ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಹಿಂದೆ ನೋಡದೇ ದಿಢೀರನೆ ಟರ್ನ್ ತೆಗೆದುಕೊಂಡ ಬಸ್ನಿಂದ ತಪ್ಪಿಸಿಕೊಂಡು ಬೈಕ್ ಸವಾರನೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು: ವಾಹನ ಸವಾರರು ತಮ್ಮ ಇಡೀ ಜೀವವನ್ನೇ ಕೈಯಲ್ಲಿ ಹಿಡಿದು ವಾಹನ ಚಲಾಯಿಸುತ್ತಿರುತ್ತಾರೆ. ಯಾವ ಕ್ಷಣದಲ್ಲಿ ಯಾವ ರೀತಿ ಯಮ ಧರ್ಮರಾಯ ಕಣ್ಣು ಮುಂದೆ ಪ್ರತ್ಯಕ್ಷನಾಗುತ್ತಾನೋ ಗೊತ್ತೇ ಆಗಲ್ಲ. ಒಂದು ಚಿಕ್ಕ ತಪ್ಪು, ಒಂದು ಚಿಕ್ಕ ನಿರ್ಲಕ್ಷ್ಯ ಭಾರಿ ದಂಡವನ್ನು ವಿಧಿಸುತ್ತೆ. ಸದ್ಯ ಇಲ್ಲೊನ್ಬ ಯುವಕ ಕ್ಷಣ ಮಾತ್ರದಲ್ಲಿ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಹಿಂದೆ ನೋಡದೇ ದಿಢೀರನೆ ಟರ್ನ್ ತೆಗೆದುಕೊಂಡ ಬಸ್ನಿಂದ ತಪ್ಪಿಸಿಕೊಂಡು ಬೈಕ್ ಸವಾರನೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳೂರಿನ ಎಲಿಯರ್ ಪಡವು ರಸ್ತೆಯಲ್ಲಿ(Eliyar Padavu Road) ನಡೆದಿದೆ. ಮಂಗಳವಾರ ಸಂಜೆ ಮಂಗಳೂರಿನಿಂದ ಎಲಿಯಾರ್ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಪ್ರಯಾಣಿಕರನ್ನ ಇಳಿಸಿ ರಸ್ತೆ ಖಾಲಿ ಇದ್ದ ಕಾರಣ ಹಿಂದೆ ವಾಹನ ಬರುತ್ತಿದೆಯಾ ಎಂದು ಗಮನಿಸದೆ ಚಾಲಕ ದಿಢೀರನೆ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಆದ್ರೆ ಇದೇ ವೇಳೆ ಮತ್ತೊಂದು ತುದಿಯಿಂದ ಅತಿವೇಗದಲ್ಲಿ ಬರುತ್ತಿದ್ದ ಸ್ಕೂಟರ್ ಬಸ್ ತಿರುವು ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿ ಕ್ಷಣ ಮಾತ್ರದಲ್ಲಿ ಅಪಘಾತದಿಂದ ಪಾರಾಗಲು ಎಡಕ್ಕೆ ತಿರುಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಸ್ಕೂಟರ್ ಸವಾರ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ ನಿಯಂತ್ರಣ ಕಳೆದುಕೊಂಡು ಎಡಕ್ಕೆ ತಿರುಗಿ ಬರಾಕಾ ಮೀನು ಸಂಸ್ಕರಣಾ ಘಟಕದ ಗೇಟ್ ಅನ್ನು ಹೊಡೆದು ನಂತರ ಮರ ಮತ್ತು ಅಂಗಡಿಯ ನಡುವಿನ ಸಣ್ಣ ಜಾಗದಿಂದಲೇ ನುಗ್ಗಿ ರಸ್ತೆ ದಾಡಿ ಮುಂದು ಹೋಗಿದ್ದಾನೆ. ಇದೆಲ್ಲವೂ ಕೇವಲ 15 ಸೆಕೆಂಡುಗಳಲ್ಲಿ ಸಂಭವಿಸಿದೆ.