ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‍ಗೆ ಬೆಂಗಳೂರಿನ ಎನ್‍ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2022ರ ನವೆಂಬರ್ 19ರಂದು ನಡೆದ ಸ್ಫೋಟದಲ್ಲಿ ಶಾರಿಕ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಈ ಕೃತ್ಯದಿಂದ ಭಾರಿ ಅನಾಹುತವೊಂದು ತಪ್ಪಿತ್ತು. ಎನ್‍ಐಎ ತನಿಖೆ ನಂತರ ಸಾಕ್ಷ್ಯಗಳನ್ನು ಪುರಸ್ಕರಿಸಿ ಶಿಕ್ಷೆ ಪ್ರಕಟಿಸಲಾಗಿದೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ
ಮೊಹಮ್ಮದ್ ಶಾರಿಕ್‌
Edited By:

Updated on: Apr 27, 2026 | 5:42 PM

ಮಂಗಳೂರು, ಏ.27: ಮಂಗಳೂರು ನಗರದಲ್ಲಿ ನಡೆದಿದ್ದ ಆತಂಕಕಾರಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ನನ್ನು ದೋಷಿ ಎಂದು ಘೋಷಿಸಿರುವ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು, 10 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಗಾಯಗೊಂಡಿದ್ದರು. ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯವು, ಆರೋಪಿ ವಿರುದ್ಧದ ಸಾಕ್ಷ್ಯಗಳನ್ನು ಪುರಸ್ಕರಿಸಿದೆ. ಶಾರಿಕ್ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ,. ಐಪಿಸಿ ಸೆಕ್ಷನ್ 121ಎ (ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಸಂಚು) ಐಪಿಸಿ ಸೆಕ್ಷನ್ 122 (ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಸಂಗ್ರಹಣೆ) ಐಪಿಸಿ ಸೆಕ್ಷನ್ 326 (ಮಾರಕ ಆಯುಧಗಳಿಂದ ಗಂಭೀರ ಗಾಯಗೊಳಿಸುವುದು) ಯುಎಪಿಎ (UAPA)(ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆ).

 ಆಟೋ ರಿಕ್ಷಾ ಸ್ಫೋಟ ಪ್ರಕರಣದಲ್ಲಿ ಇಲ್ಲಿಯವರೆಗೆ ಏನಾಗಿತ್ತು?

2022ರಲ್ಲಿ ಕರಾವಳಿ ನಗರಿ ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಈ ಭೀಕರ ಸಂಚಿನ ಕರಾಳ ಮುಖಗಳು ಮತ್ತು ತನಿಖೆಯ ಏನೆಲ್ಲ ಆಗಿತ್ತು ಎಂಬ ಮಾಹಿತಿ ಇಲ್ಲಿದೆ ನೋಡಿ. ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣದ ಸಮೀಪವಿರುವ ನಾಗುರಿ ಎಂಬಲ್ಲಿ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಭಾರಿ ಸದ್ದು ಕೇಳಿಬಂತು. ಅದು ಸಾಮಾನ್ಯ ಸ್ಫೋಟವಾಗಿರಲಿಲ್ಲ; ಅದೊಂದು ವ್ಯವಸ್ಥಿತವಾಗಿ ರೂಪಿಸಲಾಗಿದ್ದ ಐಇಡಿ (IED) ಬಾಂಬ್ ಸ್ಫೋಟ. ಈ ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಮೊಹಮ್ಮದ್ ಶಾರಿಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: ‘ಎಂಥ ಮನುಷ್ಯರು ನೀವು?’: ಮೆಟ್ರೋದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಆರೋಪಿಗೆ ಹೈಕೋರ್ಟ್ ಛೀಮಾರಿ, ಅರ್ಜಿ ವಜಾ

ಪೊಲೀಸರು ತನಿಖೆ ಆರಂಭಿಸಿದಾಗ ಆಟೋದಲ್ಲಿ ಸುಟ್ಟುಹೋಗಿದ್ದ ಪ್ರೆಶರ್ ಕುಕ್ಕರ್ ಪತ್ತೆಯಾಯಿತು. ಅದರೊಳಗೆ ಡಿಟೋನೇಟರ್, ಸರ್ಕ್ಯೂಟ್ ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆತ್ಮಾಹುತಿ ಬಾಂಬ್ ಇದ್ದಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಶಾರಿಕ್ ತನ್ನ ಬಳಿ ಹುಬ್ಬಳ್ಳಿಯ ‘ಪ್ರೇಮರಾಜ್’ ಎಂಬುವವರ ಹೆಸರಿನ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದನು, ಶಾರಿಕ್ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಅಳವಡಿಸಿದ್ದನು ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.

ಪ್ರಕರಣದ ಗಾಂಭೀರ್ಯ ಅರಿತ ಕೇಂದ್ರ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿತು. ಶಾರಿಕ್ ಕೇವಲ ಒಬ್ಬ ಅಪರಾಧಿಯಲ್ಲ, ಆತ ಐಸಿಸ್ (ISIS) ಉಗ್ರ ಸಂಘಟನೆಯಿಂದ ಪ್ರೇರಿತನಾಗಿ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ “ಲೋನ್ ವುಲ್ಫ್” (Lone Wolf) ಎಂಬುದು ಬಯಲಾಯಿತು. ಮಂಗಳೂರಿನ ಕದ್ರಿ ದೇವಸ್ಥಾನ ಅಥವಾ ಜನನಿಬಿಡ ಪ್ರದೇಶವೇ ಆತನ ಗುರಿಯಾಗಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು.ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಯನ್ನು ಪೂರ್ಣಗೊಳಿಸಿ ಇಂದು ಅಂತಿಮ ತೀರ್ಪು ನೀಡಿದೆ. ಇನ್ನು ಈ ಘಟನೆಯಿಂದ ಗಾಯಗೊಂಡಿದ್ದ ಪುರುಷೋತ್ತಮ ಪೂಜಾರಿ ಅವರ ಸಹಾಯ ಸುಧಾರಿಸಿಕೊಂಡಿದೆ.

ನಾನು ಯಾವುದೇ ತಪ್ಪು ಮಾಡಿಲ್ಲ: ಆರೋಪಿ ಎ2 ಸೈಯದ್ ಹೇಳಿದ್ದೇನು?

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್​​​ ಮುಂದೆ ಹೇಳಿದ್ದಾನೆ. ಹೀಗಾಗಿ ಎ2 ಸೈಯದ್ ವಿರುದ್ಧ ಸಾಕ್ಷ್ಯ ವಿಚಾರಣೆ ಮುಂದುವರಿಯಲಿದೆ. ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ.

ಆತ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದ್ದೇನೆ: ಆಟೋ ಚಾಲಕ ಪುರುಷೋತ್ತಮ ಪೂಜಾರಿ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಸಂತ್ರಸ್ಥ, ಆಟೋ ಚಾಲಕ ಪುರುಷೋತ್ತಮ ಪೂಜಾರಿ ಈ ಬಗ್ಗೆ ಮಾತನಾಡಿದ್ದಾರೆ. ಮೊಹಮ್ಮದ್ ಶಾರಿಕ್‌ಗೆ ಕಠಿಣ ಶಿಕ್ಷೆ ವಿಧಿಸಿರೋದು ಸರಿಯಾದ ನಿರ್ಧಾರ. ಆತ ಜೀವಮಾನದಲ್ಲಿ ಜೈಲಿನಿಂದ ಹೊರಗಡೆ ಬರಬಾರದು. ಆತ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದ್ದೇನೆ. ಮುಂದೆ ಯಾರು ಸಹ ಈ ರೀತಿಯ ಕೃತ್ಯ ಮಾಡಬಾರದು ಎಂದು ಟಿವಿ9 ಕನ್ನಡಕ್ಕೆ ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:05 pm, Mon, 27 April 26

Loading...
Unable to load recommendations.
Follow Us