ಮಂಗಳೂರಿನಲ್ಲಿ ಮಾದಕ ದ್ರವ್ಯ ಬೆರೆಸಿದ 100 ಕೆಜಿ ಚಾಕೊಲೇಟ್ ವಶ; ಆರೋಪಿಗಳ ಬಂಧನ
ಚಾಕೊಲೇಟ್ನಲ್ಲಿ ಯಾವ ರೀತಿಯ ಮಾದಕ ದ್ರವ್ಯವನ್ನು ಬೆರೆಸಲಾಗಿದೆ ಎಂಬುದನ್ನು ತಿಳಿಯಲು ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಮಂಗಳೂರು, ಜುಲೈ 20: ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ಗಳನ್ನು (Chocolate) ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಮಂಗಳೂರು ಪೊಲೀಸರು ಗುರುವಾರ ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. 100 ಕೆಜಿ ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ ವಶಪಡಿಸಿಕೊಂಡಿದ್ದಾರೆ. ಖಚಿತ ಸುಳಿವಿನ ಮೇರೆಗೆ ಮಂಗಳೂರಿನ ಪಾಂಡೇಶ್ವರ ಪೊಲೀಸರು ನಗರದ ಕಾರ್ ಸ್ಟ್ರೀಟ್‌ನಲ್ಲಿರುವ ಮನೋಹರ್ ಶೇಟ್ ಮಾಲೀಕತ್ವದ ಅಂಗಡಿ ಮತ್ತು ಉತ್ತರ ಪ್ರದೇಶ ಮೂಲದ ಬೆಚನ್ ಸೋಂಕರ್ ನಡೆಸುತ್ತಿದ್ದ ಫಳ್ನೀರ್‌ನಲ್ಲಿರುವ ಮತ್ತೊಂದು ಸಣ್ಣ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿಗಳಿಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಚಾಕೊಲೇಟ್ನಲ್ಲಿ ಯಾವ ರೀತಿಯ ಮಾದಕ ದ್ರವ್ಯವನ್ನು ಬೆರೆಸಲಾಗಿದೆ ಎಂಬುದನ್ನು ತಿಳಿಯಲು ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಮಹಾಶಕ್ತಿ ಮುನಕ್ಕ, ಬಂ ಬಂ ಮುನಕ್ಕ ವಟಿ, ಪವರ್ ಮುನಕ್ಕ ವಟಿ ಹಾಗೂ ಆನಂದ ಚೂರ್ಣ ಎಂಬ ಹೆಸರುಗಳ ಲೇಬಲ್ ಅಂಟಿಸಿದ್ದ ಪೊಟ್ಟಣಗಳಲ್ಲಿ ಚಾಕೊಲೇಟ್ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೂರು; ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು
ನೀರು ತುಂಬಿದ ಬಕೆಟ್‌ಗೆ ಬಿದ್ದು ಪುಟ್ಟ ಮಗುವೊಂದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಕಾವೂರಿನಲ್ಲಿ ಬುಧವಾರ ನಡೆದಿದೆ. ಕಾವೂರು ಮಸೀದಿ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಜ್ ಅನ್ಸಾರಿ ಅವರ ಪುತ್ರಿ ಆಯಿಷಾ (ಒಂದೂವರೆ ವರ್ಷ) ಮೃತ ದುರ್ದೈವಿ.
ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಾಗಿರುವ ಫಿರೋಜ್ ಅನ್ಸಾರಿ ದಂಪತಿ ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಸಂಜೆ ಮಗು ಆಯಿಷಾ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ