ಮಂಗಳೂರು ಜೈಲಿನಿಂದಾಗಿ 1ಕಿ.ಮೀ ಸುತ್ತಮುತ್ತ ನೆಟ್​ವರ್ಕ್​ ಸಮಸ್ಯೆ! ಫೋನ್ ಕರೆ ಮಾಡಲಾಗದೆ ಜನರ ಸಂಕಷ್ಟ

| Updated By: Ganapathi Sharma

Updated on: Mar 26, 2025 | 7:03 AM

ಮಂಗಳೂರಿನ ಜಿಲ್ಲಾ ಕಾರಾಗೃಹ ಒಂದಲ್ಲಾ ಒಂದು ವಿವಾದದ ಮೂಲಕ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಈ ಜೈಲಿನಲ್ಲಿ ಅಳವಡಿಸಿರುವ ಮೊಬೈಲ್ ಜಾಮರ್ ನಗರ ವಾಸಿಗಳಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ತುರ್ತು ಸಂದರ್ಭಗಳಲ್ಲಿ ಫೋನ್ ಕರೆ ಮಾಡಿ ಮಾತನಾಡುವುದಕ್ಕೂ ಸಮಸ್ಯೆ ತಂದೊಡ್ಡಿದೆ. ಜೈಲಿನ ಸ್ಥಳಾಂತರಕ್ಕೂ ಆಗ್ರಹ ವ್ಯಕ್ತವಾಗಿದೆ.

ಮಂಗಳೂರು ಜೈಲಿನಿಂದಾಗಿ 1ಕಿ.ಮೀ ಸುತ್ತಮುತ್ತ ನೆಟ್​ವರ್ಕ್​ ಸಮಸ್ಯೆ! ಫೋನ್ ಕರೆ ಮಾಡಲಾಗದೆ ಜನರ ಸಂಕಷ್ಟ
ಮಂಗಳೂರು ಜೈಲು
Follow us on

ಬೆಂಗಳೂರು, ಮಾರ್ಚ್ 26: ಮನೆಯಲ್ಲಿರುವ ಕುಟುಂಬದವರ ಜೊತೆ ಮಾತನಾಡಲು ಆಗುತ್ತಿಲ್ಲ. ಫ್ರೆಂಡ್ಸ್​ಗಳ ಸಂಪರ್ಕವೂ ಸಿಗುತ್ತಿಲ್ಲ. ಹೋಗಲಿ, ಆರೋಗ್ಯದಲ್ಲಿ ಏರುಪೇರಾದರೆ ಡಾಕ್ಟರ್​ ಜೊತೆ ಮಾತನಾಡೋಣ ಅಂದರೆ ಅದೂ ಆಗಲ್ಲ. ಡಿಜಿಟಲ್ ಪೇಮೆಂಟ್ (Digital Payment) ಮಾಡಲು ಸಾಧ್ಯವೇ ಇಲ್ಲ. ಇದಕ್ಕೆಲ್ಲಾ ಕಾರಣವೇ ಮೊಬೈಲ್ ಜಾಮರ್ (Mobile Jammer). ಮಂಗಳೂರು ಜೈಲಿಗೆ (Mangalore Jail) ಅಳವಡಿಸಿರುವ ಜಾಮರ್​ ಇದೀಗ ಸುತ್ತಮುತ್ತಲಿನ ನಿವಾಸಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಇದರಿಂದ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮಂಗಳೂರು ಜೈಲು ಕೈದಿಗಳ ಕಳ್ಳಾಟಗಳಿಂದಲೇ ಕುಖ್ಯಾತಿ ಪಡೆದಿದೆ. ಇತ್ತೀಚೆಗಷ್ಟೇ ಜೈಲಿನ ಆವರಣದಲ್ಲಿ ಗಾಂಜಾ ಪೊಟ್ಟಣ ಎಸೆದಿದ್ದರು. ಇದಕ್ಕೂ ಮುನ್ನ ಮೊಬೈಲ್ ಸೇರಿ ಮಾದಕ ವಸ್ತುಗಳೂ ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಜೈಲಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಇದರ ಪರಿಣಾಮ, ಜೈಲಿನ ಸುಮಾರು ಒಂದು ಕಿ.ಮೀ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಜೈಲಿನ ಕೂಗಳತೆ ದೂರದಲ್ಲಿ ನೂರಾರು ಮನೆ, ಫ್ಲ್ಯಾಟ್, ಅಂಗಡಿ, ಹೋಟೆಲ್‌ಗಳಿದ್ದು, ಬಹುತೇಕರಿಗೆ ಮೊಬೈಲ್ ಜಾಮರ್ ಅಳವಡಿಕೆಯಿಂದ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ.

ರೋಗಿಯೊಬ್ಬರು ಹೃದ್ರೋಗ ತಜ್ಞರನ್ನು ಸಂಪರ್ಕಿಸಲು ಸಾಧ್ಯವಾಗದೇ, ಸಾವು ಬದುಕಿನ ನಡುವೆ ಹೋರಾಡಿದ್ದಾರೆ ಎಂಬುದಾಗಿ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ತಿಳಿಸಿದ್ದು, ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಳ; ಹವಾಮಾನ ಇಲಾಖೆ
ಬಿಜೆಪಿಯ ಮೂವರು ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್‌..!
ಚಿಕ್ಕಬಳ್ಳಾಪುರದ 6 ಸದಸ್ಯರು ಅನರ್ಹ: ಸೇಡು ತೀರಿಸಿಕೊಂಡ ಪ್ರದೀಪ್ ಈಶ್ವರ್​!
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್

ನಗರ ಭಾಗದಲ್ಲೇ ಜಿಲ್ಲಾ ಕಾರಾಗೃಹದಿಂದ ಸಮಸ್ಯೆ

ಮಂಗಳೂರು ನಗರ ಭಾಗದಲ್ಲೇ ಜಿಲ್ಲಾ ಕಾರಾಗೃಹ ಇರುವುದರಿಂದಾಗಿ ಸಾವಿರಾರು ಮಂದಿಗೆ ಈ ಸಮಸ್ಯೆಯಾಗುತ್ತಿದೆ. ಅದರಲ್ಲೂ, ಈಗ 5ಜಿ ಜಾಮರ್ ಅಳವಡಿಸಿದ್ದು, ಸಾರ್ವಜನಿಕರಿಗೂ ಕಂಟಕ ತಂದೊಡ್ಡಿದೆ. ಇನ್ನು ಈ ಜೈಲಿನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವುದರಿಂದ, ನಗರದಿಂದ ಗ್ರಾಮಾಂತರ ಭಾಗಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸೈಬರ್ ವಂಚನೆಗಾಗಿ ಬಡ ಜನರ ಬ್ಯಾಂಕ್​ ಖಾತೆ ಬಳಕೆ, ಇಬ್ಬರ ಬಂಧನ

ಒಟ್ಟಿನಲ್ಲಿ ಜೈಲಲ್ಲಿರುವ ಕೈದಿಗಳ ಕಳ್ಳಾಟಗಳಿಗೆ ಬ್ರೇಕ್ ಹಾಕಲು ಅಳವಡಿಸಿದ ಮೊಬೈಲ್ ಜಾಮರ್​, ಸಾರ್ವಜನಿಕರಿಗೂ ಕಂಟಕವಾಗಿದೆ. ಇನ್ನಾದರೂ, ಸಂಬಂಧ ಪಟ್ಟವರು ನೆಟ್ವರ್ಕ್ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ