Night fish hunting: ಮಂಗಳೂರು ಗ್ರಾಮೀಣದಲ್ಲಿ ಸಿಟಿ ಹುಡುಗರ ರಾತ್ರಿ ಬೇಟೆ ಜೋರಾಗಿದೆ -ಸೀಗಡಿ, ಮೀನು, ಏಡಿ ಹಿಡಿದು ಎಂಜಾಯ್ ಮಾಡ್ತಿದ್ದಾರೆ!
ದಕ್ಷಿಣ ಕನ್ನಡ ಜನರು ಮೀನು ಪ್ರಿಯರಾಗಿರೋ ಕಾರಣ ಮೀನು ಇಲ್ಲದೆ ಊಟ ಸೇರೋದೇ ಇಲ್ಲ. ಹೀಗಾಗಿ ಇಂತಹ ಬೇಟೆಯಾಡಿ ಮೀನು ಹಿಡಿದಾದ್ರೂ ತಿಂತಾರೆ. ಇನ್ನು ರಾತ್ರಿಯಿಡಿ ಮೀನು, ಏಡಿ ಹಿಡಿಯೋ ಮಜಾ ಅನುಭವಿಸಿದವರಿಗೆ ಗೊತ್ತು.
ಮಂಗಳೂರು, ಜುಲೈ 20: ಯಾವಾಗಲು ಶಖೆ ಹವಾಮಾನ ಇರುವ ಕರಾವಳಿಯಲ್ಲೀಗ ಕೊಂಚ ಕೂಲ್ ಕೂಲ್ ವಾತವರಣವಿದೆ. ಈ ವಾತವರಣದಲ್ಲಿ ಸಿಟಿಗೆ ಬಂದು ನೆಲೆಸಿರೋ ಹಳ್ಳಿ ಹುಡುಗರು ಮತ್ತೆ ಹಳ್ಳಿಗಳತ್ತ ಒಂದು ಜಾಲಿ ರೈಡ್ ಹೊರಡೋಕೆ ತಯಾರಿ ನಡೆಸ್ತಾರೆ. ಸಣ್ಣಪುಟ್ಟ ನದಿ-ತೊರೆಗಳಲ್ಲಿ ಮೀನು, ಏಡಿ ಹಿಡಿದು ತಾವೇ ಅಡುಗೆ ಮಾಡಿ ಊಟ ಮಾಡ್ತಿದ್ದ ಬಾಲ್ಯದ ಖುಷಿಯನ್ನ ಮರಳಿ ತರೋದು ಅವ್ರ ಈ ಜಾಲಿ ರೈಡಿನ ಉದ್ದೇಶ. ಹೀಗಾಗಿ ಸದ್ಯ ಮಂಗಳೂರಿನ ಗ್ರಾಮೀಣ ಭಾಗಗಳಲ್ಲಿ ಸಿಟಿ ಹುಡುಗರ ರಾತ್ರಿ ಬೇಟೆ ಜೋರಾಗಿದೆ. ಹಾಗಿದ್ರೆ ಬನ್ನಿ ಕತ್ತಲ ರಾತ್ರಿಯಲ್ಲಿ ನಡೆಯೋ ಈ ಬೇಟೆ ಹೇಗಿರುತ್ತೆ ಅನ್ನೋದನ್ನ ನೋಡಿ. ಟಾರ್ಚ್ ಲೈಟ್ ಹಿಡಿದು ನೀರಲ್ಲಿ ಏನನ್ನೋ ಹುಡುಕುವ ಯುವಕರು ಹಳ್ಳಿ ಹೈದರಾಗಿದ್ರೂ ಸದ್ಯ ನಗರದಲ್ಲಿ ನೆಲೆಸಿರೋರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿಯ ಕಾಡಂಚಿನ ಭಾಗದಿಂದ ಹೋಗಿ ನಗರದಲ್ಲಿ ಸೆಟಲ್ ಆಗಿರೋ ಯುವಕರು. ನಗರದಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ಇರೋ ಈ ಯುವಕರು ತಮ್ಮ ಸ್ನೇಹಿತರ ಜೊತೆ ಸೇರಿ ಹಳ್ಳಿಗಳಿಗೆ ಹೋಗ್ತಿದ್ದಾರೆ. ಚಿಕ್ಕ ಪುಟ್ಟ ಹಳ್ಳ ತೊರೆಗಳಲ್ಲಿ ಸಿಗೋ ಸೀಗಡಿ, ಮೀನು, ಏಡಿ ಹಿಡಿದು ಎಂಜಾಯ್ ಮಾಡ್ತಿದ್ದಾರೆ.
ಕತ್ತಲೆಯಲ್ಲಿ ಚುಮು ಚುಮು ಚಳಿಯ ನಡುವೆ ಟಾರ್ಚ್ ಲೈಟ್‌ಗಳನ್ನ ಬಳಸಿ ಏಡಿಗಳನ್ನ ಕೈಯಿಂದ ಹಾಗೂ ಕತ್ತಿಯಿಂದ ಹಿಡಿಯುವುದು ನಿಜಕ್ಕೂ ಕಷ್ಟದ ಕೆಲಸ. ಆದ್ರೆ ಈ ಯುವಕರು ಚಿಕ್ಕಂದಿನಲ್ಲೇ ಇದನ್ನ ಕರಗತ ಮಾಡಿಕೊಂಡಿದ್ದಾರೆ. ಇಂದು ಇವರು ಸಿಟಿಗಳಿಗೆ ಬಂದ ನೆಲೆಸಿದ ಬಳಿಕವೂ ಏಡಿಗಳನ್ನ ಈ ರೀತಿ ಹಿಡಿಯೋದನ್ನ ಮರೆತಿಲ್ಲ. ಸಿಟಿಗಳಲ್ಲಿ ಇಂತಹ ಮೋಜು ಸಿಗಲ್ಲ. ಆದ್ರಿಂದ ರಾತ್ರಿ ಇಲ್ಲಿ ಮೀನನ್ನು ಹಿಡಿದು ತಾವೇ ಒಟ್ಟು ಸೇರಿ ಪದಾರ್ಥ ಮಾಡಿ ತಿಂದು ಇಡೀ ರಾತ್ರಿ ಕಳೆಯುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನು, ಏಡಿಗಳಿಗೆ ಏನೂ ಕಡಿಮೆ ಇಲ್ಲ. ಆದ್ರೆ ಹರಿಯುವ ಹಳ್ಳ ಕೊಳ್ಳಗಳಲ್ಲಿ ಸಿಗುವ ಮೀನುಗಳು ಸಮುದ್ರದಲ್ಲಿ ಸಿಗುವ ಮೀನುಗಳಿಗಿಂತ ರುಚಿಕರ. ಇದರ ಜೊತೆ ಸದ್ಯ ಆಳ ಸಮುದ್ರ ಮೀನುಗಾರಿಕೆ ನೀಷೇಧದ ಸಮಯವಾದರಿಂದ ಫ್ರೆಶ್ ಮೀನು ಸಿಗೋದಿಲ್ಲ. ಹೀಗಾಗಿ ಕಾಡಂಚಿನ ಗ್ರಾಮಗಳ ಹಳ್ಳಕೊಳ್ಳದಲ್ಲಿ ಯಥೇಚ್ಚವಾಗಿ ಸಿಗುವ ಮೀನುಗಳು ಮತ್ತು ಏಡಿಗಳು ಹಿಡಿಯಲಾಗುತ್ತೆ.
ಹಾಗಂತ ಇವುಗಳಿಗೆ ಬಲೆಹಾಕಿ ಹಿಡಿಯುವುದು ಅಸಾಧ್ಯ. ಇವುಗಳನ್ನ ಹಿಡಿಯಬೇಕು ಅಂದ್ರೆ ವಿವಿಧ ರೀತಿಯ ಕತ್ತಿಗಳೇ ಬೇಕು. ಇವುಗಳನ್ನ ಸಿದ್ದವಾಗಿಟ್ಟುಕೊಳ್ಳುವ ಹಳ್ಳಿಯ ಜನ, ರಾತ್ರಿಯ ವೇಳೆಯಲ್ಲಿ ಬೇಟೆಯಾಡ್ತಾರೆ. ಏಡಿಗಳನ್ನು ಕೈಯಲ್ಲೇ ಹಿಡಿಯಬಹುದಾದ್ರೂ ಅವುಗಳ ಮೊನಚಾದ ಹಲ್ಲುಗಳ ಬಗ್ಗೆ ಬಹಳ ಎಚ್ಚರವಾಗಿರಬೇಕು. ಕಡಿಮೆ ನೀರು ಇರುವ ಕಡೇ ಇವುಗಳನ್ನ ಈ ರೀತಿ ಹಿಡಿಯ ಬೇಕಾಗುತ್ತದೆ. ಹೀಗಾಗಿ ಸಿಟಿ ಹುಡುಗರಿಗೆ ಬೇಟೆಯಾಡೋದು ಅಂದ್ರೆ ಎಲ್ಲಿಲ್ಲದ ಸಂತಸ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಮೀನು ಪ್ರಿಯರಾಗಿರೋ ಕಾರಣ ಮೀನು ಇಲ್ಲದೆ ಊಟ ಸೇರೋದೇ ಇಲ್ಲ. ಹೀಗಾಗಿ ಇಂತಹ ಬೇಟೆಯಾಡಿ ಮೀನು ಹಿಡಿದಾದ್ರೂ ತಿಂತಾರೆ. ಇನ್ನು ಹಳ್ಳಿ ಬಿಟ್ಟು ನಗರದಲ್ಲಿ ನೆಲೆಸಿರೋ ಯುವಕರಿಗೆ ಇದೊಂದು ಸಖತ್ ಮಜಾ ನೀಡೋ ವಿಚಾರ. ಹೀಗಾಗಿ ಏಡಿ ಹಿಡಿದು ಅನುಭವ ಇಲ್ಲದ ನಗರದ ಗೆಳೆಯರನ್ನ ಕೂಡಾ ಕರೆದುಕೊಂಡು ಹಳ್ಳಿಗೆ ಬರೋ ಈ ಯುವಕರು ಏಡಿ ಬೇಟೆಯ ಮಜಾ ಹೇಗಿರುತ್ತೆ ಅಂತ ತಿಳಿಸಿಕೊಡ್ತಾರೆ. ಒಟ್ಟಾರೆ ರಾತ್ರಿಯಿಡಿ ಮೀನು, ಏಡಿ ಹಿಡಿಯೋ ಮಜಾ ಅದನ್ನ ಅನುಭವಿಸಿದವರಿಗೆ ಗೊತ್ತು.
ದಕ್ಷಿಣ ಕನ್ನಡ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ