ಕಳೆದ ಆಗಸ್ಟ್ 4ರಂದು ಎನ್ಐಎ ಅಧಿಕಾರಿಗಳು ಇದೇ ಮನೆಯ ಮೇಲೆ ದಾಳಿ ನಡೆಸಿ, ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ನನ್ನು ಬಂಧಿಸಿದ್ದರು. ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಮೇಲೆ ಎನ್ಐಎ ಅಧಿಕಾರಿಗಳಿಗೆ ಅನುಮಾನವಿತ್ತು. ಇದೀಗ ಮತ್ತೆ ಅವರ ಮನೆ ಮೇಲೆ ದಾಳಿ ನಡೆಸಿರುವ ಎನ್ಐಎ ಸಿಬ್ಬಂದಿ ದೀಪ್ತಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಉಳ್ಳಾಲದ ಮನೆಯಿಂದ ದೀಪ್ತಿ ಅವರನ್ನು ಟೆಂಪೊ ಟ್ರಾವೆಲರ್ ವಾಹನದಲ್ಲಿ ಕರೆದುಕೊಂಡು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ನೇರವಾಗಿ ದೆಹಲಿಗೆ ಕರೆದೊಯ್ಯಲಿದೆ. ಈ ಹಿಂದೆ ಇದಿನಬ್ಬ ಮನೆಯ ಮೇಲೆ ಎನ್ಐಎ ದಾಳಿ ಮಾಡಿದ್ದಾಗ ಅವರ ಮನೆಯಲ್ಲಿ ಮಗು ಸಣ್ಣದಿರುವ ಕಾರಣ ಬಂಧಿಸಿರಲಿಲ್ಲ.
ಏನಿದು ಪ್ರಕರಣ?
ಮಾಜಿ ಶಾಸಕ ಬಿ.ಎಂ.ಇದಿನಬ್ಬ ಮಗ ಬಿ.ಎಂ.ಬಾಷಾನಿಗೆ ಐಸಿಸ್ ಉಗ್ರರ ಜೊತೆ ನಂಟಿದೆ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಎನ್ಐಎ ಅಧಿಕಾರಿಗಳ ತಂಡ ಉಳ್ಳಾಲದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದರು. ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳು ಅಜ್ಮಲ್ ಕುಟುಂಬ ಮೂರು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿತ್ತು. 2 ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು. ಇವರ ಪೈಕಿ ಅಜ್ಮಲ್ ಕುಟುಂಬವೂ ಇರಬಹುದು ಎಂದು ಶಂಕಿಸಲಾಗಿತ್ತು. ಅಜ್ಮಲ್ಳನ್ನು ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಅವರೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು.
ಈಕೆಯ ಗಂಡ ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗುವುದಾಗಿ ಹೋದವರು ಮತ್ತೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶ್ರೀಲಂಕಾದಿಂದ ಮಸ್ಕತ್ ಹಾಗೂ ಕತಾರ್ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಸಿಸ್ ಸೇರಿದ್ದಾರೆಂಬ ಮಾಹಿತಿ ಇತ್ತು. ವೈದ್ಯರಾಗಿರುವ ಸಿಯಾಝ್‍ನ ಸಹೋದರ ಕೂಡ ಹೆಂಡತಿ ಮತ್ತು ಮಗುವಿನೊಂದಿಗೆ ತೆರಳಿದ್ದ. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಭಾಗವಾಗಿ ಅಜ್ಮಲ್ ಅಜ್ಜ ಇಸ್ಮಾಯಿಲ್ ಬಾಷಾ ಮನೆಯ ಮೇಲೆ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ.
ದೀಪ್ತಿ ಯಾರು.. ಆಕೆ ಮರಿಯಂ ಆಗಿದ್ದು ಹೇಗೆ?
ದೀಪ್ತಿ ಕೇರಳದ ಕಾಸರಗೋಡು ಜಿಲ್ಲೆಯವರು. ಮಂಗಳೂರಿಗೆ ಮೆಡಿಕಲ್ ಓದಲು ಬಂದಿದ್ದಾಗ ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಪುತ್ರ ಬಿ.ಎಂ.ಬಾಷಾರ ಎರಡನೇ ಮಗ ಅನಾಸ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗುವುದಕ್ಕೂ ಮೊದಲು ಹಿಂದು ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತಗೊಂಡಿದ್ದರು.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ
ಇದನ್ನೂ ಓದಿ: ಮಾಜಿ ಶಾಸಕನ ಕುಟುಂಬಕ್ಕೆ ಉಗ್ರರ ನಂಟು? ಬಿಎಂ ಇದಿನಬ್ಬ ಮಗನ ಮನೆ ಮೇಲೆ ಎನ್ಐಎ ದಾಳಿ
ಇದನ್ನೂ ಓದಿ: ಕರಾವಳಿಯಲ್ಲಿ ಶಾಶ್ವತ ಎನ್ಐಎ ಕಚೇರಿ ಸ್ಥಾಪಿಸುವಂತೆ ಭಜರಂಗದಳ ಆಗ್ರಹ