AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಮಂಗಳೂರಿಗ: ಥೈಲ್ಯಾಂಡ್‌‌ನಲ್ಲಿ ಅರಳಿದ ಪ್ರೇಮಕಥೆ

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ, ಭೂಮಿಯಲ್ಲಿ ಪೂರ್ಣಗೊಳ್ಳುತ್ತದೆ ಎಂಬ ಮಾತಿದೆ. ಕಡಲನಗರಿ ಮಂಗಳೂರಿನ ಯುವಕನ ಬಾಳಿನಲ್ಲಿ ಈ ಮಾತು ಅಕ್ಷರಶ ನಿಜವಾಗಿದೆ. ಥೈಲ್ಯಾಂಡ್‌‌ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ. ಮಂಗಳೂರಿನ ಯುವಕ ಥೈಲ್ಯಾಂಡ್ ಯುವತಿಯ ಸಿಂಪಲ್ ಲವ್ ಕಮ್ ಆ್ಯರೇಂಜ್ ಮ್ಯಾರೇಜ್ ಸ್ಟೋರಿ ಇಲ್ಲಿದೆ ನೋಡಿ..

ವಿದೇಶಿ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಮಂಗಳೂರಿಗ: ಥೈಲ್ಯಾಂಡ್‌‌ನಲ್ಲಿ ಅರಳಿದ ಪ್ರೇಮಕಥೆ
ಥೈಲ್ಯಾಂಡ್ ಯುವತಿಯ ಕೈ ಹಿಡಿದ ಮಂಗಳೂರಿಗ
ಅಶೋಕ್​ ಪೂಜಾರಿ, ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ|

Updated on:Dec 05, 2024 | 7:29 PM

Share

ಮಂಗಳೂರು, (ಡಿಸೆಂಬರ್ 05): ಸಪ್ತಪದಿ ಇದು ಸಪ್ತಪದಿ. ಇದು ಏಳು ಜನುಮಗಳ ಅನುಬಂಧ ಎಂಬಂತೆ ಮಂಗಳೂರಿನಲ್ಲೊಂದು ವಿಶೇಷ ವಿವಾಹ ನಡೆದಿದೆ. ದೂರದ ಥೈಲ್ಯಾಂಡ್ ದೇಶಕ್ಕೂ ಭಾರತಕ್ಕೂ ಸಂಬಂಧ ಕೂಡಿ ಬಂದಿದೆ. ಇಲ್ಲಿ ಥೈಲ್ಯಾಂಡ್ ಸುಂದರಿ ಅಪ್ಪಟ ಕನ್ನಡಿಗನಿಗೆ ಜೋಡಿಯಾಗಿದ್ದಾಳೆ. ಕಡಲ ನಗರಿ ಮಂಗಳೂರು ಈ ವಿಶೇಷ ಜೋಡಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಕಾಲಲ್ಲಿ ಕಾಲುಂಗುರ, ಮೈ ಮೇಲೆ ಧಾರೆ ಸೀರೆ, ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ. ನೋಡುವುದಕ್ಕೆ ಥೇಟ್ ಭಾರತೀಯ ನಾರಿಯಂತೆ ಕಾಣಿಸಿದ ಥೈಲ್ಯಾಂಡ್ ದೇಶದ ಯುವತಿ ಮೊಂತಕಾನ್ ಸಸೂಕ್. ಆದರೆ ಈಗ ಈಕೆ ಮಂಗಳೂರಿನ ಸೊಸೆ.

ಮಂಗಳೂರಿನ ಗೋರಿಗುಡ್ಡೆ ನಿವಾಸಿ ಪೃಥ್ವಿರಾಜ್ ಜೊತೆ ಈಕೆಯ ವಿವಾಹವಾಗಿದೆ. ಅದೂ ಅಪ್ಪಟ ಭಾರತೀಯ ಹಿಂದೂ ಸಂಪ್ರದಾಯದಂತೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಈ ವಿವಾಹ ಕಾರ್ಯಕ್ರಮ ಜರುಗಿದ್ದು, ಮಂಗಳಾದೇವಿಯ ಆಶೀರ್ವಾದ ಪಡೆದು ನವ ವಧು ವರರು ಹೊಸ ಬಾಳ ಪಯಣವನ್ನ ಆರಂಭಿಸಿದ್ದಾರೆ.

ಈ ಜೋಡಿಯ ಲವ್ ಸ್ಟೋರಿಯೇ ರೋಚಕ

ಇನ್ನು ಈ ಜೋಡಿಯ ನಡುವೆ ಪ್ರೇಮಾಕುಂರವಾಗಿರುವ ಕಥೆಯೇ ನಿಜಕ್ಕೂ ರೋಚಕವಾಗಿದೆ. ಮಂಗಳೂರಿನ ಪೃಥ್ವಿರಾಜ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ಕಳೆದ ಫೆಬ್ರವರಿ ತಿಂಗಳಲ್ಲಿ ಫೃಥ್ವಿರಾಜ್ ಥೈಲ್ಯಾಂಡ್‌ಗೆ ಪ್ರಾಜೆಕ್ಟ್ ವರ್ಕ್ ಹಾಗೂ ಪ್ರವಾಸಕ್ಕೆಂದು ತೆರಳಿದಾಗ ಐಟಿ ಉದ್ಯೋಗಿಯೇ ಆಗಿರುವ ಮೊಂತಕಾನ್ ಸಸೂಕ್ ಪರಿಚಯವಾಗಿದೆ. ವ್ಯಾಲೆಂಟೈನ್ಸ್ ಡೇಯ ಪಾರ್ಟಿಯಲ್ಲಿ ಇವರಿಬ್ಬರು ಪರಿಚಿತರಾಗಿದ್ದಾರೆ. ಪ್ರೇಮಿಗಳ ದಿನದಂದು ಶುರುವಾದ ಈ ಪರಿಚಯ ಬಳಿಕ ಪ್ರೀತಿಗೆ ತಿರುಗಿದೆ. ಎರಡು ಮನಸ್ಸುಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ. ಮೊದಲಿಗೆ ಒಲ್ಲೆ ಎಂದ ಪೃಥ್ವಿರಾಜ್ ಕುಟುಂಬಸ್ಥರು ಬಳಿಕ ಥೈಲ್ಯಾಂಡ್ ಸುಂದರಿಯ ಗುಣ ನಡೆತೆಗೆ ಫಿದಾ ಆಗಿದ್ದಾರೆ. ಮಂಗಳೂರಿನಲ್ಲಿ ಹುಡುಕಿದರೂ ಇಂತಹ ಹುಡುಗಿ ಸಿಗೋದಿಲ್ಲ ಎಂದು ಇವರಿಬ್ಬರ ಮದುವೆಗೆ ಜೈ ಎಂದಿದ್ದಾರೆ.

ಹಿಂದೂ ಸಂಪ್ರದಾಯದಂತೆ ಮದ್ವೆ

ಅಪ್ಪಟ ಹಿಂದೂ ಸಂಪ್ರದಾಯದಂತೆ ಇಂದು ಮಂಗಳಾದೇವಿಯ ಸಮ್ಮುಖದಲ್ಲಿ ವಿವಾಹ ಮಹೋತ್ಸವ ಸಂಪನ್ನವಾಗಿದೆ. ವಧು ಮೊಂತಕಾನ್ ಸಸೂಕ್ ಬೌದ್ಧ ಧರ್ಮಕ್ಕೆ ಸೇರಿದ್ದು ಕಳೆದ ಜುಲೈ ತಿಂಗಳಲ್ಲೇ ಬೌದ್ಧ ಸಂಪ್ರದಾಯದಂತೆ ಥೈಲ್ಯಾಂಡ್‌ನಲ್ಲಿ ವಿವಾಹ ನಡೆದಿದೆ. ಇನ್ನು ಮುಂದೆ ಥೈಲ್ಯಾಂಡ್ ತ್ಯಜಿಸಿ ತನ್ನ ಪತಿಯೊಂದಿಗೆ ಭಾರತದಲ್ಲೇ ಮೊಂತಕಾನ್ ಸಸೂಕ್ ಸಂಸಾರ ನಡೆಸಲಿದ್ದಾರೆ. ಅರ್ಥಾತ್ ಭಾರತದ ಸೊಸೆಯಾಗಿದ್ದಾಳೆ .

ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮ ಕಥೆ ಭಾರತದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡುವ ಮೂಲಕ ಸುಂದರ ತಿರುವು ಪಡೆದಿದೆ. ಈ ಮುದ್ದಾದ ಜೋಡಿಗೆ ಯಾರ ದೃಷ್ಟಿಯೂ ಬೀಳದೆ ನೂರು ಕಾಲ ಇವರು ಚೆನ್ನಾಗಿ ಬಾಳಲಿ ಎನ್ನುವುದೇ ನಮ್ಮ ಆಶಯ. ಹಾಗೇ ನಿಮ್ಮ ಆಶೀರ್ವಾದ ಈ ನವ ಜೋಡಿಗೆ ಇರಲಿ.

Published On - 5:24 pm, Thu, 5 December 24