AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಶಿಕ್ಷಕಿಯಿಂದ ಧರ್ಮದ ಅವಹೇಳನ ಆರೋಪ, ಪೊಲೀಸ್ ಠಾಣೆಗಳ ಮುಂದೆ ಧರಣಿ ನಿರ್ಧಾರ ಹಿಂಪಡೆದ ವಿಎಚ್​​ಪಿ

ಮಂಗಳೂರಿನ ಪೊಲೀಸ್ ಠಾಣೆಗಳ ಎದುರು ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ವಿಶ್ವ ಹಿಂದೂ ಪರಿಷತ್ ಹಿಂಪಡೆದಿದೆ. ಅದರ ಬದಲಿಗೆ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ಮಾಡಿ, ನಂತರ ಪೊಲೀಸ್ ಆಯುಕ್ತರಿಗೆ ಪ್ರಕರಣ ಹಿಂಪಡೆಯುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿಎಚ್​​ಪಿ ಮುಖಂಡರು ತಿಳಿಸಿದ್ದಾರೆ.

ಮಂಗಳೂರು: ಶಿಕ್ಷಕಿಯಿಂದ ಧರ್ಮದ ಅವಹೇಳನ ಆರೋಪ, ಪೊಲೀಸ್ ಠಾಣೆಗಳ ಮುಂದೆ ಧರಣಿ ನಿರ್ಧಾರ ಹಿಂಪಡೆದ ವಿಎಚ್​​ಪಿ
ಜೆರೋಸಾ ಶಿಕ್ಷಣ ಸಂಸ್ಥೆಗೆ ಮುತ್ತಿಗೆ ಹಾಕಿದ್ದ ಸಂದರ್ಭದ ಚಿತ್ರ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Feb 19, 2024 | 9:58 AM

Share

ಮಂಗಳೂರು, ಫೆಬ್ರವರಿ 19: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ (St Gerosa School) ಶಿಕ್ಷಕಿಯಿಂದ ಧರ್ಮದ ಅವಹೇಳನ ಆರೋಪ ವಿಚಾರವಾಗಿ ಪೊಲೀಸ್ ಠಾಣೆಗಳ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದ ವಿಶ್ವ ಹಿಂದೂ ಪರಿಷತ್ (VHP) ಇದೀಗ ಆ ನಿರ್ಧಾರವನ್ನು ಹಿಂಪಡೆದಿದೆ. ಶಿಕ್ಷಕಿಯ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರ ಮೇಲೆ ಎಫ್​ಐಆರ್ ದಾಖಲಿಸಿದ್ದರ ವಿರುದ್ಧ ಪೊಲೀಸ್ ಠಾಣೆಗಳ ಮುಂದೆ ಧರಣಿ ನಡೆಸುವುದಾಗಿ ವಿಎಚ್​ಪಿ ಹೇಳಿತ್ತು. ಇದರಂತೆ ಐದು ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಯಬೇಕಿತ್ತು. ಆದರೆ, ಪೊಲೀಸ್ ಠಾಣೆಯ ಬದಲು ಇಂದು (ಸೋಮವಾರ) ಬೆ.10:30 ಕ್ಕೆ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆಗೆ ವಿಎಚ್​ಪಿ ನಿರ್ಧರಿಸಿದೆ.

ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ, ಬಳಿಕ ಮಂಗಳೂರು ನಗರ ಪೊಲೀಸ್ ಕಮೀಷನರ್​​ಗೆ ಮನವಿ ಸಲ್ಲಿಸುವುದಾಗಿ ವಿಎಚ್​ಪಿ ಹೇಳಿದೆ. ವಿಎಚ್​ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಲಾಗಿದೆ.

ವಿಎಚ್​ಪಿ ಮುಖಂಡ ಮಾತ್ರವಲ್ಲದೆ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ ಮೇಲೆ ಕೂಡ ಕೇಸು ದಾಖಲಿಸಲಾಗಿತ್ತು. ಇದನ್ನೂ ಹಿಂಪಡೆಯಬೇಕು ಎಂಬ ಆಗ್ರಹ ವಿಎಚ್​ಪಿ ಹಾಗೂ ಬಿಜೆಪಿ ನಾಯಕರಿಂದ ವ್ಯಕ್ತವಾಗಿದೆ.

ಎಫ್​ಐಆರ್ ದಾಖಲಿಸಿರುವುದನ್ನು ಖಂಡಿಸಿ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಧರಣಿ ನಡೆಸಲು ವಿಎಚ್​ಪಿ ಕರೆ ನೀಡಿತ್ತು. ಆದರೆ, ಇದಕ್ಕೆ ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಬದಲಾವಣೆ ಮಾಡಲಾಗಿದೆ.

ಈ ಮಧ್ಯೆ, ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಐಎಎಸ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಹೇಳಿದ್ದರು. ಐಎಎಸ್ ಅಧಿಕಾರಿ ಡಾ. ಎಸ್ ಆಕಾಶ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದ್ದರು.

ಜೆರೋಸಾ ಶಿಕ್ಷಣ ಸಂಸ್ಥೆ ವಿವಾದದ ಹಿನ್ನೆಲೆ

ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಅಯೋಧ್ಯೆ ಹಾಗೂ ಶ್ರೀರಾಮನಿಗೆ ಶಿಕ್ಷಕಿ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಪೋಷಕರ ಬಳಿ ಹೇಳಿಕೊಂಡಿದ್ದರು. ಈ ಸಂಬಂಧ ಪೋಷಕರೊಬ್ಬರು ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಸಂದೇಶ ಆ ಆಡಿಯೋದಲ್ಲಿತ್ತು. ಅದರಂತೆ ಶಾಲೆ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: ಎಫ್​ಐಆರ್ ಖಂಡಿಸಿ ಪೊಲೀಸ್ ಠಾಣೆ ಮುಂದೆ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ VHP ಕರೆ

ಬಿಜೆಪಿ ನಾಯಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಇವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ