ಮಂಗಳೂರು ಗುಡ್ಡ ಕುಸಿತ: ಇತ್ತ ಮಣ್ಣಲ್ಲಿ ಮಣ್ಣಾದ ಮಕ್ಕಳು, ಅತ್ತ ಆಸ್ಪತ್ರೆಯಲ್ಲಿ ಕನವರಿಸುತ್ತಿರುವ ತಾಯಿ
ಮಂಗಳೂರಿನ ಉಳ್ಳಾಲ ತಾಲೂಕಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಅಶ್ವಿನಿ ಪೂಜಾರಿ ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಅವರ ಇಬ್ಬರು ಮಕ್ಕಳು ಸಹ ಮೃತಪಟ್ಟಿದ್ದಾರೆ. ಅವರ ಅತ್ತೆ ಪ್ರೇಮಾ ಪೂಜಾರಿಯವರೂ ಸಾವನ್ನಪ್ಪಿದ್ದಾರೆ. ಅಶ್ವಿನಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ತಮ್ಮ ಮಕ್ಕಳ ಸಾವಿನ ಬಗ್ಗೆ ಇನ್ನೂ ತಿಳಿದಿಲ್ಲ. ಈ ದುರಂತದಿಂದ ಇಡೀ ಗ್ರಾಮ ಶೋಕಸಾಗರದಲ್ಲಿದೆ.

ಮಂಗಳೂರು, ಮೇ 31: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಮಂಜನಾಡಿಯ ಮೊಂಟೆಪದವು ಎಂಬಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ (Land slide) ಗಾಯಗೊಂಡಿದ್ದ ಅಶ್ವಿನಿ ಪೂಜಾರಿ ಅವರು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಗುಡ್ಡ ಕುಸಿತದಲ್ಲಿ ಅಶ್ವಿನಿ ಪೂಜಾರಿ ಅವರ ಎರಡೂ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದವು. ಹೀಗಾಗಿ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅಶ್ವಿನಿಯವರ ಎರಡೂ ಕಾಲುಗಳನ್ನು ತೆಗೆದಿದ್ದಾರೆ. ಅಶ್ವಿನಿಯವರ ಒಂದು ಕಾಲಿನ ಪಾದದ ಭಾಗ ಕಟ್ ಆಗಿದೆ. ಮತ್ತೊಂದು ಪೂರ್ತಿ ಕಾಲು ಕತ್ತರಿಸಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಶ್ವಿನಿ ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು, ಅಶ್ವಿನಿ ಪೂಜಾರಿ ಅವರಿಗೆ ತನ್ನ ಇಬ್ಬರು ಮಕ್ಕಳು ಮೃತಪಟ್ಟಿರುವ ವಿಚಾರ ಗೊತ್ತಿಲ್ಲ. ತನ್ನ ಇಬ್ಬರು ಮಕ್ಕಳು ಎಲ್ಲಿ ಎಂದು ಆಸ್ಪತ್ರೆಯಲ್ಲಿ ನೋವಿನಲ್ಲೇ ಅಶ್ವಿನಿ ಅವರು ಕನವರಿಸುತ್ತಿದ್ದನ್ನು ಕಂಡು ಕುಟುಂಬಸ್ಥರು ಕಣ್ಣಂಚುಗಳು ಒದ್ದೆಯಾಗಿವೆ. ಆದರೆ, ಸಂಬಂಧಿಕರು ಮಕ್ಕಳ ಸಾವಿನ ವಿಚಾರವನ್ನು ಅಶ್ವಿನಿ ಅವರಿಗೆ ಇನ್ನೂವರೆಗೂ ತಿಳಿಸಿಲ್ಲ.
ಘಟನೆಯಲ್ಲಿ ಮೃತರಾದ ಅಜ್ಜಿ ಮತ್ತು ಮೊಮ್ಮಕ್ಕಳ ಅತ್ಯಕ್ರಿಯೆ ಕುಸಿದು ಬಿದ್ದ ಮನೆಯ ಪಕ್ಕದಲ್ಲೇ ನೆರವೇರಿತು. ಸೀತಾರಾಮ್ ಪೂಜಾರಿ ಮತ್ತು ಅಶ್ವಿನಿ ಪೂಜಾರಿ ದಂಪತಿಯ ಇಬ್ಬರು ಮಕ್ಕಳು ಆರ್ಯನ್ ಮತ್ತು ಆರುಷ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ಮೊಮ್ಮಕಳ ಸಮಾಧಿ ಪಕ್ಕದಲ್ಲೇ ಅಜ್ಜಿ ಪ್ರೇಮಾ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂವರ ಸಾವಿನಿಂದ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಅಂತ್ಯಕ್ರಿಯೆ ವೇಳೆ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು, ದುರಂತ ನಡೆದ ಸ್ಥಳದಲ್ಲಿ ಆವರಿಸಿರುವ ಸ್ಮಶಾನ ಮೌನ ಆವರಿಸಿದೆ. ಸ್ಥಳದಲ್ಲಿ ಬಿದ್ದಿರುವ ಅವಶೇಷಗಳು ದುರಂತದ ಕಥೆಯನ್ನು ಹೇಳುತ್ತಿವೆ. ಮನೆಯೊಳಗಿನ ಮಂಚ, ದಿಂಬು, ಪಾತ್ರೆಗಳು ಅಂಗಳದಲ್ಲಿ ಬಿದ್ದಿವೆ. ಮನೆಯ ಅವಶೇಷಗಳ ಅಡಿಯಿಂದ ಬಂದ ಎರಡು ಪುಟ್ಟ ಬೆಕ್ಕಿನ ಮರಿಗಳು ತಮ್ಮ ಯಜಮಾನನ್ನು ಹುಡುಕುತ್ತಿರುವ ದೃಶ್ಯ ಮನಕಲಕುವಂತಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ
ಏನಿದು ಘಟನೆ?
ಉಳ್ಳಾಲ ತಾಲೂಕಿನ ಮಂಜನಾಡಿಯ ಮೊಂಟೆಪದವು ಎಂಬಲ್ಲಿ ಶುಕ್ರವಾರ ನಸುಕಿನ ಜಾವ 4:30ರ ಸುಮಾರಿಗೆ ಮಳೆಯಿಂದ ಗುಡ್ಡ ಕುಸಿದು, ಪಕ್ಕದಲ್ಲೇ ಇದ್ದ ಕಾಂತಪ್ಪ ಪುಜಾರಿ ಎಂಬುವರ ಮನೆ ಮೇಲೆ ಬಿದ್ದಿತ್ತು. ಗುಡ್ಡ ಕುಸಿಯುವ ಶಬ್ಧ ಕೇಳಿ ಕಾಂತಪ್ಪ ಪೂಜಾರಿ ಎದ್ದು ಹೊರಗೆ ಓಡಿ ಬರುವಷ್ಟರಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿತ್ತು. ಕಾಂತಪ್ಪ ಪೂಜಾರಿ ಅವರ ಮೇಲೆ ಮನೆಯ ಸ್ಲ್ಯಾಬ್ ಬಿದ್ದಿತ್ತು. ಇದರಿಂದ ಕಾಂತಪ್ಪ ಪೂಜಾರಿ ಅವರು ಕಾಲು ಮುರಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮನೆ ಕುಸಿದು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಮೃತಪಟ್ಟಿದ್ದರು. ಇನ್ನು, ಕಾಂತಪ್ಪ ಪೂಜಾರಿ ಪುತ್ರ ಸೀತಾರಾಮ್ ಪೂಜಾರಿ ಮತ್ತು ಸೊಸೆ ಅಶ್ವಿನಿ ಪರಾಗಿದ್ದರು. ಆದರೆ, ಸೀತಾರಾಮ್ ಪೂಜಾರಿ ಮತ್ತು ಅಶ್ವಿನಿ ಪೂಜಾರಿ ದಂಪತಿಯ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಅಜ್ಜಿ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರ್ಯನ್ ಮತ್ತು ಆರುಷ್ ಮೃತರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sat, 31 May 25



