
ಮಂಗಳೂರು, ನವೆಂಬರ್ 10: ಮಂಗಳೂರಿನ ಚರ್ಚ್ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಪಾದ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡನೇ ಪ್ರಕರಣ ದಾಖಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಕೇಂದ್ರ ಉಪವಿಭಾಗದ ಎಸಿಪಿಗೆ ವಹಿಸಲಾಗಿದೆ.
ಈ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿರುವುದು ಮೈಸೂರು ಮೂಲದ ಒಡನಾಡಿ ಸೇವಾ ಸಂಸ್ಥೆ ಮಾಡಿರುವ ಗಂಭೀರ ಆರೋಪ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ಡಾನ ಅವರು ಪಾದ್ರಿ ವಿರುದ್ಧದ ದೂರುಗಳ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದರೂ ಪೊಲೀಸರಿಗೆ ದೂರು ನೀಡದೆ ಆಂತರಿಕ ತನಿಖೆ ನಡೆಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಆಗಸ್ಟ್‌ನಲ್ಲಿಯೇ ಐವರು ಬಾಲಕರು ಹಾಗೂ ಅವರ ಪೋಷಕರು ಬಿಷಪ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು ಎನ್ನಲಾಗಿದೆ.
ಆದರೆ ಗಂಭೀರ ಸ್ವರೂಪದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪವಿದ್ದರೂ ಪೊಲೀಸ್ ದೂರು ದಾಖಲಿಸುವ ಬದಲು ಚರ್ಚ್ ಮಟ್ಟದಲ್ಲಿ ವಿಚಾರಣೆ ನಡೆಸಲಾಗಿದೆ ಎಂಬುದು ಒಡನಾಡಿ ಸಂಸ್ಥೆಯ ಆಕ್ಷೇಪ. ಪೋಕ್ಸೋ ಕಾಯಿದೆ 2012ರ ಸೆಕ್ಷನ್ 19 ಮತ್ತು 21ರ ಅಡಿಯಲ್ಲಿ ಮಾಹಿತಿ ನೀಡುವ ಕಡ್ಡಾಯ ಜವಾಬ್ದಾರಿಯನ್ನು ಪಾಲಿಸಿಲ್ಲ ಎಂದು ಆರೋಪಿಸಿ ಬಿಷಪ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಂಸ್ಥೆ ದೂರು ನೀಡಿದೆ.
ಒಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಅವರು ಪ್ರಕರಣದ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿರುವುದರಿಂದಲೇ ಪಾದ್ರಿಗೆ ಜಾಮೀನು ಪಡೆಯಲು ಅನುಕೂಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಷಪ್ ಮಾತ್ರವಲ್ಲದೆ ವೆಲೆನ್ಸಿಯಾ ಚರ್ಚ್ ಉಪಾಧ್ಯಕ್ಷ ಹಾಗೂ ಬಿಷಪ್ ಹೌಸ್‌ನ ಪ್ರಮುಖರ ವಿರುದ್ಧವೂ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಪ್ರಕರಣದಲ್ಲಿ ಇನ್ನೂ ಹಲವು ಮಕ್ಕಳು ಸಂತ್ರಸ್ತರಾಗಿರುವ ಸಾಧ್ಯತೆಯಿದ್ದು, ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ಪಾದ್ರಿ ವಿರುದ್ಧದ ಎಲ್ಲ ಆರೋಪಗಳ ಹಿಂದಿನ ಸತ್ಯಾಂಶ ಹೊರಬರಲು ಪ್ರತ್ಯೇಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂಬುದು ಸಂಸ್ಥೆಯ ಪ್ರಮುಖ ಬೇಡಿಕೆಯಾಗಿದೆ. ಸದ್ಯ ಎರಡನೇ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಗಳ ಕುರಿತು ನ್ಯಾಯಾಲಯದಲ್ಲಿ ಸತ್ಯಾಸತ್ಯತೆ ನಿರ್ಧಾರವಾಗಬೇಕಿದೆ.
ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನ ಪಾದ್ರಿ ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಪ್ರಾರ್ಥನೆಗೆ ತೆರಳಿದ್ದ ಬಾಲಕರಿಗೆ ‘Sweet boy, I Love You’ ಎಂದು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿತ್ತು. ಈ ಬಗ್ಗೆ ಇಬ್ಬರು ಬಾಲಕರು ಪೋಷಕರ ಬಳಿ ಹೇಳಿಕೊಂಡಿದ್ದರು. ಬಳಿಕ ಪೋಷಕರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸಿಪ್ರಿಯನ್ ಪಿಂಟೋಗಾಗಿ ಪೊಲೀಸರು ಹುಡುಕಾಟ ನಡೆಸಿ, ಕೊನೆಗೆ ಆತನನ್ನು ಬಂಧಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ