ಈದ್ ಮಿಲಾದ್ ಹಬ್ಬಕ್ಕೆ ಮಂಗಳೂರಿನ ಮೀನು ಧಕ್ಕಗೆ ಕಡ್ಡಾಯ ರಜೆ ಬ್ಯಾನರ್ ವಿವಾದ: ಉಲ್ಲಂಘಿಸಿದಲ್ಲಿ 1 ತಿಂಗಳ ಬಹಿಷ್ಕಾರದ ಎಚ್ಚರಿಕೆ
ಈದ್ ಮಿಲಾದ್ ಹಬ್ಬದಂದು ಮಂಗಳೂರಿನ ಮೀನುಗಾರಿಕಾ ಬಂದರಿನ ಧಕ್ಕೆಗೆ ರಜೆ ಎಂದು ಹಾಕಲಾದ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿವಾದಕ್ಕೆ ಕಾರಣವಾಗಿದೆ. ಹಿಂದೂ ಪರ ಸಂಘಟನೆ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಗಳೂರು ಧಕ್ಕ ಹಸಿ ಮೀನು ಮಾರಾಟಗಾರರ ಕಮಿಷನ್ ಎಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ರಜೆ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಮಂಗಳೂರು, ಸೆ.25: ಈದ್ ಮಿಲಾದ್ ಹಬ್ಬಕ್ಕೆ (Eid Milad) ಮಂಗಳೂರಿನ ಮೀನು ಧಕ್ಕಗೆ (Mangalore Fish Market) ಕಡ್ಡಾಯ ರಜೆ ಎಂದು ಬ್ಯಾನರ್ ಹಾಕಲಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ. ಈದ್ ಮಿಲಾದ್ ಹಬ್ಬದಂದು ಮಂಗಳೂರಿನ ಮೀನುಗಾರಿಕಾ ಬಂದರಿನ ಧಕ್ಕೆಗೆ ರಜೆ ಎಂದು ಹಾಕಲಾದ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿವಾದಕ್ಕೆ ಕಾರಣವಾಗಿದೆ. ಹಿಂದೂ ಪರ ಸಂಘಟನೆ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.
ಧಕ್ಕೆಯಲ್ಲಿ ದಂಡನೆ ವಿಧಿಸಲು ಶರಿಯತ್ ಕಾನೂನು ಜಾರಿಯಲ್ಲಿದೆಯಾ? ಎಂದು ಫೇಸ್ ಬುಕ್ನಲ್ಲಿ ವಿ.ಎಚ್.ಪಿ ಮುಖಂಡ ಶರಣ್ ಪಂಪುವೆಲ್ ಪೋಸ್ಟ್ ಮಾಡಿದ್ದಾರೆ. ಇವರ ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮೊಂದಿಗೆ ಇಡೀ ಹಿಂದೂ ಸಮಾಜವಿದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಸದ್ಯ ಈ ಬ್ಯಾನರ್ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಬ್ಯಾನರ್ನಲ್ಲೇನಿದೆ?
ಮಂಗಳೂರಿನ ಸ್ಟೇಟ್ ಬ್ಯಾಂಕ್ ನ ಬಂದರಿನಲ್ಲಿರುವ ಮೀನುಗಾರಿಕೆ ಧಕ್ಕೆಗೆ (ಮೀನುಗಾರಿಕಾ ಬೋಟ್ಗಳಲ್ಲಿ ಬರುವ ಮೀನುಗಳನ್ನು ವಿಲೇವಾರಿ ಮಾಡುವ ಸ್ಥಳ) ರಜೆ ಕಡ್ಡಾಯ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಈದ್ ಮಿಲಾದ್ ಗೆ ಯಾರು ಸಹ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಗಿದೆ. ಸೆ.28 ರಂದು ಮುಂಜಾನೆ 3:45ರ ನಂತರ ಹಸಿ ಮೀನು ವ್ಯಾಪಾರಿಗಳು ವ್ಯಾಪಾರ ಮಾಡಬಾರದು. ಕಡ್ಡಾಯವಾಗಿ ರಜೆ ಮಾಡಬೇಕು. ರಜೆ ಮಾಡದೆ ಕಾನೂನು ಉಲ್ಲಂಘಿಸಿದ್ದಲ್ಲಿ 1 ತಿಂಗಳ ಕಾಲ ಆ ವ್ಯಕ್ತಿಗೆ ಬಹಿಷ್ಕಾರ ಹಾಕಲಾಗುವುದು. ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಸಂಘ ಕಾನೂನು ಕ್ರಮ ಕೈಗೊಳ್ಳುತ್ತೆ. ಇದರ ಜೊತೆ ದಂಡನೆಯನ್ನು ವಿಧಿಸಬೇಕಾಗುತ್ತದೆ. ಹಾಗೂ ಸಂಘದ ಯಾವುದೇ ಸಹಕಾರದಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ತಪ್ಪದೇ ಕಾನೂನು ಪಾಲಿಸಬೇಕಾಗಿ ವಿನಂತಿ ಎಂದು ಅಧ್ಯಕ್ಷರು ಸರ್ವ ಸದಸ್ಯರು, ಹಸಿ ಮೀನು ವ್ಯಾಪಾರಸ್ಥರ ಸಂಘ ಬಂದರು ಮಂಗಳೂರು ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ.
ಘಟನೆ ಬಗ್ಗೆ ಮೀನು ಮಾರಾಟಗಾರರ ಕಮಿಷನ್ ಎಜೆಂಟರ ಸಂಘದ ಅಧ್ಯಕ್ಷನ ಸ್ಪಷ್ಟನೆ ಹೀಗಿದೆ
ಇನ್ನು ಈ ಬಗ್ಗೆ ಟಿವಿ9ಗೆ ಮಂಗಳೂರು ಧಕ್ಕ ಹಸಿ ಮೀನು ಮಾರಾಟಗಾರರ ಕಮಿಷನ್ ಎಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿ ವರ್ಷಕ್ಕೆ 8 ರಜೆಯಿದೆ. 8 ರಜೆಗಳನ್ನು ಎಲ್ಲರೂ ಸೇರಿ ತೀರ್ಮಾನ ಮಾಡಿ ಘೋಷಿಸಿರುವ ರಜೆ. ಈ ರಜೆಗಳ ವೇಳೆ ಕಡ್ಡಾಯವಾಗಿ ರಜೆ ಮಾಡಬೇಕು. ಯಾರು ಸಹ ವ್ಯಾಪಾರ ಮಾಡುವಂತಿಲ್ಲ. ಹೊರಗಡೆ ಮೀನು ಮಾರಾಟ ಮಾಡಿದ್ರೆ ಅದಕ್ಕೂ ನಮಗೂ ಸಂಬಂಧ ಇಲ್ಲ. ಹತ್ತು ವರ್ಷದ ಮೊದಲು ಬ್ಯಾನರ್ ಹಾಕ್ತ ಇದ್ವಿ. ಈಗ ಜನರಿಗೆ ಗೊತ್ತಿದೆ. ಹಾಗಾಗಿ ಮೈಕ್ ನಲ್ಲಿ ಅನೌನ್ಸ್ಮೆಂಟ್ ಮಾಡ್ತೀವಿ. ಆದ್ರೆ ಕೆಲವರು ರಾತ್ರಿ ಬಂದು ವ್ಯಾಪಾರ ಮಾಡೋದು ಕಂಡು ಬಂದಿದೆ. ಹೀಗಾಗಿ ಮತ್ತೆ ಬ್ಯಾನರ್ ಹಾಕುವ ಪದ್ದತಿ ಜಾರಿ ಮಾಡಿದ್ದೇವೆ. ಇದನ್ನೂ ಓದಿ: ದಾವಣಗೆರೆ ಬಂದ್ಗೆ ಉತ್ತಮ ಪ್ರತಿಕ್ರಿಯೆ, ಅಂಗಡಿ-ಮುಗ್ಗಟ್ಟು, ರಸ್ತೆ ಸಾರಿಗೆ ಬಂದ್; ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್
ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಬ್ಯಾನರ್ ಹಾಕಿದ್ದೇವೆ. ಮೊನ್ನೆ ಚೌತಿಗೆ ರಜೆ ಇದ್ದಾಗ ಇಬ್ಬರು ಬಂದು ವ್ಯಾಪಾರ ಮಾಡಿದ್ದಾರೆ. ಆ ಕಾರಣದಿಂದ ಈ ಬ್ಯಾನರ್ ಹಾಕಿದ್ದೇವೆ ಹೊರತು ಬೇರೆ ಉದ್ದೇಶವಿಲ್ಲ. ನಮ್ಮ ಐಕ್ಯತೆಗೆ ತೊಂದರೆಯಾಗಬಾರದೆಂದು. ಒಮ್ಮತದ ರಜೆ ತೀರ್ಮಾನ ಮಾಡಿದ್ದೇವೆ. ಹಿಂದೂಗಳಿಗೆ ಚೌತಿ, ಬಾರ್ಕೂರು, ಉಚ್ಚಿಲ ಪೂಜೆಗೆ ಮೂರು ರಜೆ ಇದೆ. ಕ್ರೈಸ್ತರಿಗೆ ಗುಡ್ ಫ್ರೈಡೆ ಮತ್ತು ಕ್ರಿಸ್ಮಸ್ ಗೆ ರಜೆ ಇದೆ. ಮುಸ್ಲಿಂರಿಗೆ ಈದ್ ಮಿಲಾದ್, ಪೆರ್ನಾಳ್ ಗೆ ರಜೆ ಇದೆ. ಎಂಟು ರಜೆಗಳು ಕಡ್ಡಾಯವಾಗಿ ಮಾಡಲಾಗಿದೆ. ಉಳಿದ ರಜೆಗಳು ಆಯಾಯ ಯೂನಿಯನ್ಗಳಿಗೆ ಬಿಟ್ಟ ವಿಚಾರ. ಹಿಂದೂಪರ ಸಂಘಟನೆಗಳ ನಾಯಕರಿಗೆ ಬೇರೆ ಕೆಲಸವಿಲ್ಲ. ನಾವು ಸೌಹಾರ್ದತೆಯಿಂದ ವ್ಯಾಪಾರ ವಹಿವಾಟು ಮಾಡುತ್ತಿದ್ದೇವೆ. ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಯಾರು ಮಾಡಬಾರದು. ಪೊಲೀಸ್ ನವರು ಸಂಪರ್ಕ ಮಾಡಿದ್ರು ಇದೇ ರೀತಿ ಹೇಳುತ್ತೇವೆ. ಕಾನೂನು ಉಲ್ಲಂಘನೆ, ದೇಶ ದ್ರೋಹದ ಕೆಲಸ ಮಾಡಿಲ್ಲ ಎಂದು ಕೆ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:11 pm, Mon, 25 September 23