ಮಂಗಳೂರು, ಅಕ್ಟೋಬರ್ 22: ಕೆಲ ದಿನಗಳ ಹಿಂದಷ್ಟೇ ಭಜನೆಯಲ್ಲಿ ಪಾಲ್ಗೊಳ್ಳುವ ಹಿಂದುಳಿದ ವರ್ಗಗಳ ಹಿಂದೂ ಹೆಣ್ಮಕ್ಕಳ ಬಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ‘ಭಜನೆ ಮಾಡಿದ ಹಿಂದು ಹುಡುಗಿಯರನ್ನು ಮರದ ಅಡಿಯಲ್ಲಿ ಹಿಂದು ಹುಡುಗರು ಮಲಗಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ 1 ಲಕ್ಷ ಹಿಂದುಳಿದ ವರ್ಗದ ಹುಡುಗಿಯರು ಸೂಳೆಯಾಗಿದ್ದಾರೆ’ ಎಂದು ಹೇಳಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈ ಪ್ರಕರಣದ ಬೆನ್ನಲ್ಲೇ ಮಂಗಳೂರಿನ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಕುಣಿತ ಭಜನೆಯಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳನ್ನ ರಸ್ತೆ ಬೀದಿಯಲ್ಲಿ ಕುಣಿಸಲಾಗುತ್ತಿದೆ ಎಂದು ಹೇಳಿರುವುದು ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ.
ಕುಣಿತ ಭಜನೆ ತಪ್ಪಲ್ಲ. ಆದರೆ ಎಲ್ಲಿ ಕುಣಿಯಬೇಕೋ ಅಲ್ಲೇ ಕುಣಿಯಬೇಕು. ಹಾದಿ ಬೀದಿಯಲ್ಲಿ ಕುಣಿಯುವುದು ತಪ್ಪು ಎಂದಿರುವ ಪ್ರತಿಭಾ ಕುಳಾಯಿ, ಭಜನೆಯಲ್ಲಿ ಯಾವ ಮೇಲ್ವರ್ಗದ ಜನರು ನಮಗೆ ಕಾಣಿಸುತ್ತಿಲ್ಲ. ಮೇಲ್ವರ್ಗದ ಜನ ದೇವಸ್ಥಾನದ ಗೋಪುರದ ಒಳಗೆ ರೇಷ್ಮೆ ಸೀರೆ ಹಾಕಿರುತ್ತಾರೆ. ಒಡವೆ ಹಾಕಿ, ಅಲಂಕಾರ ಮಾಡಿ ದೇವರ ಮುಂದೆ ಕುಣಿಯುತ್ತಾರೆ. ಅದೇ ನಮ್ಮ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಟ್ಯಾಬ್ಲೋ ಮುಂದೆ ಕುಣಿಯುತ್ತಾರೆ. ಮೆರವಣಿಗೆಯಲ್ಲಿ ಕುಣಿಯುತ್ತಾರೆ. ನಮ್ಮ ಮಕ್ಕಳನ್ನು ಕುಣಿತ ಭಜನೆಯ ಟ್ಯಾಗ್‌ನಡಿ ಕುಣಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಕುಣಿತ ಭಜನೆಯನ್ನು ಧಾರ್ಮಿಕ ಕಾರ್ಯಕ್ರಮಗಳ ಮೆರವಣಿಗೆ ಸಂದರ್ಭ, ಟ್ಯಾಬ್ಲೋಗಳ ಮುಂದೆ ಮಾಡಲಾಗುತ್ತದೆ. ಸುಮಾರು ಮೂರು ನಾಲ್ಕು ಕಿ.ಮೀಗಳ ದೂರದವರೆಗೂ ಕುಣಿತ ಭಜನೆಯಲ್ಲಿ ಪಾಲ್ಗೊಂಡವರು ಹೆಜ್ಜೆ ಹಾಕುತ್ತಾರೆ. ಆದರೆ ಈ ಕುಣಿತ ಭಜನೆಯ ಬಗ್ಗೆ ಅಪಸ್ವರ ಕೇಳಿ ಬಂದ ಬಳಿಕ ಈ ಬಗ್ಗೆ ಪರ ವಿರೋಧದ ಚರ್ಚೆ ಕರಾವಳಿಯಲ್ಲಿ ಶುರುವಾಗಿದೆ. ಕೆಲವೊಂದಿಷ್ಟು ಮಂದಿ ಇದು ಸರಿ ಎಂದು ಪ್ರತಿಪಾದಿಸಿದರೆ, ಇನ್ನೊಂದಿಷ್ಟು ಮಂದಿ ತಪ್ಪು ಎಂದು ಚರ್ಚೆಗೆ ಇಳಿದಿದ್ದಾರೆ.
ಇನ್ನು ಕುಣಿತ ಭಜನೆಯಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳ ಬಳಕೆ ಮಾಡಲಾಗುತ್ತಿದೆ ಎಂಬ ಪ್ರತಿಭಾ ಕುಳಾಯಿ ಹೇಳಿಕೆ ವಿಚಾರಕ್ಕೆ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.
ಭಜನೆ ವಿಷಯದಲ್ಲಿ ರಾಜಕೀಯ ದೃಷ್ಟಿ ಕೋನದಲ್ಲಿ ನೋಡುವುದು ಸರಿಯಲ್ಲ. ಹಿಂದೂ ಪರಂಪರೆಯಲ್ಲಿ ದೇವರನ್ನು ತಲುಪಲು ಭಜನೆಯು ಒಂದು ಮಾರ್ಗ ಎಂದು ಹೇಳಿದ್ದಾರೆ. ನೋಡುವ ಮನಸಿನಲ್ಲಿ ಕಲ್ಮಶವಿದ್ದವರು ಭಜನೆಯ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ. ಎಡಪಂಥೀಯ ಚಿಂತನೆಯಲ್ಲಿ ಈ ರೀತಿ ಹೆಚ್ಚಾಗಿ ಕಂಡು ಬರುತ್ತೆ. ಇದಕ್ಕೆ ಹಿಂದೂ ಸಮಾಜ ಸರಿಯಾದ ಉತ್ತರ ಕೊಡುತ್ತೆ. ಭಕ್ತಿಯಲ್ಲಿ ಬಡವ ಬಲ್ಲಿದ ಮೇಲು ಕೀಳು ಎಂಬುದು ಇರುವುದಿಲ್ಲ. ಕ್ಷುಲಕ ಕಾರಣ ತಂದು ಸಮಾಜದಲ್ಲಿ ಬಿರುಕು ಹುಟ್ಟಿಸುವ ಪ್ರಯತ್ನ ಇದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮದ ಒಂದು ಸಮಾಜದ ಹೆಣ್ಣುಮಕ್ಕಳನ್ನು ವೇಶ್ಯೆಯರು ಎಂದ ಸರ್ಕಾರಿ ಅಧಿಕಾರಿ: ಆಕ್ರೋಶ
ರಾತ್ರಿ ಭಜನೆಗೆಂದು ಹೋದ ಹೆಣ್ಣು ಮಕ್ಕಳಿಗೆ ಸಮಸ್ಯೆಯಾದ ಹಲವು ಪ್ರಕರಣಗಳು ದಾಖಲಾಗಿದೆ ಎಂದು ಭಜನೆ ಬಗ್ಗೆ ಅಪಸ್ವರ ಎತ್ತಿರುವವರು ಹೇಳಿರುವುದು ಸಹ ತೀವ್ರ ಚರ್ಚೆಯನ್ನುಂಟು ಮಾಡಿದೆ. ಒಟ್ಟಿನಲ್ಲಿ ಕುಣಿತ ಭಜನೆಯ ಬಗ್ಗೆ ಈ ರೀತಿಯ ಚರ್ಚೆ ಶುರುವಾಗಿರುವುದು ಕುಣಿತ ಭಜನೆಯಲ್ಲಿ ಭಾಗವಹಿಸುವ ಹೆಣ್ಮಕ್ಕಳಿಗೂ ಮುಜುಗರವನ್ನುಂಟು ಮಾಡಿರುವುದು ಸಹ ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ