ಪುತ್ತೂರು, ನವೆಂಬರ್ 2: ಕರವಾಳಿ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ಭರವಸೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕೊಂಬೆಟ್ಟು ಕಾಲೇಜು ಮೈದಾನದಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಜೆಯಾದ ಮೇಲೆ ಮಂಗಳೂರು ಡ್ರೈ ಸಿಟಿಯಾಗಿದೆ. ಕೋಮುಗಲಭೆ ಬಳಿಕ ಇಲ್ಲಿ ಕೊಂಚ ಅಭಿವೃದ್ಧಿ ಕಡಿಮೆ ಆಗಿದೆ. ವಿದ್ಯಾ ಸಂಸ್ಥೆಗಳಿದ್ದರೂ ಗಲಾಟೆ ಕಾರಣದಿಂದ ಮಕ್ಕಳು ಬರಲು ಭಯಪಡುತ್ತಾ ಇದ್ದಾರೆ. ಇಲ್ಲಿನವರು ದುಬೈ, ಮುಂಬೈಗೆ ಹೋಗುತ್ತಾ ಇದ್ದಾರೆ. ಹಾಗಾಗಿ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಕರಾವಳಿಗೆ ಪ್ರತ್ಯೇಕ ನೀತಿ ಹಾಗೂ ಟೂರಿಸಂ ಪಾಲಿಸಿ ರೂಪಿಸುತ್ತೇವೆ. ಮನಸ್ಸಿನ ಅಶಾಂತಿ ಸರಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕಿದೆ ಎಂದು ಅವರು ಹೇಳಿದರು.
ನಾನು ಮಾತಿನಲ್ಲಿ ಗೆಲ್ಲುವವನಲ್ಲ, ನಾನು ಕೆಲಸ ಮತ್ತು ಹೃದಯದಿಂದ ಜನರನ್ನು ಗೆಲ್ಲುತ್ತೇನೆ. ಇಡೀ ಸರ್ಕಾರ ಮತ್ತು ನಾನು ನಿಮ್ಮ ಜೊತೆ ಇದ್ದೇವೆ. ಮಿತ್ರ ಅಶೋಕ್ ರೈಯವರು ಇವತ್ತು ತಂದೆ, ತಾಯಿಯನ್ನು ಸ್ಮರಿಸಿ ಧರ್ಮದ ಕೆಲಸ ಮಾಡುತ್ತಾ ಇದ್ದಾರೆ. ಅವಕಾಶವನ್ನು ಪಡೆದುಕೊಳ್ಳುವುದು ಅದೃಷ್ಟ ಅಲ್ಲ, ಅವಕಾಶ ಸೃಷ್ಟಿಸುವುದು ಬುದ್ಧಿವಂತಿಕೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಇವತ್ತು ಅಶೋಕ್ ರೈ ಕುಟುಂಬ ಧರ್ಮದಿಂದ ಸಮಾಜದ ಋಣ ತೀರಿಸುತ್ತಾ ಇದ್ದಾರೆ. ನನಗೆ ಬೇರೆ ಬೇರೆ ರಾಜ್ಯದ ಹಾಗೂ ನಮ್ಮ ರಾಜ್ಯದ ಚುನಾವಣೆ ಇದೆ. ಆದರೆ ಅಶೋಕ್ ರೈ ಜೊತೆಗಿನ ನಂಟಿನ ಕಾರಣದಿಂದ ಇಲ್ಲಿಗೆ ಬಂದಿದ್ದೇನೆ. ಪುತ್ತೂರಿನ ಎಲ್ಲಾ ಧರ್ಮದವರನ್ನು ಭೇಟಿಯಾಗಿರುವುದು ನನ್ನ ಭಾಗ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.
ಪುತ್ತೂರಿನ ಮಹಾಜನತೆಗೆ ಬಳಿ ಒಂದು ವಿಚಾರ ಹೇಳಬೇಕಿದೆ. ಅಶೋಕ್ ರೈಯನ್ನ ವಿಧಾನಸೌಧಕ್ಕೆ ಕಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸ್ತೇನೆ. ಬೇರೆ ಪಕ್ಷದಿಂದ ಬಂದರೂ ಅವರಿಗೆ ಕಾರ್ಯಕರ್ತರು ಸಹಕಾರ ಕೊಟ್ಟಿದ್ದಾರೆ. ಅವರು ಅಗಾಗ್ಗೆ ನಿಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಸಿಎಂ ಜೊತೆ ಜಗಳ ಮಾಡುತ್ತಾರೆ. ಯಶಸ್ಸು ಕಾಣಲು ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಕೃಷ್ಣನ ತಂತ್ರ ಇರಬೇಕು. ಕೆಲವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ಆದರೆ ನಾವು ಹಾಗೆ ಮಾಡಲ್ಲ, ನಮ್ಮದು ಬದುಕಿನ ಮೇಲೆ ರಾಜಕಾರಣ. ನಾವು ಐದು ಗ್ಯಾರಂಟಿ ಕೊಟ್ಟಿರುವ ಕಾರಣ ಎಲ್ಲರ ಕೈ ಗಟ್ಟಿಯಾಗಿದೆ. ಬಿಜೆಪಿ, ದಳ, ಕಾಂಗ್ರೆಸ್ ಅಂತ ಹೇಳದೇ ಜನರಿಗೆ ಗ್ಯಾರಂಟಿ ತಲುಪುತ್ತಿದೆ. ಬೆಲೆಯೇರಿಕೆ ಗಗನಕ್ಕೆ ಹೋಗಿದೆ, ಆದಾಯ ಪಾತಳಕ್ಕೆ ಹೋಗಿದೆ. ಇದನ್ನ ನಿಲ್ಲಿಸಲು ನಾವು ಜನರಿಗೆ ಸಹಾಯ ಮಾಡುತ್ತಾ ಇದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಜನರು ಡಿಸಿಎಂ ಡಿಕೆ ಶಿವಕುಮಾರ್ಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡಿಕೆ ಇಟ್ಟರು. ಜನರ ಪರವಾಗಿ ಶಾಸಕ ಅಶೋಕ್ ರೈ ಡಿಸಿಎಂ ಡಿಕೆಶಿಗೆ ಬೇಡಿಕೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಜನ ಎದ್ದು ನಿಂತು ‘we want medical college’ ಎಂದು ಘೋಷಣೆ ಕೂಗಿದರು. ಬಳಿಕ ಅಧಿಕೃತವಾಗಿ ಡಿಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದನ್ನೂ ಓದಿ: ರೈತರಿಗೆ ನೀಡಿರುವ ವಕ್ಫ್ ನೋಟೀಸ್ ತಕ್ಷಣ ವಾಪಸ್ ಪಡೆಯಿರಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಮೆಡಿಕಲ್ ಕಾಲೇಜಿಗೆ ಬೇಡಿಕೆ ಕೇಳಿ ಬರುತ್ತಿದೆ.
ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ. ಕೆವಿ ರಾಜೇಂದ್ರ ಇತ್ತೀಚೆಗೆ ಸುಳಿವು ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ