ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯೊಬ್ಬರ ಮಗಳನ್ನು ಕಮಿಷನರ್ (Commissioner) ಸೀಟ್ನಲ್ಲಿ ಕೂರಿಸಿ ಗೌರವಿಸುವ ಮೂಲಕ ಮಂಗಳೂರಿನ ಕಮಿಷನರ್ ಎನ್.ಶಶಿಕುಮಾರ್ ವಿಶಾಲ ಹೃದಯ ಮೆರೆದಿದ್ದಾರೆ. ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ 2013 -15ರಲ್ಲಿ ಎಸಿಪಿ ಆಗಿದ್ದ ರವಿ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು. ಹೀಗಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಸಾಗುವ ವೇಳೆ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. 2017ರ ಫೆಬ್ರವರಿ 22 ರಂದು ಬೆಂಗಳೂರು ಗ್ರಾಮಾಂತರದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಡ್ರೈವರ್ ಹಾಗೂ ಎಸ್ಪಿ ರವಿ ಕುಮಾರ್ ಮೃತಪಟ್ಟಿದ್ದರು.
2008ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದ ರವಿ ಕುಮಾರ್ ಅವರಿಗೆ ಒಂದು ಹೆಣ್ಣು ಮಗುವಿತ್ತು. ಅಪಘಾತ ಸಂಭವಿಸುವ ಕೆಲವೇ ದಿನಗಳ ಮೊದಲು ಮಗುವಿನ ನಾಮಕರಣ ಮಾಡಿದ್ದು, ಪ್ರಣೀತಾ ಎಂದು ಹೆಸರಿಟ್ಟಿದ್ದರು. ಶನಿವಾರ ರವಿ ಕುಮಾರ್ ಅವರ ಪತ್ನಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದರು.
ಈ ವೇಳೆ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ತಮ್ಮ ಸೀಟ್ ಮೇಲೆ ಕೂರಿಸಿ ಅಗಲಿದ ರವಿ ಕುಮಾರ್ ಅವರಿಗೆ ಗೌರವಿಸಲಾಯಿತು. ಮುಂದೆ ಚೆನ್ನಾಗಿ ಕಲಿತು ತಂದೆಯಂತೆ ಉನ್ನತ ಪೊಲೀಸ್ ಹುದ್ದೆ ಅಲಂಕರಿಸಬೇಕು ಎಂದು ಕಮಿಷನರ್ ಶಶಿಕುಮಾರ್ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಹಾರೈಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Sun, 23 October 22