
ಮಂಗಳೂರು, ಏಪ್ರಿಲ್ 29: ‘ಕಾಪಾಡಿ, ಕೊಳಕು ಹಿಂದೂಗಳು (Hindu) ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು (India) ದ್ವೇಷಿಸುತ್ತೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangalore) ವೈದ್ಯೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇರುವ ಸಂದರ್ಭದಲ್ಲಿಯೇ ವೈದ್ಯೆ ಈ ರೀತಿ ಪೋಸ್ಟ್ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದು, ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್ಆರ್ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್ಎಸ್ ಕಲಂ 196(1)(a), 353(2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಅಫೀಫ ಫಾತಿಮಾ ಪೋಸ್ಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಹೈಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ವಜಾಗೊಳಿಸಿದೆ. ನಂತರ ಆಸ್ಪತ್ರೆಯ ಹೆಚ್ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳೂರಿನ ಹೈಲ್ಯಾಂಡ್ ನ ಖಾಸಗಿ ಆಸ್ಪತ್ರೆಯ ವೈದ್ಯೆಯ ದೇಶ ಹಾಗೂ ಹಿಂದೂ ವಿರೋಧಿ ಬರವಣಿಗೆಯ ಬಗ್ಗೆ ಮಂಗಳೂರು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ವೈದ್ಯೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ವಿಹೆಚ್ಪಿ ಮುಖಂಡ ಶರಣ್ ಕುಮಾರ್ ಪಂಪ್ವೆಲ್ ಆಗ್ರಹಿಸಿದ್ದರು.
ಇದನ್ನೂ ಓದಿ: ಮಂಗಳೂರು: ಪಹಲ್ಗಾಮ್ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್ ಬುಕ್ನಲ್ಲಿ ಪೋಸ್ಟ್
ಪಹಲ್ಗಾಮ್ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಕೆಲವೇ ದಿನ ಹಿಂದಷ್ಟೇ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದ. “2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಮೂವರು ಮುಸ್ಲಿಮರನ್ನು ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್ಗೆ ಸಾರ್ವಜನಿಕವಾಗಿ ನೇಣಿಗೆ ಹಾಕಲಿಲ್ಲ. ಪಾಲ್ಗರ್ ಘಟನೆ ಕಾರಣಕ್ಕೆ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ” ಎಂದು ನಿಚ್ಚು ಮಂಗಳೂರು ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಪೋಸ್ಟ್ ವಿರುದ್ಧ ಪ್ರಕರಣದ ದಾಖಲಿಸಿದ್ದ ಮಂಗಳೂರು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇ ಸಂದರ್ಭದಲ್ಲಿ ಈಗ ವೈದ್ಯೆ ದೇಶ ವಿರೋಧಿ ಪೋಸ್ಟ್ ಮಾಡಿದ್ದಾಳೆ.
Published On - 8:32 am, Tue, 29 April 25