ಮಂಗಳೂರು: ಕೆತ್ತಿಕಲ್ ಗುಡ್ಡದ ಮೇಲಿವೆ 200ಕ್ಕೂ ಹೆಚ್ಚು ಮನೆ, ವಯನಾಡು ರೀತಿಯ ದುರಂತದ ಭೀತಿ

| Updated By: Ganapathi Sharma

Updated on: Aug 05, 2024 | 9:24 AM

ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡದಲ್ಲಿ ಮಣ್ಣು ಕುಸಿತ ಇನ್ನೂ ಮುಂದುವರಿದಿದ್ದು, ಗುಡ್ಡದ ಮೇಲ್ಭಾಗದ ಅನೇಕರು ಮನೆ ಖಾಲಿ ಮಾಡಿ ತೆರಳಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಮನೆ ಖರೀದಿಸಿದ್ದವರಿಗೂ ಕಂಟಕ ಎದುರಾಗಿದೆ. ವಯನಾಡು ರೀತಿಯ ದುರಂತದ ಭೀತಿ ಇಲ್ಲಿನ ಜನರನ್ನು ಆವರಿಸಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಈ ಸ್ಥಿತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಮಂಗಳೂರು: ಕೆತ್ತಿಕಲ್ ಗುಡ್ಡದ ಮೇಲಿವೆ 200ಕ್ಕೂ ಹೆಚ್ಚು ಮನೆ, ವಯನಾಡು ರೀತಿಯ ದುರಂತದ ಭೀತಿ
ಕೆತ್ತಿಕಲ್ ಗುಡ್ಡ ಕುಸಿತ ಸಂಭವಿಸಿದ ಸ್ಥಳ
Follow us on

ಮಂಗಳೂರು, ಆಗಸ್ಟ್ 5: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಗುಡ್ಡ ಕುಸಿತದ ಪರಿಣಾಮ ನೂರಾರು ಜನ ಮೃತಪಟ್ಟಿದ್ದಾರೆ. ಇನ್ನೂ ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಇಂಥ ಭಯಾನಕ ಸನ್ನಿವೇಶದಲ್ಲಿ ಇದೀಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯೂ ಅಂಥದ್ದೇ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡದ ಮಣ್ಣು ಕುಸಿಯುತ್ತಲೇ ಇದ್ದು ಆತಂಕ ಸೃಷ್ಟಿಸಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಅಗೆತ ಮಾಡಿರುವ ಕಾರಣ ಇದೀಗ ಭಾರಿ ಮಳೆಯ ಸಂದರ್ಭದಲ್ಲಿ ಗುಡ್ಡದ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಕಾಮಗಾರಿ ಜೊತೆ ಮಣ್ಣು ಗಣಿಗಾರಿಕೆ ನಡೆಸಿದ ಆರೋಪವೂ ಇಲ್ಲಿ ಕೇಳಿಬಂದಿದೆ. ಬೇಕಾಬಿಟ್ಟಿಯಾಗಿ ಕೆತ್ತಿಕಲ್ ಗುಡ್ಡ ಅಗೆಯಲಾಗಿದ್ದು, ಆ ಸ್ಥಳ ಭಯಾನಕವಾಗಿದೆ.

ಗುಡ್ಡ ಅಗೆಯುವ ಸಂದರ್ಭ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಆ ಬಗ್ಗೆ ಅಧಿಕಾರಿಗಳು ಮೌನವಹಿಸಿದ್ದರು. ಇದೀಗ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿವೆ 200ಕ್ಕೂ ಹೆಚ್ಚು ಮನೆ

ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಒಂದು ವೇಳೆ ಇಡೀ ಗುಡ್ಡವೇನಾದರೂ ಕುಸಿದುಹೋದಲ್ಲಿ ಕೇರಳದ ವಯನಾಡು ದುರಂತದಂತೆ ಇಲ್ಲಿಯೂ ಸಂಭವಿಸುವ ಆತಂಕ ಎದುರಾಗಿದೆ.

ಸದ್ಯ ಜರಿದಿರುವ ಗುಡ್ಡದ ಸಮೀಪದಲ್ಲೇ ಇರುವ ಮನೆಗಳಿಗೆ ನೋಟಿಸ್ ನೀಡಲಾಗಿದೆ. ಅಪಾಯಕಾರಿ ಸ್ಥಳದಲ್ಲಿನ 12 ಮನೆಗಳಿಗೆ ನೋಟಿಸ್ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಜನ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಜನ ಶಿಕ್ಷೆ ಅನುಭವಿಸುವಂತಾಗಿದೆ.

ಎರಡು ತಿಂಗಳ ಹಿಂದಷ್ಟೇ ಮನೆ ಖರೀದಿಸಿದ್ದರು!

ಎರಡು ತಿಂಗಳ ಹಿಂದಷ್ಟೇ ಖರೀದಿ ಮಾಡಿದ್ದ ಮನೆಯನ್ನು ಖಾಲಿ ಮಾಡುವ ಸ್ಥಿತಿ ಕೆತ್ತಿಕಲ್ ಗುಡ್ಡ ಸಮೀಪದ ಉಷಾ ಎಂಬವರದ್ದಾಗಿದೆ. ಹಲವು ವರ್ಷಗಳಿಂದ ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ ಜನ ನೆಲೆಸಿದ್ದಾರೆ. ಕಾಮಗಾರಿಗಾರಿಗಾಗಿ ಗುಡ್ಡವನ್ನು ಅಗೆದಿರುವುದರಿಂದ ಅವರೆಲ್ಲರಿಗೆ ಸಮಸ್ಯೆ ಎದುರಾಗಿದೆ.

ಟಿವಿ9 ಜತೆ ಅಳಲುತೋಡಿಕೊಂಡ ಜನ

ಕೆತ್ತಿಕಲ್​ನಲ್ಲಿರುವ ಮನೆಗಳು ಮತ್ತು ಸ್ಥಳೀಯರು

ಅಧಿಕಾರಿಗಳ ವಿರುದ್ದ ಕೆತ್ತಿಕಲ್ ಗುಡ್ಡದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಖಾಲಿ ಮಾಡಿ ಹೋಗಿ ಎಂದರೆ ನಾವೆಲ್ಲಿಗೆ ಹೊಗುವುದು? ಗುಡ್ಡ ಅಗೆಯುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿತ್ತೇ ಎಂದು ಸ್ಥಳೀಯ ನಿವಾಸಿಗಳು ‘ಟಿವಿ9’ ಜೊತೆ ಅಳಲು ತೋಡಿಕೊಂಡಿದ್ದಾರೆ. ಜತೆಗೆ, ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಕೆತ್ತಿಕಲ್ ಬಳಿ ಗುಡ್ಡದಿಂದ ಸುರಿಯುತ್ತಿರುವ ಮಣ್ಣು, ಕುಸಿತದ ಅಪಾಯ ಅಲ್ಲಗಳೆಯುವಂತಿಲ್ಲ

ಕಳೆದ ವಾರವಷ್ಟೇ ಜಿಲ್ಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆತ್ತಿಕಲ್ ಗುಡ್ಡ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ಕೆತ್ತಿಕಲ್ ಗುಡ್ಡಕ್ಕೆ ಭೇಟಿ ನೀಡಲು ತಂತ್ರಜ್ಞರ ಸಮಿತಿಗೆ ಸೂಚನೆ ನೀಡಿದ್ದೇನೆ. ಗುಡ್ಡ ಕುಸಿತವಾದ ಕೆತ್ತಿಕಲ್ ಹಾಗೂ ಮುಳುಗಡೆಯಾಗುವ ಅದ್ಯಪಾಡಿ ಬಗ್ಗೆ ವರದಿ ಕೊಡಲು ಹೇಳುತ್ತೇವೆ. ಕೆತ್ತಿಕಲ್​​​ನಲ್ಲಿ ಗುಡ್ಡ ಕುಸಿದು ಭಾರೀ ಭಯದ ವಾತಾವರಣ ಇದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯ ಹೆಸರಿನಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ಗಣಿಗಾರಿಕೆ‌ ಮಾಡಿ ಅವ್ಯಾಹತವಾಗಿ ಮಣ್ಣು ಸಾಗಿಸಲಾಗುತ್ತಿದೆ. ಇಲ್ಲಿ ಮೇಲ್ನೋಟಕ್ಕೆ ಲೋಪದೋಷ ಅಗಿರುವುದು ಕಂಡುಬಂದಿದೆ ಎಂದು ಸಚಿವರು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ