಾಚ್ ಆಯೋಜಿಸುವವರು ಈ ರೀತಿಯ ಗೊಂದಲ ಮಾಡಬಾರದು. ಈಗ ಆಟ ಆಡಲೇಬೇಕು ಎಂದು ನಿರ್ಧಾರವಾಗಿದೆ. ಭಾರತ ದೇಶ ಟಿ20 ವಿಶ್ವಕಪ್ ಗೆಲ್ಲಬೇಕು ಎಂದು ಅವರು ಆಶಿಸಿದರು.
ಗೆಲುವಷ್ಟೇ ಅಲ್ಲ, ಗೌರವದ ಗೆಲುವಾಗಬೇಕು: ಖಾದರ್
ನಾಳೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಮ್ಮ ಗೆಲವು ಕೇವಲ ಜಯವಷ್ಟೇ ಆಗಬಾರದು. ಅದು ಗೌರವದ ಗೆಲುವಾಗಬೇಕು. ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದು ಖಾದರ್ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ