ಕಾಂಗ್ರೆಸ್ ಆಡಳಿತದಲ್ಲಿ ಸಾಮಾನ್ಯ ಮುಸ್ಲಿಮರೂ ಭಯೋತ್ಪಾದಕರಂತೆ ನಡೆದುಕೊಳ್ಳುತ್ತಿದ್ದಾರೆ: ಕಲ್ಲಡ್ಕ ಪ್ರಭಾಕರ ಭಟ್
ಬಸ್ನಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕೇಳಿಬಂದಿದೆ. ಘಟನೆ ಸಂಬಂಧ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಸಂತ್ರಸ್ತೆಯನ್ನು ಭೇಟಿ ಮಾಡಿದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು, ಏಪ್ರಿಲ್ 25: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿಯಲ್ಲಿ (Belthangady) ಕೇಳಿಬಂದಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ಬೆಳ್ತಂಗಡಿ ಲಾಯಿಲಾ ನಿವಾಸಿ ಅಝೀಮ್ ಎಂಬಾತನನ್ನು ಉಪ್ಪಿನಂಗಡಿ ಪೋಲೀಸರು (Uppinangadi Police) ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಸಾಮಾನ್ಯ ಮುಸ್ಲಿಮರೂ ಭಯೋತ್ಪಾದಕರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಯುವತಿ ಬಸ್ನಲ್ಲಿದ್ದಾಗ ಆರೋಪಿ ಅಝೀಮ್ ಕಿರುಕುಳ ನೀಡಿದ್ದ. ಇದೇ ವೇಳೆ, ಯುವತಿ ಪ್ರತಿಭಟಿಸಿದಾಗ ಆತ ಬಸ್ನ ಕಿಟಕಿಯಿಂದ ಹಾರಿ ತಪ್ಪಿಸಿದ್ದ. ಬಳಿಕ ಉಪ್ಪಿನಂಗಡಿ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂತ್ರಸ್ತೆ ಯುವತಿಯನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ನಂತರ ರಾಜ್ಯ ಸರ್ಕಾರದ ವಿರುದ್ಧ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಬ್ರಿಜೇಶ್ ಚೌಟ ಹೆಸರಿನಲ್ಲಿ ನಕಲಿ ಜಾತಿಪತ್ರ ವೈರಲ್, ಬಿಜೆಪಿಯಿಂದ ಆಯೋಗಕ್ಕೆ ದೂರು
ರಾಜ್ಯದಲ್ಲಿ ಹಿಂದೂಗಳ ಮೇಲೆ ಇಂಥ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಸಾಮಾನ್ಯ ಮುಸ್ಲಿಮರಂತೆ ಕಾಣುವವರು ಕೂಡ ಭಯೋತ್ಪಾದಕರಂತೆ ನಡೆದುಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡದ ಜನತೆ ಇಂಥ ಘಟನೆಗಳನ್ನು ಸಹಿಸುವುದಿಲ್ಲ. ಸರ್ಕಾರ, ಪೋಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದೇ ಹೋದಲ್ಲಿ ಜಿಲ್ಲೆಯಲ್ಲಿ ಅರಾಜಕತೆ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



