ಮಂಗಳೂರು: ಎಫ್ಐಆರ್ ಖಂಡಿಸಿ ಪೊಲೀಸ್ ಠಾಣೆ ಮುಂದೆ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ VHP ಕರೆ
ಶ್ರೀರಾಮನಿಗೆ ಅವಹೇಳನ ಮಾಡಿದ ಮಂಗಳೂರಿನ ಜೆರೋಸಾ ಶಾಲೆಯ ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ, ವಿಹೆಚ್ಪಿ ನಾಯಕ ಶರಣ್ ಪಂಪ್ವೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಮಾತನಾಡಿದ ವಿಹೆಚ್ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಫೆ.19ರ ಸೋಮವಾರ ಪೊಲೀಸ್ ಠಾಣೆಗಳ ಎದುರು ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ ಕರೆ ನೀಡಿದ್ದಾರೆ.
ಮಂಗಳೂರು, ಫೆ.15: ಸಂತ ಜೆರೋಸಾ ಶಾಲೆಯ (St Gerosa School) ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ (BJP) ನಾಯಕರ ವಿರುದ್ಧ ಎಫ್ಐಅರ್ ಖಂಡಿಸಿ ಫೆಬ್ರವರಿ 19 ರಂದು ಮಂಗಳೂರು ನಗರದ ಎಲ್ಲಾ ಠಾಣೆಗಳ ಮುಂದೆ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ ವಿಹೆಚ್ಪಿ ಕರೆ ನೀಡಿದೆ. ಈ ಬಗ್ಗೆ ಮಾತನಾಡಿದ ವಿಹೆಚ್ಪಿ (VHP) ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಘಟನೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಆಗಿದೆ ಎಂದರು.
ಎಫ್ಐಆರ್ ದಾಖಲಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಜೈ ಶ್ರೀರಾಮ್ ಹೇಳಿದಕ್ಕೆ ಹಿಂದೂ ವಿರೋಧಿ ಸರ್ಕಾರ ಕೇಸ್ ಹಾಕಿದೆ. ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ಮಾಡುತ್ತೇವೆ. ಹಿಂದೂ ಸಮಾಜದ ಬಂಧುಗಳು ಪೊಲೀಸ್ ಠಾಣೆಗಳ ಮುಂದೆ ಜೈ ಶ್ರೀರಾಮ್ ಘೋಷಣೆಯ ಜೊತೆ ಧರಣಿ ಮಾಡುತ್ತೇವೆ. ವಿಶೇಷವಾಗಿ ಪಾಂಡೇಶ್ವರ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತೇವೆ ಎಂದರು.
ಇದನ್ನೂ ಓದಿ: ಜೆರೋಸಾ ಶಾಲೆ ಪ್ರಕರಣ; ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ಹೀನ ರಾಜಕಾರಣಕ್ಕಿಳಿದಿದೆ ಎಂದ ನಳಿನ್ ಕುಮಾರ್ ಕಟೀಲು
ಶಿಕ್ಷಕಿ ಪ್ರಭಾ ಅವರು ರಾಮ ದೇವರು, ನಾಗದೇವರು, ಕೊರಗಜ್ಜನ ಬಗ್ಗೆ ಅವಹೇಳನ ಮಾಡಿದ್ದಾರೆ. ಇದರ ವಿರುದ್ಧ ಪೋಷಕರು ಪೊಲೀಸ್ ದೂರು ನೀಡಿದರೂ ಇನ್ನು ಪ್ರಕರಣ ದಾಖಲಿಸಿಲ್ಲ. ಶರಣ್ ಪಂಪುವೆಲ್ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಬಗ್ಗೆ ಪ್ರಶ್ನಿಸಿದರೆ ಮೇಲಿನಿಂದ ಒತ್ತಡ ಇದೆ ಎಂದು ಪೊಲೀಸರು ಹೇಳುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ನಮ್ಮ ನಾಯಕರ ಮೇಲೆ ಹಾಕಿರುವ ಕೇಸು ವಾಪಾಸು ಪಡೆಯಬೇಕು. ಶಿಕ್ಷಕಿ ಪ್ರಭಾ ಮೇಲೆ ಕೇಸು ದಾಖಲಿಸಿ ಬಂಧಿಸಬೇಕು ಎಂದು ಶಿವಾನಂದ ಮೆಂಡನ್ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಅಯೋಧ್ಯೆ ಹಾಗೂ ಶ್ರೀರಾಮನಿಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಪೋಷಕರೊಬ್ಬರು ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಸಂದೇಶ ಆ ಆಡಿಯೋದಲ್ಲಿತ್ತು. ಅದರಂತೆ ಶಾಲೆ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದರು.
ಬಳಿಕ ಬಿಜೆಪಿ ನಾಯಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ಹೊರಹಾಕಿದ್ದಲ್ಲದೆ, ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿಸಿದರು. ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಅಮಾತು ಮಾಡಿ ಆದೇಶಿಸಿತ್ತು. ಘಟನೆ ಕುರಿತು ಕ್ಷಮೆ ಕೇಳದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಶಿಕ್ಷಕಿ ಅಮಾನತುಗೊಂಡ ಹಿನ್ನೆಲೆ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಗಳನ್ನು ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ: ಜೆರೋಸಾ ಶಿಕ್ಷಣ ಸಂಸ್ಥೆ ವಿವಾದ ಬೆನ್ನಲ್ಲೇ ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವರ್ಗಾವಣೆ
ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತ್ತಿಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ಸಂಬಂಧ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ, ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್, ಪಾಲಿಕೆ ಸದಸ್ಯ ಸಂದೀಪ್ ಗರೋಡಿ ಹಾಗೂ ಭರತ್ ಕುಮಾರ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 153A, 295A, 505(2), 506, 149 ಅಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ A1 ಬಿಜೆಪಿ ಶಾಸಕ ವೇದವ್ಯಾಸ ಕಾಮತ್, A2 ಬಿಜೆಪಿ ಶಾಸಕ ಭರತ್ ಶೆಟ್ಟಿ, A3 ಶರಣ್ ಪಂಪ್ವೆಲ್, A4 ಸಂದೀಪ್ ಗರೋಡಿ, A5 ಭರತ್ ಕುಮಾರ್ ಎಂದು ಹೆಸರು ಉಲ್ಲೇಖಿಸಲಾಗಿದೆ. ಆರೋಪಿಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದರೆಂದು FIRನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಶಾಲೆ ಮುಂದೆ ಅಕ್ರಮವಾಗಿ ಗುಂಪುಗೂಡಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಶಾಲೆ ಆಡಳಿತ ಮಂಡಳಿ ನಿಯಮ ಉಲ್ಲಂಘಿಸುವಂತೆ ವಿದ್ಯಾರ್ಥಿಗಳನ್ನು ಪ್ರಚೋದನೆ ಮಾಡಿದ್ದಾರೆ. ಕ್ರೈಸ್ತ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಹಿಂದೂ, ಕ್ರೈಸ್ತರ ನಡುವೆ ಗಲಭೆ ಸೃಷ್ಟಿಸಲು ಪ್ರಚೋದಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಶಾಂತಿ, ನೆಮ್ಮದಿಗೆ ಭಂಗ ತರಲು ಪ್ರಯತ್ನಿಸಿದ್ದರು ಎಂದು ಪಾಂಡೇಶ್ವರ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಎಫ್ಐಅರ್ ಕುರಿತು ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ದ್ವಿಮುಖ ನೀತಿ, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಶಾಲೆಯಲ್ಲಿ ಕೋಮು ಭಾವನೆ ಕೆರಳಿಸಿದ ಶಿಕ್ಷಕಿಯನ್ನ ಅಮಾನತುಗೊಳಿಸುವುದು ಬಿಟ್ಟು, ಸಾರ್ವಜನಿಕರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಶಾಸಕರ ಮೇಲೆ ಕೇಸು ದಾಖಲಿಸಿಲಾಗಿದೆ. ಕಾನೂನು ಕ್ರಮ ಕೈಗೊಂಡ ಶಿಕ್ಷಣಾಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ಹೀನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Thu, 15 February 24