ಮಂಗಳೂರು, (ಮಾರ್ಚ್ 26): ‘ನೀನು ಚನ್ನಾಗಿದ್ದೀಯಾ. ಗುಡ್ಡೆಗೆ (ಗುಡ್ಡ-ಬೆಟ್ಟ) ಬರುತ್ತೀಯ’ ಎಂದು ಅಪ್ರಾಪ್ತೆ ವಯಸ್ಸಿನ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದವನ ವಿರುದ್ಧ ಪೋಕ್ಸೋ ಪ್ರಕರಣ(Posco Act) ದಾಖಲಾಗಿದೆ. 15 ವರ್ಷದ ಬಾಲಕಿ ಜೊತೆ ಅನುಚಿತ ವರ್ತಿಸಿದ ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ. ಜನವರಿ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.
ಜನವರಿ 12ರಂದು ತಂದೆ ಕೆಲಸ ಮಾಡುವ ತೋಟಕ್ಕೆ ಹೋಗಿದ್ದ ಬಾಲಕಿ ಸಹ ಹೋಗಿದ್ದಳು. ಆ ವೇಳೆ ತೋಟದ ಮಾಲೀಕ ಮಹೇಶ್ ಭಟ್ ‘ನೀನು ಚನ್ನಾಗಿದ್ದಿಯಾ. ನಾನು ಇಷ್ಟ ಇದ್ದೀನಾ. ಗುಡ್ಡೆಗೆ ಬರ್ತೀಯಾ’ ಎಂದು ಬಾಲಕಿಗೆ ಕೇಳಿದ್ದಾನೆ. ಆದ್ರೆ, ಬಾಲಕಿ ಇದಕ್ಕೆ ನಿರಾಕರಿಸಿ ಮನೆಗೆ ಹೋಗಿದ್ದಾಳೆ. ಬಳಿಕ ತೋಟದ ಮಾಲೀಕ ಮಹೇಶ್ ಭಟ್ನ ಅನುಚಿತ ವರ್ತನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪೋಷಕರು ಪೊಲೀಸ್ ಮೆಟ್ಟಿಲೇರಿದ್ದಾರೆ.
ಇದೀಗ ಈ ಸಂಬಂಧ ತೋಟದ ಮಾಲೀಕ ಮಹೇಶ್ ಭಟ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳು (Crime Against Children) ಗಣನೀಯವಾಗಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ. 2025 ರ ಮೊದಲ ಎರಡು ತಿಂಗಳಲ್ಲಿ ಪ್ರತಿದಿನ ಸರಾಸರಿ 10 ಪೋಕ್ಸೊ (POSCO) ಪ್ರಕರಣಗಳು (ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಒದಗಿಸುವ ಕಾಯ್ದೆ) ದಾಖಲಾಗಿವೆ. 2024 ರಲ್ಲಿ, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು 8,233 ದಾಖಲಾಗಿದ್ದವು ಎಂದು ಪೊಲೀಸ್ ಇಲಾಖೆ (Karnataka Police) ಅಂಕಿಅಂಶಗಳಿಂದ ತಿಳಿದುಬಂದಿದೆ. ಇದು 2023ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. 2023 ರಲ್ಲಿ 7,854 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಶೇ 38.89 ರಷ್ಟು ಏರಿಕೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ