ಮಂಗಳೂರು: ಕನ್ನಡ, ತುಳು ಸಾಹಿತ್ಯದ ಮೇರು ವ್ಯಕ್ತಿತ್ವ ಪ್ರೊ. ಅಮೃತ ಸೋಮೇಶ್ವರ ನಿಧನ
ಯಕ್ಷಗಾನ, ಜನಪದ, ತುಳು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನೂರಾರು ಕೃತಿಗಳನ್ನು ರಚಿಸಿರುವ, ಕನ್ನಡ, ತುಳು ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ಪ್ರೊ. ಅಮೃತ ಸೋಮೇಶ್ವರ ಶನಿವಾರ ಬೆಳಗ್ಗೆ ನಿಧನರಾದರು.
ಮಂಗಳೂರು, ಜನವರಿ 6: ಕನ್ನಡ, ತುಳು ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ಪ್ರೊ. ಅಮೃತ ಸೋಮೇಶ್ವರ (89) (Pro. Amrita Someshwara) ಶನಿವಾರ ಬೆಳಗ್ಗೆ ನಿಧನರಾದರು. ಎರಡು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಸೋಮೇಶ್ವರದಲ್ಲಿರುವ ಸ್ವಗೃಹದಲ್ಲಿ ಅವರು ಅಸುನೀಗಿದರು. ಯಕ್ಷಗಾನ, ಜನಪದ, ತುಳು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಕಥೆ, ಕಾದಂಬರಿ, ನಾಟಕ, ಸಂಶೋಧನೆ, ಕವನ ಹೀಗೆ ನಾನಾ ಪ್ರಕಾರದಲ್ಲಿ ನೂರಾರು ಕೃತಿಗಳ ಕರ್ತೃವಾಗಿದ್ದ ಅಮೃತ ಸೋಮೇಶ್ವರ ಅವರು ತುಳು ಭಾಷೆ, ಜನಪದ, ಸಂಸ್ಕೃತಿ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು.
ಸೋಮೇಶ್ವರ ಪುರಸಭೆ ಕಚೇರಿ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಪ್ರೊ. ಅಮೃತ ಸೋಮೇಶ್ವರ ಕುಟುಂಬದ ಮೂಲಗಳು ತಿಳಿಸಿವೆ.
ಮಂಗಳೂರಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ 1935ರ ಸೆಪ್ಟೆಂಬರ್ 27ರಂದು ಜನಿಸಿದ ಅಮೃತ ಸೋಮೇಶ್ವರ ಅವರು, ಕೋಟೆಕಾರಿನ ಸ್ಟೆಲ್ಲ ಮೇರಿಸ್ ಕಾನ್ವೆಂಟ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಅನಂತರ ಆನಂದಾಶ್ರಮದಲ್ಲಿ ಪ್ರೌಢಶಾಲೆ ವಿಧ್ಯಾಭ್ಯಾಸ ಮಾಡಿದರು. ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದರು. ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ. ಪದವಿ ಪಡೆದರು. ಆರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಕೆಲಸ ಮಾಡಿದರು. 1967ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿ 1993ರಲ್ಲಿ ನಿವೃತ್ತರಾಗಿದ್ದರು.
ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಹಾಗೂ ಯಕ್ಷಗಾನದ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ.
ಸಹಸ್ರ ಕವಚ ಮೋಕ್ಷ, ಮಹಾಕಲಿ ಮಗದೇಂದ್ರ, ವಂಶವಾಹಿನಿ, ಆದಿಕವಿ ವಾಲ್ಮೀಕಿ ಸೇರಿದಂತೆ ಹತ್ತಾರು ಯಕ್ಷಗಾನ ಪ್ರಸಂಗಗಳನ್ನೂ ಅಮೃತ ಸೋಮೇಶ್ವರ ಅವರು ರಚಿಸಿದ್ದಾರೆ. ಈ ಪೈಕಿ ಅನೇಕ ಯಕ್ಷಗಾನ ಪ್ರಸಂಗಗಳು ಯಶಸ್ವಿಯಾಗಿ ದಾಖಲೆಯ ಸಂಖ್ಯೆಯ ಪ್ರದರ್ಶನಗಳನ್ನು ಕಂಡಿವೆ.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಬ್ರ್ಯಾಂಡ್ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆ, ಪರೇಡ್ನಲ್ಲಿ ಸಾಗುವುದು ಅನುಮಾನ
ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಹಾಗೂ ಯಕ್ಷಾನ ಅಕಾಡೆಮಿ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅಮೃತ ಸೋಮೇಶ್ವರ ಅವರಿಗೆ ಸಂದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ